ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ನಗರದ ಮಧ್ಯವರ್ತಿ ಸ್ಥಳದಲ್ಲಿರುವ ನೆಹರು ಮಾರುಕಟ್ಟೆಯ ಕಾಳುಕಡಿ ದಲಾಲಿ ಅಂಗಡಿಗಳನ್ನು ಅಶೋಕ ಸರ್ಕಲ್ ಬಳಿಯ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಕ್ಕೆ ಮುಂದಾಗಿರುವುದು ವರ್ತಕರಲ್ಲಿ ಕಳವಳ ಉಂಟು ಮಾಡಿದೆ.ಅನೇಕ ದಶಕಗಳಿಂದ 85ಕ್ಕೂ ಅಧಿಕ ಕಾಳು-ಕಡಿ ದಲಾಲಿ ವರ್ತಕರು ಇಲ್ಲಿ ವ್ಯಾಪಾರ, ವಹಿವಾಟು ಮಾಡುತ್ತ ಬಂದಿದ್ದಾರೆ. ನಗರದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ತಮ್ಮ ಬೆಳೆಗಳನ್ನು ಇಲ್ಲಿಗೆ ಮಾರಾಟಕ್ಕೆ ತರುವ ರೈತರು, ತಮ್ಮ ದೈನಂದಿನ ಅವಶ್ಯಕತೆಗೆ ಬೇಕಾಗುವ ಸಾಮಗ್ರಿಗಳನ್ನು ತೆಗೆದುಕೊಂಡು ಮರಳುತ್ತಾರೆ. ಅಲ್ಲದೇ ಕೃಷಿ ಕಾಯಕಕ್ಕೆ ಬೇಕಾಗುವ ಹಗ್ಗ, ಮಿಣಿ, ಬುಟ್ಟಿ ಮುಂತಾದ ಸಲಕರಣೆಗಳು, ಮನೆತನಕ್ಕೆ ಬೇಕಾಗುವ ಸಕ್ಕರೆ, ಚಹಾಪುಡಿ, ಎಣ್ಣೆಯಂತಹ ಕಿರಾಣಿ ಸಾಮಾನುಗಳು, ಹಬ್ಬ, ಹರಿದಿನಗಳಿಗೆ ಬೇಕಾಗುವ ಬಟ್ಟೆ ಮುಂತಾದ ಎಲ್ಲ ಸಾಮಗ್ರಿಗಳನ್ನು ಇಲ್ಲಿಂದಲೇ ಕೊಂಡೊಯ್ಯುತ್ತಾರೆ. ಹಿಂದೆಯೂ ಕೇಳಿ ಬಂದಿತ್ತು: ಈ ಮಾರುಕಟ್ಟೆ ಸ್ಥಳಾಂತರದ ಗುಲ್ಲು ನಾಲ್ಕಾರು ದಶಕಗಳ ಹಿಂದೆ ಅಂದಿನ ಎಪಿಎಂಸಿ ಸಚಿವರಾಗಿದ್ದ ಎ.ಬಿ. ಜಕನೂರ ಅವರ ಕಾಲದಲ್ಲೂ ಕೇಳಿಬಂದಿತ್ತು. ಆಗ ವರ್ತಕರು ಹಾಗೂ ರಾಜಕೀಯ ಪ್ರಮುಖರು ಇಲ್ಲಿನ ವಾಸ್ತವ ಸ್ಥಿತಿಗತಿಯನ್ನು ಸಚಿವರಿಗೆ ಮನದಟ್ಟು ಮಾಡಿಸಿ ತಡೆ ಹಿಡಿಸಿದ್ದರು. ಇದೀಗ ಮತ್ತೆ ಸ್ಥಳಾಂತರದ ಗುಮ್ಮ ಎದುರಾಗಿದೆ. ತಮ್ಮ ದೈನಂದಿನ ಬದುಕು ಕಟ್ಟಿಕೊಂಡಿರುವ ಈ ಎಲ್ಲ ಸಣ್ಣ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕುವಂತಾದರೆ, ರೈತರಿಗೆ ತಮ್ಮ ಅವಶ್ಯಕತೆಗಳನ್ನು ಪಡೆಯಲು ಪರದಾಡುವಂತಾಗಲಿದೆ.

ಮೆಗಾ ಮಾರುಕಟ್ಟೆ: ಎಪಿಎಂಸಿ ಪ್ರಾಂಗಣದ ಈಗಿರುವ ಕಟ್ಟಡಗಳಲ್ಲಿ ಸುಮಾರು ಎರಡು ಪಟ್ಟು ದಲ್ಲಾಳಿಗಳ, ಖರೀದಿದಾರರ ಅಂಗಡಿಗಳಿವೆ. ನೆಹರು ಮಾರ್ಕೆಟಿನ ಕೆಲವು ವರ್ತಕರ ಅಂಗಡಿಗಳು ಸಹ ಎಪಿಎಂಸಿಯಲ್ಲಿವೆ. ಒಂದು ಅನಿಸಿಕೆಯಂತೆ ಸ್ವಂತಕ್ಕಿಂತ ಬಾಡಿಗೆದಾರರೆ ಹೆಚ್ಚಿರಬಹುದು ಎನ್ನಲಾಗುತ್ತಿದೆ. ನಗರದ ಹೊರವಲಯ ಹೂಲಿಹಳ್ಳಿ ಬಳಿಯ ಮೆಗಾ ಮಾರುಕಟ್ಟೆಯಲ್ಲಿ ಇಲಾಖೆಯವರು ವರ್ತಕರಿಂದ ಅಳತೆಗೆ ತಕ್ಕಂತೆ ಲಕ್ಷಾಂತರ ರು. ಪಡೆದು ಆರು ತಿಂಗಳುಗಳು ಗತಿಸಿದರೂ ನಿವೇಶನಗಳನ್ನು ಹಸ್ತಾಂತರಿಸಿಲ್ಲ. ಅದರಿಂದ ಅನೇಕ ವರ್ತಕರಿಗೆ ತೊಂದರೆಯಾಗಿದೆ. ಕಾಳು ಕಡಿ ಸೇರಿದಂತೆ ಎಲ್ಲವನ್ನೂ ಮೆಗಾ ಮಾರುಕಟ್ಟೆಗೆ ವರ್ಗಾಯಿಸಲಿ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಸಂಚಾರ ದಟ್ಟಣೆ: ನೆಹರು ಮಾರ್ಕೆಟ್ ಪ್ರದೇಶದಲ್ಲಿನ ಕಾಳು ಕಡಿ ಅಂಗಡಿಗಳನ್ನು ಇಲ್ಲಿಂದ ಸ್ಥಳಾಂತರಿಸಲು ಸಂಚಾರ ದಟ್ಟಣೆ ಕೂಡ ಒಂದು ಪ್ರಮುಖ ಕಾರಣವಾಗಿದೆ. ಇಲ್ಲಿನ ವರ್ತಕರು ರೈತರು ತಂದ ಕೃಷಿ ಉತ್ಪನ್ನಗಳನ್ನು ರಸ್ತೆಯ ಮೇಲೆ ಖರೀದಿಸುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎನ್ನುವುದು ಎಪಿಎಂಸಿ ಅಧಿಕಾರಿಗಳ ವಾದವಾಗಿದೆ. ಎಪಿಎಂಸಿ ಕಾಯ್ದೆಗೆ 7-5-2024ರಂದು ಮಾಡಲಾದ ತಿದ್ದುಪಡಿ ಪ್ರಕಾರ ವರ್ತಕರು ಲೈಸೆನ್ಸ್ ಪಡೆದ ಜಾಗದಲ್ಲಿಯೇ ವ್ಯವಹಾರ ಮಾಡಬೇಕು. ಈ ಹಿನ್ನೆಲೆಯಲ್ಲಿ ನೆಹರು ಮಾರ್ಕೆಟ್ ಪ್ರದೇಶದಲ್ಲಿನ ಕಾಳು ಕಡಿ ವರ್ತಕರಿಗೆ ಎಪಿಎಂಸಿ ಮುಖ್ಯ ಪ್ರಾಂಗಣಕ್ಕೆ ಸ್ಥಳಾಂತರ ಮಾಡುವಂತೆ ಈಗಾಗಲೇ ಮೂರು ಬಾರಿ ನೋಟಿಸು ನೀಡಲಾಗಿದೆ. ಫೆ. 10ರಂದು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ವರ್ತಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾದ ಸಂಧಾನ ಸಭೆಯಲ್ಲಿ ಮಾ. 10ರ ಒಳಗಾಗಿ ಸ್ವಯಂಪ್ರೇರಿತರಾಗಿ ಸ್ಥಳಾಂತರ ಮಾಡುವಂತೆ ತಿಳಿಸಲಾಗಿದೆ. ಮುಂದಿನ ವಾರದಲ್ಲಿ ಪುನಃ ನೋಟಿಸು ನೀಡಲಾಗುವುದು ಎಂದು ರಾಣಿಬೆನ್ನೂರು ಎಪಿಎಂಸಿ ಕಾರ್ಯದರ್ಶಿ ಶೈಲಜಾ ಎಂ.ವಿ. ಹೇಳಿದರು.