ವಿವಿಧ ಬೇಡಿಕೆ ಈಡೇರಿಸಲು ಆಗ್ರಹ । ನಗರಸಭೆ ಎದುರು ಧರಣಿ । ಕೆಲಸಕ್ಕೆ ಗೈರಾಗಿ ಆಕ್ರೋಶ । ಶೀಘ್ರ ಕ್ರಮಕ್ಕೆ ಒತ್ತಾಯ
ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಸೇವಾ ನೌಕರರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಿಕ್ಕಮಗಳೂರು ನಗರಸಭೆ ಎದುರು ಮಂಗಳವಾರದಿಂದ ಅನಿರ್ದಿಷ್ಟಾವಧಿಯ ಮುಷ್ಕರವನ್ನು ಆರಂಭಿಸಿದ್ದಾರೆ.
ರಾಜ್ಯ ಪೌರ ಸೇವಾ ನೌಕರರ ಸಂಘದ ಕರೆಯ ಮೇರೆಗೆ ಮಂಗಳವಾರದಿಂದ ಧರಣಿ ಕೈಗೊಂಡಿರುವ ಪೌರ ಸೇವಾ ನೌಕರರು ಮೊದಲ ದಿನ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಇದೇ ವೇಳೆ ಮಾತನಾಡಿದ ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಣ್ಣಯ್ಯ, ಪಂಚಾಯತ್ ರಾಜ್ ಇಲಾಖೆಯ ನೌಕರರಂತೆ ನಮ್ಮನ್ನು ಕೂಡ ಅದೇ ಮಾದರಿಯಲ್ಲಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಕೆಜಿಐಡಿ ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುತ್ತಿರುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವ ತೀರ್ಮಾನ ಕೈಗೊಂಡು ಭರವಸೆ ನೀಡಿದರೆ ಮುಷ್ಕರವನ್ನು ವಾಪಸ್ ಪಡೆಯುತ್ತೇವೆ. ಇಲ್ಲದಿದ್ದರೆ ಮುಷ್ಕರವನ್ನು ತೀವ್ರತರದಲ್ಲಿ ಮುಂದುವರಿಸುತ್ತೇವೆಂದು ಎಚ್ಚರಿಸಿದ ಅವರು, ಈ ಸಂಬಂಧ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ 45 ದಿನಗಳ ಗಡುವು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲದ ಹಿನ್ನೆಲೆಯಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆಂದರು.
ತಮ್ಮ ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಮುಂದುವರಿಸುತ್ತೇವೆ, ಸರ್ಕಾರ ಈ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಸೂಕ್ತ ಕ್ರಮ ಕೈಗೊಂಡು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಪೌರಸೇವಾ ನೌಕರರಿಗೆ ಆರೋಗ್ಯ ವಿಮೆ ನೀಡದೆ ಸರ್ಕಾರ ತಾತ್ಸಾರ ಮನೋಭಾವ ತಾಳುತ್ತಿದೆ. ಕೂಡಲೇ ಪೌರ ನೌಕರರಿಗೆ ಕೆಜಿಐಡಿ ಸೌಲಭ್ಯ ನೀಡಿ ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿದರು.