ಉಡುಪಿ: ಉಡುಪಿ ಯಕ್ಷಗಾನ ಕೇಂದ್ರದ ಯೋಜನೆಯಾಗಿರವ ವಿದ್ಯಾಪೋಷಕ್‌ನ ದಾನಿ, ಖ್ಯಾತ ಲೇಖಕಿ ಬೆಂಗಳೂರಿನ ನೇಮಿಚಂದ್ರ ಅವರು ಯಕ್ಷಗಾನ ಯೋಜನೆ ಪ್ರಥಮ ಪಿಯು ಮುಗಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ’ಜೀವನ ವಿದ್ಯಾ’ ಸನಿವಾಸ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಶಿಬಿರಾರ್ಥಿಗಳಿಗೆ ಅಪೂರ್ವ ಜೀವನಾನುಭವವನ್ನು ಧಾರೆ ಎರೆದು, ನಂತರ ಸಂವಾದದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಯಾವುದೇ ಆರ್ಥಿಕ ಪ್ರತಿಫಲ ಅಪೇಕ್ಷಿಸದೆ ಸ್ವಂತ ಖರ್ಚಿನಲ್ಲಿ ಅಷ್ಟು ದೂರದಿಂದ ಬಂದುದಲ್ಲದೆ ಎರುಡು ದಿನ ವಿದ್ಯಾರ್ಥಿಗಳೊಂದಿಗಿದ್ದ ಅವರು ರಾತ್ರಿ ಊಟದ ಅನಂತರ ಶಿಬಿರಾರ್ಥಿಗಳು ಹಂಚಿಕೊಳ್ಳುವ ಸ್ವಕಥನವನ್ನು ರಾತ್ರಿ 12 ಗಂಟೆವರೆಗೂ ಕುಳಿತು ಆಲಿಸಿದರು.
ಈ ಸಂದರ್ಭ ಶ್ರವಣ ತೊಂದರೆ ಇರುವ ರಾಜೇಶ್ವರಿ ಎಂಬ ವಿದ್ಯಾರ್ಥಿನಿಗೆ ಶ್ರವಣ ಸಾಧನದ ಪೂರ್ತಿ ವೆಚ್ಚವನ್ನು ಭರಿಸಿ ಮಾನವೀಯ ಸ್ಪಂದನೆ ಮೆರೆದರು. ಅವರನ್ನು ಸಂಸ್ಥೆ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಫೆ. 23ರಂದು ತಾವೇ ಪ್ರಾಯೋಜಿಸಿದ್ದ ಮನೆಯ ಉದ್ಘಾಟನೆಗೆ ಆಗಮಿಸಿದ್ದ ಬೆಂಗಳೂರಿನ ಎಸ್. ವೆಂಕಟೇಶ-ನಂದಾ ವೆಂಕಟೇಶ ದಂಪತಿಗಳೂ ಎರಡು ದಿನ ಶಿಬಿರದಲ್ಲಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಅವರ ಸ್ವಕಥನ ಆಲಿಸಿ ನೊಂದವರಿಗೆ ಸಾಂತ್ವನ ಹೇಳಿದರು. ಇಂತಹ ಮಹನೀಯರು ಸಂಸ್ಥೆಯ ಮೇಲಿಟ್ಟಿರುವ ಪ್ರೀತಿ-ವಿಶ್ವಾಸವೇ ಕಾರ್‍ಯಕರ್ತರಿಗೆ ಇನ್ನಷ್ಟು ಸ್ಪೂರ್ತಿ ನೀಡಲಿದೆ ಎಂದು ಸಂಸ್ಥೆಯು ಧನ್ಯತಾಭಾವ ಪ್ರಕಟಿಸಿದೆ.