ಇನ್‌ಕ್ಯುಬೇಷನ್‌ ಸೆಂಟರ್‌ ಮೂಲಕ ಯುವ ಉದ್ಯಮಕ್ಕೆ ಪ್ರೋತ್ಸಾಹ: ಕ್ಯಾ. ಚೌಟ

KannadaprabhaNewsNetwork |  
Published : Mar 03, 2026, 02:30 AM IST
ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡುತ್ತಿರುವುದು  | Kannada Prabha

ಸಾರಾಂಶ

ಎಸ್‌ಸಿ ಎಸ್‌ಟಿ ಯುವ ಉದ್ದಿಮೆದಾರರಿಗೆ ನೆರವಾಗುವ ದಿಶೆಯಲ್ಲಿ ಕೇಂದ್ರ ಸರ್ಕಾರ ಇನ್‌ಕ್ಯುಬೇಷನ್‌ ಸೆಂಟರ್‌ಗಳನ್ನು ತೆರೆದು ಅಲ್ಲಿ ಯಶಸ್ವಿ ಉದ್ಯಮಿಗಳನ್ನು ರೂಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಮಂಗಳೂರು: ಎಸ್‌ಸಿ ಎಸ್‌ಟಿ ಯುವ ಉದ್ದಿಮೆದಾರರಿಗೆ ನೆರವಾಗುವ ದಿಶೆಯಲ್ಲಿ ಕೇಂದ್ರ ಸರ್ಕಾರ ಇನ್‌ಕ್ಯುಬೇಷನ್‌ ಸೆಂಟರ್‌ಗಳನ್ನು ತೆರೆದು ಅಲ್ಲಿ ಯಶಸ್ವಿ ಉದ್ಯಮಿಗಳನ್ನು ರೂಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ. ಎಸ್‌ಸಿ ಎಸ್‌ಟಿ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್‌ ಹಾಗೂ ಬೊಲ್ಪು ಮಂಗಳೂರು ಸಹಭಾಗಿತ್ವದಲ್ಲಿ ಶನಿವಾರ ಇಲ್ಲಿನ ಎಸ್‌ಡಿಎಂ ಕಾನೂನು ವಿದ್ಯಾಲಯದಲ್ಲಿ ನಡೆದ ‘ಪ್ರೇರಣಾ-2026’ ಎಸ್‌ಸಿ-ಎಸ್‌ಟಿ(ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ) ಯುವ ಉದ್ಯಮಶೀಲತಾ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಯ, ಸಂಶಯ, ಆಲಸ್ಯ, ಒತ್ತಡ, ವ್ಯಸನಗಳಿಗೆ ಒಳಗಾಗದೆ ಸಮ ಚಿತ್ತದಿಂದ ನಿರಂತರವಾಗಿ ಚಟುವಟಿಕೆ ನಡೆಸುತ್ತಿರಬೇಕು. ಈ ರೀತಿ ಸ್ಥಿರತೆ ಕಾಪಾಡಿಕೊಂಡರೆ ಮಾತ್ರ ಉದ್ಯಮದಲ್ಲಿ ಯಶಸ್ಸಿ ಗಳಿಸಲು ಸಾಧ್ಯವಿದೆ. ಎಸ್‌ಸಿ ಎಸ್‌ಟಿ ಯುವ ಜನತೆ ಸಮಾಜದ ಮುಖ್ಯವಾಹಿನಿಗೆ ಬಂದರೆ, ಸಮರ್ಥ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಸಮಾವೇಶ ಹಮ್ಮಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕು. ಈ ಮೂಲಕ ದ.ಕ. ಜಿಲ್ಲೆ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಎಸ್‌ಸಿ ಎಸ್‌ಟಿ ಉದ್ಯಮ ಹಬ್‌ ನಿರ್ಮಾಣಕ್ಕೆ ಕಾರಣವಾಗಬೇಕು ಎಂದರು. ಸಮಾವೇಶ ಉದ್ಘಾಟಿಸಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಮಾತನಾಡಿ, ಸ್ವಂತ ಉದ್ದಿಮೆ ಸ್ಥಾಪಿಸುವ ಮೂಲಕ ಎಸ್‌ಸಿ ಎಸ್‌ಟಿ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಸಾಮಾಜಿಕ ಕ್ರಾಂತಿಯ ದ್ಯೋತಕ ಎಂದರು.

ಎಸ್‌ಸಿ ಎಸ್‌ಟಿ ಶಿಕ್ಷಿತರಾದರೆ ಸಮಾಜದಲ್ಲಿ ಆರ್ಥಿಕ ಸಬಲರಾಗಲು ಸಾಧ್ಯವಿದೆ. ಮುಂದಿನ 10 ವರ್ಷಗಳ ಬಳಿಕ ಆದ್ಯತೆಗಳು ಬದಲಾಗಿ ಸರ್ಕಾರಿ ನೇಮಕಾತಿ ವಿರಳವಾಗುವ ಸಂದರ್ಭ ಬಂದರೆ ಅದನ್ನು ಸಮರ್ಥವಾಗಿ ಎದುರಿಸಲು ಆರ್ಥಿಕ ಸ್ವಾವಲಂಬನೆ ಅತ್ಯಗತ್ಯವಾಗಿದೆ ಎಂದರು. ಶಿಕ್ಷಣ ಕ್ಷೇತ್ರದಲ್ಲೂ ಪಠ್ಯ ಕ್ರಮ ಬದಲಾಗಿದ್ದು, ಆರ್ಥಿಕ ಸ್ವಾತಂತ್ರ್ಯದ ಸಬಲೀಕರಣಕ್ಕೆ ಪೂರಕವಾಗಿ ಪಠ್ಯಕ್ರಮಗಳು ರಚನೆಯಾಗುತ್ತಿವೆ. ಸಮಾಜದ ಸವಾಲುಗಳನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಂಡು ಮುನ್ನಡೆಯಬೇಕು ಎಂದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡಿ, ಕೇಂದ್ರ ಸರ್ಕಾರ ಉದ್ದಿಮೆ ಆಸಕ್ತರಿಗೆ ಮುದ್ರಾ ಸಾಲ, ಸ್ಟಾರ್ಟ್‌ಅಪ್‌ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಲು ಯುವ ಜನತೆ ಮುಂದೆ ಬರಬೇಕು. 2026ರಲ್ಲಿ ಎಲ್ಲರಿಗೆ ಸೂರು ಭಾಗ್ಯವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಎಸ್‌ಸಿ ಎಸ್‌ಟಿ ಸಮುದಾಯಕ್ಕೆ 5 ಲಕ್ಷ ರು. ವರೆಗೆ ಮನೆ ನಿರ್ಮಾಣಕ್ಕೆ ನೆರವು ನೀಡಲಿದೆ ಎಂದರು.ಬೆಂಗಳೂರು ದಲಿತ ಉದ್ದಿಮೆದಾರರ ಸಂಘ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸ್‌ ಮಾತನಾಡಿ, ದಲಿತ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ದಿಶೆಯಲ್ಲಿ ನಿವೇಶನ ಹಾಗೂ ಮಳಿಗೆ ನೀಡುವಲ್ಲಿ ಮೀಸಲಾತಿ ಸೌಲಭ್ಯ ಇದೆ. ಪ್ರಸಕ್ತ ಆರು ಸಾವಿರ ಮಂದಿ ದಲಿತರು ಸಬ್ಸಿಡಿ ಸಾಲ ಪಡೆದು ಉದ್ದಿಮೆ ಸ್ಥಾಪಿಸಿ ಕೋಟ್ಯಧಿಪತಿಗಳಾಗಿದ್ದಾರೆ ಎಂದರು. ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಸಿಇಒ ಪೂರಣ್‌ ವರ್ಮಾ ಮಾತನಾಡಿ, 1982ರಲ್ಲಿ ರುಡ್‌ಸೆಟ್ ಸ್ಥಾಪನೆಯಾಗಿ ಸ್ವಉದ್ಯೋಗಕ್ಕೆ ತರಬೇತಿ ನೀಡುತ್ತಿದೆ. ಸ್ವಉದ್ಯೋಗ ಸ್ಥಾಪನೆಗೆ ನೆರವಾಗಲು ಬ್ಯಾಂಕ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಈವರೆಗೆ 6.18 ಲಕ್ಷ ಮಂದಿಗೆ ತರಬೇತಿ ನೀಡಲಾಗಿದ್ದು, 4.50 ಲಕ್ಷ ಮಂದಿ ಅಂದರೆ ಶೇ.70ರಷ್ಟು ಸ್ವಉದ್ಯೋಗ ಮಾಡುತ್ತಿದ್ದಾರೆ. ಹೊಸ ಆಲೋಚನೆ ಮೂಲಕ ಉದ್ಯಮ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು. ಸಾಮರಸ್ಯ ಬೆಂಗಳೂರಿನ ವಾದಿರಾಜ್‌ ಮಾತನಾಡಿ, ಭವಿಷ್ಯದ ಉದ್ಯಮದ ದೃಷ್ಟಿಯಿಂದ ಈ ಕಾರ್ಯಾಗಾರ ಎಸ್‌ಸಿ ಎಸ್‌ಟಿ ಸಮುದಾಯದಲ್ಲಿ ಜಾಗೃತಿ ಮೂಡಿಸಲಿ ಎಂದರು.

ಮಂಗಳೂರಿನ ಎಸ್‌ಸಿ ಎಸ್‌ಟಿ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ ಹೊರತಂದ ‘ಉದ್ಯಮಶೀಲತೆ’ ಸಾಧಕರ ಯಶೋಗಾಥೆಯ ಪುಸ್ತಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಶಿವಪ್ರಸಾದ್‌ ಕೊಕ್ಕಡ ಸ್ವಾಗತಿಸಿದರು. ಭರತ್‌ ಕುಮಾರ್‌ ವಂದಿಸಿದರು. ದಿಶಾ ಶೆಟ್ಟಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖುಮೇನಿಗೆ ಸಿಎಂ ಶ್ರದ್ಧಾಂಜಲಿ ದೇಶಕ್ಕೆ ಅವಮಾನ: ಸುನಿಲ್ ಕುಮಾರ್
ವಿದ್ಯಾಪೋಷಕ್ ಶಿಬಿರದಲ್ಲಿ ಸಾಹಿತಿ ನೇಮಿಚಂದ್ರ ಮಾನವೀಯತೆ