ಮಾ. 3ರಂದು ಕುರುಗೋಡು ದೊಡ್ಡ ಬಸವೇಶ್ವರ ಮಹಾ ರಥೋತ್ಸವ

KannadaprabhaNewsNetwork |  
Published : Mar 03, 2026, 02:15 AM IST
ಕುರುಗೋಡು ಪಟ್ಟಣದ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ | Kannada Prabha

ಸಾರಾಂಶ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಪಟ್ಟಣದ ಐತಿಹಾಸಿಕ ಆದಿದೇವ ಶ್ರೀ ದೊಡ್ಡ ಬಸವೇಶ್ವರ ಮಹಾ ರಥೋತ್ಸವ ಮಾ. ೩ರಂದು ಗ್ರಹಣ ಹಿನ್ನೆಲೆಯಲ್ಲಿ ಸಂಜೆಯ ಬದಲು ಮಧ್ಯಾಹ್ನ ೧.೧೫ಕ್ಕೆ ನಡೆಯಲಿದೆ.

ಎನ್. ಪಂಪನಗೌಡ ಬಾದನಹಟ್ಟಿ

ಕುರುಗೋಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಪಟ್ಟಣದ ಐತಿಹಾಸಿಕ ಆದಿದೇವ ಶ್ರೀ ದೊಡ್ಡ ಬಸವೇಶ್ವರ ಮಹಾ ರಥೋತ್ಸವ ಮಾ. ೩ರಂದು ಗ್ರಹಣ ಹಿನ್ನೆಲೆಯಲ್ಲಿ ಸಂಜೆಯ ಬದಲು ಮಧ್ಯಾಹ್ನ ೧.೧೫ಕ್ಕೆ ನಡೆಯಲಿದೆ.

೬೦ ಅಡಿ ಎತ್ತರದ ರಥ ಎಳೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಂಪಿ ವಿರೂಪಾಕ್ಷ ದೇವರಿಗೆ ಎದುರು ಬಸವಣ್ಣ ಎಂದೇ ಪ್ರತೀತಿ ಇರುವ ಕುರುಗೋಡು ಐತಿಹಾಸಿಕ ಶ್ರೀ ದೊಡ್ಡಬಸವೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಈ ಭಾಗದ ಏಕಶಿಲೆಯ ಬೃಹತ್ ನಂದಿ ವಿಗ್ರಹ ಇದಾಗಿದ್ದು, ಆಕಾರಕ್ಕೆ ತಕ್ಕಂತೆ ಉದ್ದವಾದ ಕೋಡುಗಳಿಲ್ಲದೆ, ಕಿರಿದಾದ ಕೋಡುಗಳಿರುವುದರಿಂದ ಈ ಊರಿಗೆ ಆಡುಮಾತಿನಲ್ಲಿ ಕುರುಗೋಡು ಆಯಿತೆಂದು ಹೇಳಲಾಗುತ್ತದೆ.

ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ದೊಡ್ಡಬಸವೇಶ್ವರ ರಥೋತ್ಸವ ನಡೆಯುತ್ತದೆ. ನಾಡಿನಾದ್ಯಂತ ಜನತೆ ಹೋಳಿ ಹಬ್ಬದಲ್ಲಿ ತಲ್ಲೀನರಾಗಿರುವಾಗ ಇಲ್ಲಿಯ ಜನರು ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಜ್ಯ, ಹೊರರಾಜ್ಯವಾದ ಆಂಧ್ರ ಮತ್ತು ತಮಿಳುನಾಡಿನಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಸುತ್ತಲೂರಿನ ೩೩ ಗ್ರಾಮಗಳಿಂದ ಪಾದಯಾತ್ರೆಯಲ್ಲಿ ಕೆಲವು ಭಕ್ತರು ಬರುತ್ತಾರೆ. ಬಂಡಿ, ಟ್ರ್ಯಾಕ್ಟರ್‌, ದ್ವಿಚಕ್ರ ವಾಹನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಈ ವರ್ಷ ಮಹಾಶಿವರಾತ್ರಿಯಂದು ರಥದ ಗಡ್ಡೆಯನ್ನು ತೇರಿನ ಮನೆಯಿಂದ ಹೊರತೆಗೆಯುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಶ್ರೀ ದೊಡ್ಡಬಸವೇಶ್ವರ ಸ್ವಾಮಿ ಮತ್ತು ನೀಲಮ್ಮ ತಾಯಿಗೆ ಕಂಕಣಧಾರಣೆ, ಫೆ. ೨೪ರಂದು ನಾಗಾಭರಣ ವಾಹನೋತ್ಸವ, ಫೆ. ೨೫ರಂದು ನವಿಲು ವಾಹನೋತ್ಸವ, ಫೆ. ೨೬ರಂದು ಸಿಂಹವಾಹನೋತ್ಸವ, ಫೆ. ೨೭ರಂದು ಅಶ್ವವಾಹನೋತ್ಸವ, ಫೆ. ೨೮ರಂದು ಬಿಳಿ ಬಸವಣ್ಣ ವಾಹನೋತ್ಸವ, ಮಾ. ೧ರಂದು ನೀಲಮ್ಮ ತಾಯಿಗೆ ಉಡಿತುಂಬುವ ಕಾರ್ಯಕ್ರಮ, ಮಾ. ೨ರಂದು ಗಜವಾಹನೋತ್ಸವ ಕಾರ್ಯಕ್ರಮ ನಡೆಯಿತು. ಮಾ. ೩ರಂದು ಮಧ್ಯಾಹ್ನ ೧.೧೫ಕ್ಕೆ ಮಹಾ ರಥೋತ್ಸವ, ಮಾ. ೪ರಂದು ರಾತ್ರಿ ೧೦.೩೦ಕ್ಕೆ ಲಂಕೆ ಸುಡುವುದು ಮತ್ತು ದೊಡ್ಡಬಸವೇಶ್ವರ ಸ್ವಾಮಿ ಮತ್ತು ನೀಲಮ್ಮ ತಾಯಿಯ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ಜರುಗುತ್ತವೆ.

ದೇವಸ್ಥಾನ ಮತ್ತು ರಥ ನಿರ್ಮಾಣದ ಕಾರ್ಯಕ್ರಮಗಳಲ್ಲಿ ಪ್ರತಿಯೊಂದು ಜನಾಂಗದವರು ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತ, ಜವಾಬ್ದಾರಿ ನಿರ್ವಹಿಸುತ್ತಾರೆ. ಬೋವಿ ಜನಾಂಗದವರು ರಥ ಹೊರತೆಗೆಯುತ್ತಾರೆ ಮತ್ತು ಅಲಂಕಾರದ ಜವಾಬ್ದಾರಿ ವಿಶ್ವಕರ್ಮ ಜನಾಂಗದವರು ಮಾಡುತ್ತಾರೆ. ಸುಮಾರು ೬೦ ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಬಣ್ಣ ಬಣ್ಣದ ಬಟ್ಟೆ, ಹೂವು, ಕಾಗದ, ಗೊಂಬೆ ಮತ್ತು ತಳಿರು ತೋರಣಗಳಿಂದ ಅಲಂಕೃತಗೊಳಿಸುತ್ತಾರೆ. ಜಾತ್ರೆಯಿಂದ ಇಂದಿಗೂ ಇಲ್ಲಿ ಜನಪದ ಸಂಪ್ರದಾಯ ಉಳಿದುಕೊಂಡು ಬಂದಿದೆ.

ಜಾತ್ರೆ ನಡೆಯುವ ತಾಲೂಕಿನ ಗ್ರಾಮದ ಕೆರೆಕೆರೆ, ಮುಷ್ಟಗಟ್ಟೆ, ಸೋಮಲಾಪುರ ಗ್ರಾಮಗಳ ಕಟ್ಟೆಮನೆ ನಾಯಕ ಜನಾಂಗದವರು ಜಾತ್ರೆಯ ಹಿಂದಿನ ದಿನದಿಂದಲೇ ಉಪವಾಸವಿದ್ದು, ಬೆಳಗ್ಗೆ ಎದ್ದು ಶ್ರದ್ಧಾ-ಭಕ್ತಿಯಿಂದ ಬರಿಗಾಲಿನಲ್ಲಿ ತಮ್ಮ ತಮ್ಮ ಊರುಗಳಿಂದ ನಡೆದುಕೊಂಡು ಬಂದು “ದೂಳುಗಾಯಿ” ಒಡೆದು, ಕುಂಭವನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಅರ್ಪಿಸಿ, ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ.

ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಧಾರ್ಮಿಕ ದತ್ತಿ ಇಲಾಖೆ ಪಕ್ಕದ ರೈತ ಸಮುದಾಯ ಭವನದಲ್ಲಿ ಅನ್ನದಾಸೋಹ ಹಮ್ಮಿಕೊಂಡಿದೆ. ದೇವಸ್ಥಾನಕ್ಕೆ ಸುಣ್ಣ ಬಣ್ಣ ಹಚ್ಚಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದೇವಸ್ಥಾನದ ಹೊರಗೆ ಮತ್ತು ರೈತ ಸಮುದಾಯ ಭವನದ ಪಕ್ಕದಲ್ಲಿ ಒಟ್ಟು ೩೦ಕ್ಕೂ ಹೆಚ್ಚು ಸಾರ್ವಜನಿಕ ನಲ್ಲಿ ನಿರ್ಮಿಸಲಾಗಿದೆ. ಭಕ್ತರ ರಕ್ಷಣೆಗೆ ಪಟ್ಟಣದ ದೇವಸ್ಥಾನದ ಪ್ರದೇಶದಲ್ಲಿ 40 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಧರ್ಮದ ಶ್ರೇಷ್ಠತೆ ಸಾರಿದ ರೇಣುಕಾಚಾರ್ಯರು: ಟಿ.ಎಂ. ಶಿವಕುಮಾರ್
ಮೂಲ ಸೌಕರ್ಯ ಸುಧಾರಣೆಗೆ ರಾಜ್ಯ ಸರ್ಕಾರ ಆದ್ಯತೆ: ಶಾಸಕ ಜಿ.ಎಸ್. ಪಾಟೀಲ