ಹೆಚ್ಚಿದ ಬಿಸಿಲು: ಈಜುಕೊಳಕ್ಕೆ ಚಿಣ್ಣರ ಲಗ್ಗೆ

KannadaprabhaNewsNetwork |  
Published : Apr 16, 2026, 02:15 AM IST
ಗದಗ ನಗರದಲ್ಲಿರುವ ಈಜುಕೊಳದಲ್ಲಿ ಮಕ್ಕಳು ಬಿಸಿಲ ಪ್ರಖರತೆಗೆ ತಂಪಾದ ನೀರಲ್ಲಿ ಈಜಿ ಸಂಭ್ರಮಿಸುತ್ತಿರುವುದು. | Kannada Prabha

ಸಾರಾಂಶ

ಅವಳಿ ನಗರದಲ್ಲಿರುವ ನಾಲ್ಕು ಈಜುಕೊಳಗಳು ಅಚ್ಚುಕಟ್ಟಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ನೀರಿನ ಗುಣಮಟ್ಟ, ಸಮಯಕ್ಕೆ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಮಹೇಶ ಛಬ್ಬಿ

ಗದಗ: ಬಿರುಬೇಸಿಗೆ ಝಳ ದಿನದಿಂದ ದಿನಕ್ಕೆ ಏರುತ್ತಿದ್ದು, ಬೇಸಿಗೆ ರಜೆ ಹಿನ್ನೆಲೆ ಅವಳಿ ನಗರದ ಈಜುಕೊಳಗಳು ಚಿಣ್ಣರ ನೆಚ್ಚಿನ ತಾಣಗಳಾಗಿದ್ದು, ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳು ಬೆಳಗ್ಗೆ, ಸಂಜೆ ಗುಂಪು, ಗುಂಪಾಗಿ ಈಜುಕೊಳಕ್ಕೆ ಲಗ್ಗೆ ಇಟ್ಟು ಬಿಸಿಲಿನ ಬೇಗೆ ಮರೆತು ಈಜಿ ಸಂಭ್ರಮಿಸುತ್ತಿದ್ದಾರೆ.

ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣ, ನಂದೀಶ್ವರ ನಗರ, ರಾಜೀವ ಗಾಂಧಿ ನಗರ, ಬೆಟಗೇರಿಯ ವಸಂತಸಿಂಗ್‌ ಜಮಾದಾರ ನಗರ ಸೇರಿ ಒಟ್ಟು ನಾಲ್ಕು ಸರ್ಕಾರಿ ಈಜುಕೊಳಗಳಲ್ಲಿ ಸದ್ಯ ಮಕ್ಕಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದು, ಬೆಳಗ್ಗೆ 6ರಿಂದ ಸಂಜೆ 4ರ ವರೆಗೆ ಪುರುಷರಿಗೆ ಹಾಗೂ ಸಂಜೆ 4ರಿಂದ 6ರ ವರೆಗೆ ಮಹಿಳೆಯರಿಗೆ ಅವಕಾಶವಿದೆ.

ಬಿಸಿಗಾಳಿ, ಸೂರ್ಯನ ಪ್ರಖರತೆಗೆ ಬಳಲಿ ಬೆಂಡಾದ ಯುವಕರು, ಮಕ್ಕಳು ಈಜುಕೊಳಗಳಿಗೆ ಮೊರೆ ಹೋಗಿದ್ದು, ಈಜುಕೊಳದಲ್ಲಿ ಈಜಿ ದೇಹ ತಣ್ಣಗಾಗಿಸಲು, ಕೆಲ ಮಕ್ಕಳು ಈಜು ಕಲಿಯಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಪಾಲಕರು ಮಕ್ಕಳ ಆಸಕ್ತಿಗೆ ಪ್ರೋತ್ಸಾಹಿಸಿ, ತರಬೇತಿದಾರರಿಂದ ಈಜು ಕಲಿಸುತ್ತಿದ್ದಾರೆ.

ಈಜು ಆರೋಗ್ಯಕ್ಕೆ ಸಹಕಾರಿ: ಈಜು ದೇಹದ ಸಮತೋಲನ ಕಾಪಾಡಲು, ಶಾರೀರಿಕ ಸಾಮರ್ಥ್ಯ ವೃದ್ಧಿಗೆ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳಿನಿಂದ ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಹೀಗಾಗಿ ಮಕ್ಕಳಿಗೆ ಈಜು ಕಲಿಸುವುದು ಉತ್ತಮ, ಆರೋಗ್ಯಕ್ಕೂ ಸಹಕಾರಿ ಎನ್ನುತ್ತಾರೆ ಪಾಲಕರು.

ಸ್ವಚ್ಛತೆ, ಸುರಕ್ಷತೆಗೆ ಆದ್ಯತೆ: ಅವಳಿ ನಗರದಲ್ಲಿರುವ ನಾಲ್ಕು ಈಜುಕೊಳಗಳು ಅಚ್ಚುಕಟ್ಟಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ನೀರಿನ ಗುಣಮಟ್ಟ, ಸಮಯಕ್ಕೆ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ಜತೆಗೆ ಈಜು ಕಲಿಯುವ ಮಕ್ಕಳಿಗೆ ಲೈಫ್‌ ಜಾಕೆಟ್‌, ಜೀವರಕ್ಷಕ ಸಿಬ್ಬಂದಿ ಸೇರಿದಂತೆ ರಕ್ಷಾ ಕವಚಗಳನ್ನು ನೀಡಲಾಗುತ್ತಿದೆ.

45 ನಿಮಿಷಕ್ಕೆ 50 ರು., ತಿಂಗಳ ಪಾಸಿಗೆ 1000 ರು., ತರಬೇತಿ ಪಡೆಯುವವರೆಗೆ 21 ದಿನಕ್ಕೆ 3000 ರು. ಇದ್ದು, ತರಬೇತಿ ಸೌಲಭ್ಯ ನಂದೀಶ್ವರ ನಗರ ಹಾಗೂ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದ ಈಜುಕೊಳ ಎರಡು ಕಡೆಯಲ್ಲಿ ಇದೆ. ನಾಲ್ಕು ಈಜುಕೊಳಗಳಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಅಂದಾಜು 20 ಸಾವಿರ, ಶನಿವಾರ ದಿನ 30- 35 ಸಾವಿರ ಹಾಗೂ ರಜಾದಿನ, ಭಾನುವಾರಗಳಲ್ಲಿ 50- 60 ಸಾವಿರ ಆದಾಯ ಬರುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಬಿಸಿಗಾಳಿಗೆ ನಲುಗಿದ ಜನ

ಜಿಲ್ಲಾದ್ಯಂತ ಸೂರ್ಯನ ಬಿಸಿಲಿನ ಪ್ರಖರತೆಯೊಂದಿಗೆ ಬಿಸಿಗಾಳಿ ಬೀಸುತ್ತಿದ್ದು, ಜನತೆ ನಿದ್ದೆ, ನೆರಳು ಇಲ್ಲದೇ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಬಿಸಿಲ ಝಳ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಿದ್ದೆ, ನೆರಳಿಗಾಗಿ ಜನ ಪರಿತಪಿಸುತ್ತಿದ್ದು, ದೇಹ ತಂಪಾಗಿಸಲು ಯುವಕರು ಈಜುಕೊಳ, ಕೆರೆ, ಬಾವಿಗಳ ಮೊರೆ ಹೋಗುತ್ತಿದ್ದಾರೆ.

ಸ್ವಚ್ಛತೆಗೆ ಆದ್ಯತೆ: ನಾಲ್ಕು ಈಜುಕೊಳಗಳು ಅಚ್ಚುಕಟ್ಟಾಗಿ ಇದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಒಳ್ಳೆಯ ತರಬೇತಿದಾರರು ಇದ್ದಾರೆ. ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಲ್ಲದೇ, ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳು, ಸಾರ್ವಜನಿಕರು ವಿಶೇಷವಾಗಿ ಉದ್ಯೋಗಸ್ಥರು ಸೇರಿದಂತೆ ನಗರದ ಸುತ್ತಮುತ್ತಲಿನ ಜನರು ಹೆಚ್ಚಾಗಿ ಬರುತ್ತಿದ್ದಾರೆ ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮವೇ ಪ್ರಪಂಚಕ್ಕೆ ಆಧಾರ ನಮ್ಮದು ಮಾತ್ರ ಧರ್ಮ ಉಳಿದವು ಮತಗಳು: ವಿಧುಶೇಖರ ಶ್ರೀಗಳು
ಲ್ಯಾಂಡ್ ಜಿಹಾದ್: ಪ್ರಮೋದ್ ಮುತಾಲಿಕ್ ಆಕ್ರೋಶ