ಕನ್ನಡಪ್ರಭ ವಾರ್ತೆ ವಿಜಯಪುರ
ಈ ವೇಳೆ ಹೋರಾಟ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಸೂಕ್ತ ಸುಮಾರು 149 ಎಕರೆಗೂ ಹೆಚ್ಚು ಸ್ಥಳಾವಕಾಶ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿದೆ. ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯೂ ಇದೆ. ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಇಲ್ಲ. ಪಿಪಿಪಿ ಮಾದರಿಯನ್ನು ವಿಜಯಪುರಕ್ಕೆ ತರಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಣ್ಣರಾಯ ಈಳಗೇರ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಆರಂಭವಾದರೆ ಅಲ್ಲಿ ಬಡ ಮತ್ತು ಮಧ್ಯಮ ವರ್ಗದ ಹಾಗೂ ಜನಸಾಮಾನ್ಯರ ಮಕ್ಕಳು ಕಲಿಯಲು ಸಾಧ್ಯವಾಗುವುದಿಲ್ಲ. ನಾವೆಲ್ಲರೂ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಅಣಿಯಾಗಬೇಕಿದೆ ಎಂದು ತಿಳಿಸಿದರು.ಜಗದೀಶ ಸೂರ್ಯವಂಶಿ ಮಾತನಾಡಿ, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಸೂಕ್ತ ಜಾಗವಿರುವ ಏಕೈಕ ಜಿಲ್ಲೆ ಇದಾಗಿದ್ದು, ವಿದ್ಯಾರ್ಥಿಗಳು, ಯುವಕರು ಇದರ ವಿರುದ್ದ ಗಟ್ಟಿ ದ್ವನಿಯಾಗಬೇಕು. ಒಂದು ವೇಳೆ ಖಾಸಗಿಯವರಿಗೆ ಅವಕಾಶ ಕೊಟ್ಟರೆ ಜಿಲ್ಲಾ ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದರು.ಸುರೇಶ ಬಿಜಾಪುರ ಮಾತನಾಡಿ, ವಿಜಯಪುರ ಜಿಲ್ಲೆಯ ಜನರು ಉದ್ದೇಶಿತ ಖಾಸಗಿ ಸಹಭಾಗಿತ್ವದಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದನ್ನು ತೀವ್ರವಾಗಿ ವಿರೋಧಿಸಿ ಹೋರಾಟವನ್ನು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಸಂಘ ಸಂಸ್ಥೆಗಳು ತೀವ್ರ ಪ್ರತಿರೋಧವನ್ನು ತೋರಿಸಿದ್ದು, ಕೆಲವು ಜನಪ್ರತಿನಿಧಿಗಳು ಪಬ್ಲಿಕ್ ಪ್ರೈವೇಟ್ ಪಾರ್ಟನರ್ಶಿಪ್ ಮಾದರಿಯನ್ನು ವಿರೋಧಿಸಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರ ಹಠಾತ್ ಆಗಿ ಪಿಪಿಪಿ ಯೋಜನೆ ಅನುಷ್ಠಾನಗೊಳಿಸಲು ನೋಡಲ್ ಅಧಿಕಾರಿ ನೇಮಕ ಮಾಡಿದ್ದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ವಿದ್ಯಾವತಿ ಅಂಕಲಗಿ ಮಾತನಾಡಿ, ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯನ್ನು ಅಳವಡಿಸಲು ಬಿಡಬಾರದು. ಇದರ ವಿರುದ್ದ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.