ಶಿವಾನಂದ ಪಿ.ಮಹಾಬಲಶೆಟ್ಟಿಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮುಂಚೆ ಉತ್ತರ ಕರ್ನಾಟಕದ ಪ್ರತಿ ಮನೆಯಲ್ಲಿಯೂ ಮಾದ್ಲಿಯನ್ನು ಆಗಾಗ್ಗೆ ಮಾಡಿಕೊಂಡು ಸವಿಯುತ್ತಿದ್ದರು. ಆದರೆ, ಇಂದಿನ ನವಪೀಳಿಗೆ ಪೌಷ್ಟಿಕವಾದ ಮಾದಲಿ ಬದಲಾಗಿ ನೂಡಲ್ಸ್, ಪಾನಿಪುರಿ, ಸೇವಪುರಿಯಂಥ ಜಂಕ್ ಫುಡ್‌ಗಳಿಗೆ ಜೋತುಬಿದ್ದ ಪರಿಣಾಮ ಮಾದಲಿ ನೇಪಥ್ಯಕ್ಕೆ ಸರಿದು ಕೇವಲ ಸಂಕ್ರಾಂತಿ ಹಬ್ಬಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ. ಆದರೆ, ಈಚೆಗೆ ಜಿಲ್ಲೆಯಲ್ಲಿ ಮಾದಲಿಗೆ ಮತ್ತೆ ಬೇಡಿಕೆ ಬಂದಿದ್ದು, ಬನಹಟ್ಟಿಯ ಬಾಣಸಿಗ(ಅಡುಗೆ ತಯಾರಕ) ರಾಜು ಸಂಗಪ್ಪ ಕಡ್ಲಿ ಎಂಬುವವರ ಮಾದಲಿ ಋಚಿ ಹೆಸರುವಾಸಿಯಾಗಿದೆ. ಜಿಲ್ಲೆ ಸೇರಿದಂತೆ ಹೊರಜಿಲ್ಲೆಗಳ ಪ್ರತಿಯೊಂದು ಜಾತ್ರೆಗಳಿಗೆ ಕ್ವಿಂಟಾಲ್‌ಗಟ್ಟಲೆ ಮಾದಲಿ ಮಾಡಿ ಒದಗಿಸುತ್ತಿದ್ದಾರೆ.
ಒಂದೇ ದಿನ ೧ ಟನ್ ಮಾದಲಿ ಪೂರೈಕೆ: ಹುಬ್ಬಳ್ಳಿಯ ದಾಮನಕಟ್ಟೆ ಹಾಗೂ ಜಮಖಂಡಿಯ ಕೊಣ್ಣೂರ ಗ್ರಾಮದ ದ್ಯಾಮವ್ವನ ಜಾತ್ರೆಗೆ ಭಕ್ತರ ವಿಶೇಷ ಭೋಜನಕ್ಕೆ ತಲಾ ೬ ಕ್ವಿಂಟಾಲ್ ಹಾಗೂ ೪ ಕ್ವಿಂಟಾಲ್‌ನಷ್ಟು ಮಾದಲಿ ತಯಾರಿಸಿ ಕಳಿಸಿರುವುದು ರಾಜು ಕಡ್ಲಿಯ ಹೆಗ್ಗಳಿಕೆಯಾಗಿದೆ.ಮಾದಲಿ ತಯಾರಿ ಹೇಗೆ ? : ಗೋಧಿ, ಕಡ್ಲಿ ಬೇಳೆ, ಅಕ್ಕಿಯ ಮಿಶ್ರಣ, ಬೆಲ್ಲ, ಸಕ್ಕರೆ ಹಾಕಿ ಹಿಟ್ಟು ಮತ್ತು ಬೆಲ್ಲ ಹಾಗೂ ಸಕ್ಕರೆ ಒಂದಾಗುವವರೆಗೆ ಅದನ್ನು ಶುಚಿಯಾದ ಕೈಯಿಂದ ಮಿದ್ದುವರು. ಒಣ ಕೊಬ್ಬರಿ, ಗಸಗಸಿ, ಜಾಜಿಕಾಯಿ ಹಾಕಿ ಮಿಕ್ಸ್ ಮಾಡಲಾಗುತ್ತದೆ. ಇನ್ನು ಮುಂಬಯಿ ಮಾದಲಿ ಮಾಡಲು ಗೋಡಂಬಿ, ಒಣದ್ರಾಕ್ಷಿ, ಕ್ಯಾರಬೀಜ ಮಿಶ್ರಣ ಮಾಡುತ್ತಾರೆ.ಮುಂಬಯಿ ಮಾದಲಿ ಫೇಮಸ್: ಶತಮಾನದ ಹಿಂದಿನಿಂದಲೂ ರಬಕವಿ-ಬನಹಟ್ಟಿಯಲ್ಲಿ ಮಾದಲಿ ತಯಾರಿಸುವುದು ರೂಢಿಯಲ್ಲಿದೆ. ಗೋಡಂಬಿ, ಒಣದ್ರಾಕ್ಷಿ, ಕ್ಯಾರಬೀಜ ಖರೀದಿಸಬೇಕಾದರೆ ಮುಂಬಯಿಗೇ ತೆರಳಬೇಕಾದ ಅನಿವಾರ್ಯತೆಯಿತ್ತು. ಛೋಟಾ ಮುಂಬಯಿ ಎಂದೇ ಖ್ಯಾತಿಯ ರಬಕವಿಯಿಂದ ಮುಂಬಯಿ ಜೊತೆಗೆ ಆಗಿನ ಕಾಲದಲ್ಲಿ ನೇರ ವ್ಯವಹಾರವಿತ್ತು. ರಬಕವಿ ಮೂಲಕ ಖರೀದಿಯಾಗುತ್ತಿದ್ದ ಮತ್ತು ಸುಲಭವಾಗಿ ಒಣ ಹಣ್ಣುಗಳ ಆಮದು ಕಾರಣಕ್ಕೆ ಮುಂಬಯಿ ಮಾದಲಿ ಅಂದಿನಿಂದಲೂ ಪ್ರಸಿದ್ಧಿಯಾಗಿದೆ.
ಮಾದಲಿ ತಯಾರಿಕೆಯಲ್ಲಿ ಹಲವಾರು ವಿಧಗಳಿವೆ. ಸಾಮಾನ್ಯ ಮಾದಲಿ ಪ್ರತಿಕೆಜಿಗೆ ₹ ೧೬೦ ರಿಂದ ಪ್ರಾರಂಭವಾಗಿ ಉತ್ಕೃಷ್ಟವಾದ ಒಣ ಹಣ್ಣುಗಳ ಮಿಶ್ರಣವಿರುವ ಮಾದಲಿ ಕೆ.ಜಿ.ಗೆ ₹ ೩೫೦ವರೆಗೂ ಮಾರಾಟವಾಗುತ್ತದೆ. ನಿಮಗೂ ಬನಹಟ್ಟಿಯ ಶುಚಿ-ರುಚಿ ಪೌಷ್ಟಿಕ ಮಾದಲಿ ಬೇಕಾದರೆ ಒಮ್ಮೆ ೯೧೬೪೧-೬೦೭೭೪ ನಂಬರ್ ಸಂಪರ್ಕಿಸಿ ಆಸ್ವಾದಿಸಬಹುದು.