ಸಿದ್ದಾಪುರ: ಸ್ವಾತಂತ್ರ‍್ಯ ದೊರೆತು ೭೭ ವರ್ಷ ಕಳೆದರೂ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ಸಿದ್ದಾಪುರ ತಾಲೂಕಿನಲ್ಲಿ ಸ್ವಾತಂತ್ರ‍್ಯ ಭವನ ನಿರ್ಮಾಣವಾಗದಿರುವುದು ದುಃಖದ ಸಂಗತಿ ಎಂದು ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಹೇಳಿದರು.
ಪಟ್ಟಣದ ಶಂಕರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ೨೫ ವರ್ಷಗಳ ಹಿಂದೆಯೇ ಸ್ವಾತಂತ್ರ ಭವನ ನಿರ್ಮಾಣವಾಗಿದೆ. ಅಲ್ಲಿನ ಜನರ ಒಗ್ಗಟ್ಟು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದೆ. ಇಂದಿನ ಯುವ ಪೀಳಿಗೆ ಹೆಚ್ಚಾಗಿ ಪಟ್ಟಣಗಳತ್ತ ಮುಖ ಮಾಡಿದ್ದು, ಅವರಿಗೆ ನಮ್ಮ ಪೂರ್ವಜರು ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಚಿತ್ರಣದ ಪರಿಚಯವಿಲ್ಲ. ಸರ್ವಸ್ವವನ್ನು ತ್ಯಾಗ ಮಾಡಿ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಯೋಧರ ನೆನಪಿಗಾಗಿ ತಾಲೂಕಿನಲ್ಲಿಯೂ ಸ್ವಾತಂತ್ರ ಭವನ ನಿರ್ಮಾಣವಾಗಬೇಕು ಎಂದರು.ತಾಲೂಕಿನ ಸ್ವಾತಂತ್ರ‍್ಯ ಯೋಧರ ಕುಟುಂಬದವರೆಲ್ಲರೂ ಒಗ್ಗೂಡಿ ಆ.3ರಂದು ಸ್ವಾತಂತ್ರ ಯೋಧರ ಕುಟುಂಬದ ಸಂಘಟನೆಯೊಂದನ್ನು ಆರಂಭಿಸಲಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ‍್ಯ ಯೋಧರ ಕುಟುಂಬದವರು ಮತ್ತು ದೇಶಾಭಿಮಾನಿಗಳು ಪಾಲ್ಗೊಳ್ಳಬೇಕೆಂದು ಆಗ್ರಹ ಪೂರ್ವಕವಾಗಿ ಕೋರಿಕೊಳ್ಳುತ್ತೇನೆ ಎಂದರು.
ಸಂಘಟನೆಯ ಸಂಚಾಲಕ ಪತ್ರಕರ್ತ ನಾಗರಾಜ್ ಭಟ್ಟ ಮಾತನಾಡಿ, ತಾಲೂಕಿನ ಸ್ವಾತಂತ್ರ‍್ಯ ಹೋರಾಟಗಾರರ ಚರಿತ್ರೆ ಇತಿಹಾಸಗಳಲ್ಲಿ ಉಲ್ಲೇಖವಾಗಿಲ್ಲ. ಇಚ್ಛಾಶಕ್ತಿಯ ಕೊರತೆಯಿಂದ ಅಥವಾ ಸಂಘಟನೆಯ ಕೊರತೆಯಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ ಸ್ವಾತಂತ್ರ‍್ಯ ಯೋಧರನ್ನು ನೆನಪಿಸಿಕೊಳ್ಳುವಂತಹ ಯಾವುದೇ ಕಟ್ಟಡಗಳಾಗಲಿ, ಭವನಗಳಾಗಲಿ ನಿರ್ಮಾಣವಾಗಿಲ್ಲ. ಅಂಥ ಭವನದ ನಿರ್ಮಾಣ ಸ್ವಾತಂತ್ರ ಯೋಧರ ಕುಟುಂಬಸ್ಥರ ಜವಾಬ್ದಾರಿಯಾಗಿದೆ. ಈ ಹೋರಾಟಕ್ಕೆ ಸರಿಯಾದ ರೂಪ ನೀಡುವ ಉದ್ದೇಶದಿಂದ ಆ.3ರಂದು ಸ್ವಾತಂತ್ರ ಯೋಧರ ವಂಶಸ್ಥರ ಸಂಘಟನೆಗೆ ಚಾಲನೆ ನೀಡಲಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಹೆಗಡೆ ನೇರ್ಲಮನೆ, ಪಿ.ಎಸ್. ಭಟ್ ಮುತ್ತಿಗೆ, ಭಾಸ್ಕರ ಹೆಗಡೆ ಕೊಡಗಿಬೈಲ್, ಗಣಪತಿ ಭಟ್ ಕೆರೆಹೊಂಡ, ವಾಸುದೇವ ಬಿಳಗಿ, ಶ್ರೀಧರ ಹೆಗಡೆ ಹರಗಿ, ರಾಘವೇಂದ್ರ ಹೆಗಡೆ ಕೊರ್ಲಕೈ, ಪುರುಷೋತ್ತಮ ಹೆಗಡೆ ಮುಗದೂರು, ಗುರುರಾಜ ಶಾನಭಾಗ್ ಇದ್ದರು.