ಹಿರೇಕೆರೂರಿನಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ, ಪಾದಚಾರಿಗಳ ಪರದಾಟ

KannadaprabhaNewsNetwork |  
Published : Jul 31, 2026, 02:00 AM IST
ಹಿರೇಕೆರೂರು ಪಟ್ಟಣದ ಪ್ರಮುಖ ರಸ್ತೆ ಮೇಲೆ ನಿಂತಿರುವ ವಾಹನ ಹಾಗೂ ರಸ್ತೆ ಫುಟ್‌ಬಾತ್ ಮೇಲೆ ಸಾಲಾಗಿ ನಿಂತಿರುವ ಬೈಕ್‌ಗಳು. | Kannada Prabha

ಸಾರಾಂಶ

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣ, ಜನಸಂಖ್ಯೆಗೆ ತಕ್ಕಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮತ್ತು ಸರಕು ಸಾಗಾಣಿಕೆ ವಾಹನ ನಿಲುಗಡೆಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಸವಾರರು ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದಾಗಿ ಪಾದಚಾರಿಗಳು ನಡೆದುಕೊಂಡು ಹೋಗಲು ಸಂಕಷ್ಟ ಅನುಭವಿಸುವಂತಾಗಿದೆ.

ರವಿ ಮೇಗಳಮನಿ

ಕನ್ನಡಪ್ರಭ ವಾರ್ತೆ ಹಿರೇಕೆರೂರು

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣ, ಜನಸಂಖ್ಯೆಗೆ ತಕ್ಕಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮತ್ತು ಸರಕು ಸಾಗಾಣಿಕೆ ವಾಹನ ನಿಲುಗಡೆಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಸವಾರರು ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದಾಗಿ ಪಾದಚಾರಿಗಳು ನಡೆದುಕೊಂಡು ಹೋಗಲು ಸಂಕಷ್ಟ ಅನುಭವಿಸುವಂತಾಗಿದೆ.

ಪಟ್ಟಣದ ಸರ್ವಜ್ಞ ವೃತ್ತದಿಂದ ಚಾವಡಿ ಸರ್ಕಲ್ ರಸ್ತೆ ಮಾರ್ಗದಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಸವಾರರು, ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಪಾದಚಾರಿಗಳಿಗೆ ಮೀಸಲಿಟ್ಟ ಜಾಗ ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದು ಸಮಸ್ಯೆಗೆ ಕಾರಣ. ರಸ್ತೆಗಳಲ್ಲಿ ಪಾದಚಾರಿ ಮಾರ್ಗವನ್ನು ವಾಹನಗಳ ಪಾರ್ಕಿಂಗ್‌ಗೆ ಬಳಸಿಕೊಂಡರೆ, ಕೆಲವು ಕಡೆ ಫುಟ್‌ಪಾತ್‌ಗಳೇ ಇಲ್ಲದಂತಾಗಿದೆ. ಸರ್ವಜ್ಞ ಸರ್ಕಲ್ ಪಟ್ಟಣದ ಪ್ರಮುಖ ವೃತ್ತವಾಗಿದ್ದು, ಪಟ್ಟಣದ ಮುಖ್ಯ ರಸ್ತೆಯ ಎಡ ಹಾಗೂ ಬಲಭಾಗದಲ್ಲಿ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರಕ್ಕೆ ಆಗಮಿಸುವ ಜನರು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದೇ ರಸ್ತೆಯಲ್ಲಿ ಕೆನರಾ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇರುವುದರಿಂದ ಗ್ರಾಹಕರು ನಿತ್ಯ ಬ್ಯಾಂಕ್‌ಗೆ ಆಗಮಿಸುತ್ತಿದ್ದು, ರಸ್ತೆಯಲ್ಲಿ ವಾಹನ ನಿಲುಗಡೆಯಿಂದ ತೊಂದರೆಯಾಗಿದೆ.

ಮುಂದೆಯೇ ತಹಸೀಲ್ದಾರ್ ಕಚೇರಿ, ಬಸ್ ನಿಲ್ದಾಣ, ಪಟ್ಟಣ ಪಂಚಾಯ್ತಿ ಸೇರಿದಂತೆ ಸರ್ಕಾರಿ ಶಾಲಾ-ಕಾಲೇಜುಗಳು ಇವೆ. ಬೆಳಗ್ಗೆ-ಸಂಜೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ವಿವಿಧ ಕೆಲಸಗಳಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿನಿತ್ಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬಸ್ ನಿಲ್ದಾಣದಿಂದ ನಡೆದುಕೊಂಡು ಬರುತ್ತಾರೆ. ರಸ್ತೆಯ ಎರಡು ಬದಿ ಪಾದಚಾರಿಗಳ ಮಾರ್ಗಗಳನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೆ ಸರ್ವಜ್ಞ ವೃತ್ತದ ಬಲಗಡೆ ರಸ್ತೆ ಮಾರ್ಗದಲ್ಲಿ ಶಿರಸಿ, ಶಿರಾಳಕೊಪ್ಪ, ಶಿವಮೊಗ್ಗ, ಸಾಗರ, ಜೋಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆದರೆ ಅದರ ಎಡಗಡೆಗೆ ಚಿಕ್ಕೇರೂರು ಹಂಸಬಾವಿ ಮಾರ್ಗವಾಗಿ ಹಾವೇರಿಗೆ ವಾಹನಗಳು ಸಂಚರಿಸುತ್ತವೆ. ನಿತ್ಯ ಬೆಳಗಿನ ವೇಳೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಗಿರುತ್ತೆದೆ. ಒಂದು ಕಡೆ ಶಾಲಾ ವಿದ್ಯಾರ್ಥಿಗಳು ಬರುತ್ತಿದ್ದರೆ, ಇನ್ನೊಂದು ಕಡೆ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ.

ಬೈಕ್, ಕಾರು, ಬಸ್, ಸರಕು ಸಾಗಣೆ ವಾಹನಗಳು ರಸ್ತೆಯ ಜತೆಗೆ ಪಾದಚಾರಿ ಮಾರ್ಗಗಳನ್ನೂ ಆಕ್ರಮಿಸಿಕೊಳ್ಳುತ್ತವೆ. ಸಣ್ಣಪುಟ್ಟ ವ್ಯಾಪಾರಿಗಳು ನಾಗರಿಕರು ಓಡಾಡುವ ಕಡೆಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಪರಿಣಾಮ ಜನರು ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದಾದ ಮೇಲೊಂದರಂತೆ ವೇಗವಾಗಿ ಮುನ್ನುಗ್ಗುವ ವಾಹನಗಳು ಭಯ ಹುಟ್ಟಿಸುವಂತಿರುತ್ತವೆ. ಬಸ್‌ಗಳು ಮೈಮೇಲೆಯೇ ಬಂದಂತಹ ಅನುಭವವಾಗುತ್ತದೆ. ಎದುರಿನಿಂದ ಬರುವ ವಾಹನಗಳನ್ನು ನೋಡಿಕೊಂಡು ಸಾಗುವುದರ ಜತೆಗೆ ಹಿಂದಿನಿಂದ ಬರುವ ವಾಹನವನ್ನೂ ನೋಡಿಕೊಂಡು ಹೋಗಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಸಂಚಕಾರ ಎನ್ನುತ್ತಾರೆ ಪಾದಚಾರಿ ರಾಜಶೇಖರ್ ದೂದಿಹಳ್ಳಿ.

ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ವಿಶೇಷ ಕಾರ್ಯಾಚರಣೆ ನಡೆಸಬೇಕು. ಮಕ್ಕಳು, ವೃದ್ಧರು ಸೇರಿದಂತೆ ನಾಗರಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಹಿರೇಕೆರೂರು ಸಾರ್ವಜನಿಕರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳೆದು ಹೋದ ಮೊಬೈಲ್ ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸರ ಸಾಧನೆ
ರೈತರ ಹೊಲದಲ್ಲಿ ಧರಣಿ ನಡೆಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್