ಜಿಲ್ಲೆಯ ಕೊರಟಗೆರೆ ತಾಲೂಕಿಗಿಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ ದಿಢೀರ್ ಭೇಟಿ ನೀಡಿ, ವಿಬಿ-ಜಿ ರಾಮ್ ಜಿ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಕೊರಟಗೆರೆ ತಾಲೂಕಿಗಿಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ ದಿಢೀರ್ ಭೇಟಿ ನೀಡಿ, ವಿಬಿ-ಜಿ ರಾಮ್ ಜಿ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಪರಿಶೀಲಿಸಿದರು.ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರಹಳ್ಳಿ ಗ್ರಾಮದ ರಾಮಯ್ಯ ಅವರ ಜಮೀನಿನಿಂದ ವೀರ ಚೌಡಪ್ಪನ ಜಮೀನಿನವರೆಗೆ ಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರುವಿಬಿ-ಜಿ ರಾಮ್ ಜಿ ಯೋಜನೆಯಡಿ ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 125 ದಿನಗಳ ಕೂಲಿ ಕೆಲಸ ನೀಡಲಾಗುತ್ತಿದೆ. ಪುರುಷರು ಹಾಗೂ ಮಹಿಳೆಯರಿಗೆ ಸಮಾನವಾಗಿ ದಿನಕ್ಕೆ 382 ರು.ಗಳ ಕೂಲಿ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನತೆ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಸಲಹೆ ನೀಡಿದರು.

ಇದೇ ವೇಳೆ ಸ್ಥಳದಲ್ಲಿಯೇ ಹಾಜರಿದ್ದ ಕೊರಟಗೆರೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅಪೂರ್ವ ಸಿ. ಅನಂತರಾಮು ಹಾಗೂ ಸಹಾಯಕ ನಿರ್ದೇಶಕ ಎಂ.ಬಿ.ಗುರುಮೂರ್ತಿ, ತಾಂತ್ರಿಕ ಸಂಯೋಜಕ ಮಧು ಕೆ.ಎಸ್. ಹಾಗೂ ತಾಂತ್ರಿಕ ಸಹಾಯಕಿ ಹರ್ಷಿತಾ ಅವರೊಂದಿಗೆ ಕಾಮಗಾರಿ ಕುರಿತು ಚರ್ಚಿಸಿ, ಕಾಮಗಾರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಸರ್ಕಾರಿ ಶಾಲೆಗೆ ಭೇಟಿ ದೊಡ್ಡಸಾಗ್ಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ ಅವರು, ಶಾಲಾ ಆವರಣದಲ್ಲಿ ಅನುಷ್ಠಾನಗೊಳಿಸಲಾದ ವಾಲಿಬಾಲ್ ಹಾಗೂ ಬ್ಯಾಸ್ಕೆಟ್‌ಬಾಲ್ ಆಟದ ಮೈದಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಶಾಲಾ ತರಗತಿಗಳಿಗೆ ಭೇಟಿ ನೀಡಿದ ಸಿಇಒ ಅವರು, ಮಕ್ಕಳ ಇ-ಹಾಜರಾತಿ, ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿ, ಶಾಲಾ ಮುಖ್ಯೋಪಾಧ್ಯಾಯರಿಗೆ ಇ-ಹಾಜರಾತಿಯನ್ನು ನಿತ್ಯ ಪಡೆಯುವಂತೆ ಸೂಚನೆ ನೀಡಿದರು. ಇದೇ ವೇಳೆ ಶಾಲಾ ಮಕ್ಕಳೊಂದಿಗೆ ಕೆಲಕಾಲ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜು, ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಜರಿದ್ದರು.