ಉಡುಪಿ: ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ದದಲ್ಲಿ ಹತ್ಯೆಗೀಡಾದ ಇರಾನ್ ಸರ್ವಾಧಿಕಾರಿ ಅಯತುಲ್ಲಾ ಖಮೇನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರದ್ಧಾಂಜಲಿ ಸಲ್ಲಿಸಿರುವುದು ಭಾರತದ ವಿದೇಶಾಂಗ ನೀತಿಗೆ ಮಾಡಿರುವ ಅವಮಾನ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಮುಖ್ಯಮಂತ್ರಿ ಎಚ್ಚರಿಕೆಯ ನಡೆ ಇರಿಸಬೇಕಿತ್ತು, ಈ ಯುದ್ಧದ ಬಗ್ಗೆ ಭಾರತ ಸರ್ಕಾರ ತನ್ನ ವಿದೇಶಾಂಗ ನೀತಿ ಏನು ಅನ್ನುವುದನ್ನು ಪ್ರಕಟ ಮಾಡಿಲ್ಲ, ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಕೇಂದ್ರ ಸರ್ಕಾರದ ನಿಲುವೇನು ಎಂಬುದನ್ನು ಗಮನಿಸಬೇಕಿತ್ತು, ಅದನ್ನು ಬಿಟ್ಟು ಏಕಾಏಕಿ ಖಮೇನಿ ಸಾವಿಗೆ ಸಾರ್ವಜನಿಕವಾಗಿ ಕಣ್ಣೀರು ಸುರಿಸುವುದು, ವೋಟ್ ಬ್ಯಾಂಕ್ ಕಣ್ಮುಂದೆ ಇಟ್ಟುಕೊಂಡು ಮಾತನಾಡುವುದು ಎಷ್ಟು ಸರಿ ಎಂದವರು ಪ್ರಶ್ನಿಸಿದರು. ಇರಾನ್ ನಿಂದ ಲಾಸ್ ಎಂಜಲೀಸ್ ತನಕ ಖಮೇನಿ ಹತ್ಯೆಯನ್ನು ಸಂಭ್ರಮಿಸಲಾಗುತ್ತಿದೆ. ಆದರೆ ಭಾರತ ಅದರಲ್ಲೂ ಕರ್ನಾಟಕದಲ್ಲಿರುವ ಕೆಲವರು ರಸ್ತೆಗೆ ಬಂದು, ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಿದ್ದಾರೆ, ಪೆಹಲ್ಗಾಂ ದಾಳಿಯಲ್ಲಿ ಭಾರತೀಯ ನಾಗರಿಕರು ಸತ್ತಾಗ, ಕಾಶ್ಮೀರದ ಮುಸಲ್ಮಾನರು ರಸ್ತೆಗೆ ಇಳಿಯಲಿಲ್ಲ, ಬಾಂಗ್ಲಾದಲ್ಲಿ ಹಿಂದುಗಳ ನರಮೇಧವಾದಾಗ ಯಾವ ಮುಸಲ್ಮಾನರು ಧರಣಿ ಮಾಡುವುದಿಲ್ಲ, ಇವತ್ತು ಸರ್ವಾಧಿಕಾರಿ ಖಮೇನಿ ಸತ್ತರೆ ಅವರು ರಸ್ತೆಗೆ ಇಳಿದಿದ್ದಾರೆ, ಅವರ ನಿಷ್ಠೆ ಎಲ್ಲಿದೆ ಎಂಬುದನ್ನು ಪ್ರಶ್ನಿಸಬೇಕಾಗಿದೆ. ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಜೊತೆ ನಮ್ಮ ದೇಶದ ವ್ಯಾಪಾರ ವಹಿವಾಟುವಿದೆ, ಇದರ ಹಿನ್ನೆಲೆಯಲ್ಲಿ ದೇಶ ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದೆ, ಆದ್ದರಿಂದ ಭಾರತೀಯರ ನಿಷ್ಠೆ ಭಾರತಕ್ಕೆ ಇರಬೇಕು ವಿನಹ ಇನ್ಯಾವುದೋ ದೇಶಕ್ಕಾಗಿ ಅಲ್ಲ, ಇದು ಬಹಳ ಗಂಭೀರವಾದ ಸಂಗತಿ ಎಂದವರು ಹೇಳಿದರು.