ಕನ್ನಡಪ್ರಭ ವಾರ್ತೆ ಮಡಿಕೇರಿ
ನಮ್ಮ ನಮ್ಮ ಸಂಸ್ಕೃತಿ, ಪರಂಪರೆಯನ್ನು ಸಂರಕ್ಷಣೆ ಮಾಡುವುದರ ಜತೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.ನಗರದ ಕಾವೇರಿ ಹಾಲ್‌ದ ಸಭಾಂಗಣದಲ್ಲಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಓಣಾಘೋಷಂ ಓಣಂಸದ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕರಾವಳಿ ಭಾಗದ ಸಂಸ್ಕೃತಿಗಳು ಎಲ್ಲರಿಗೂ ಮಾದರಿಯಾಗಿದೆ. ಅದೇ ರೀತಿ, ಭಾರತ ಹಲವು ಸಂಸ್ಕೃತಿ ಇರುವ ದೇಶವಾಗಿದ್ದು, ಹಲವು ಸಂಸ್ಕೃತಿ ಮತ್ತು ಪರಂಪರೆಯಿಂದ ಭಾರತ ಗುರುತಿಸಿಕೊಂಡಿದೆ. ಅದೇ ರೀತಿ ಇಂದು ಧರ್ಮದ ರಕ್ಷಣೆ ಅಗತ್ಯವಾಗಿದ್ದು, ಸಮಾಜಬಾಂಧವರು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದರು.ಮೈಸೂರು ಸಂಸ್ಥಾನ ಮತ್ತು ಕೇರಳ ರಾಜ್ಯಕ್ಕೆ ಅವಿನಾಭಾವ ಸಂಬಂಧವಿತ್ತು. ಬ್ರಿಟಿಷರ ಕಾಲದಲ್ಲಿ ವಿವಿಧ ರಾಜಮನೆತನಗಳು ಇತ್ತು. ಆ ಸಂದರ್ಭದಲ್ಲಿ ಕೊಚ್ಚಿನ್, ತಿರುವನಂತಪುರಂನಲ್ಲಿ ಕೆಲವು ರಾಜರಿದ್ದರು. ಅವರು ತರಬೇತಿ ಪಡೆಯಲು ಕೇರಳದಿಂದ ಮೈಸೂರಿಗೆ, ಮೈಸೂರಿನಿಂದ ಕೇರಳಕ್ಕೆ ಮೈಸೂರು ಸಂಸ್ಥಾನದವರು ಹೋಗುತ್ತಿದ್ದರು. ತಿರುವಾಂಕೂರಿನ ಕೊನೆಯ ರಾಜ ಮೈಸೂರಿಗೆ ಆಗಮಿಸಿ ತರಬೇತಿ ಪಡೆದು ಮಾದರಿ ಸಂಸ್ಥಾನವನ್ನು ಮಾಡಿದರು ಎಂದು ಸ್ಮರಿಸಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರೀತಿ, ವಾತ್ಸಲ್ಯ ಜತೆಗೆ ಎಲ್ಲರನ್ನು ಒಂದೇ ರೀತಿ ಕಾಣುವುದೇ ಓಣಂ ಹಬ್ಬ. ಓಣಂ ಕೇರಳ ರಾಜ್ಯದ ವಿಶಿಷ್ಟ ಹಾಗೂ ಪವಿತ್ರವಾದ ಹಬ್ಬವನ್ನು ಕೊಡಗು ಜಿಲ್ಲೆಯಲ್ಲಿ ತಲೆತಲಾಂತರದಿಂದ ಆಚರಿಸಲಾಗುತ್ತಿದೆ. ಆಚರಣೆ ಮೂಲಕ ಸಮಾಜದವರನ್ನು ಸಂಘಟನೆ ಮಾಡಲಾಗುತ್ತಿರುವುದು ಶ್ಲಾಘನೀಯ ಎಂದರು.ಹಿಂದೂ ಸಮಾಜ ಎನ್ನುವಂತದ್ದು ಬೇರೆ ಬೇರೆ ಆಚಾರ ವಿಚಾರ, ಸಂಸ್ಕೃತಿಯನ್ನು ಹೊಂದಿರುವ ವಿಶಿಷ್ಟ ಪೂರ್ಣವಾದ ಧರ್ಮವಾಗಿದೆ. ಇಂದು ಸಂಘಟನೆಯಲ್ಲಿ ಗಟ್ಟಿಯಾಗಿದ್ದರೆ ಸಮಾಜ ಗಟ್ಟಿಯಾಗಿರುತ್ತದೆ. ಸಮಾಜ ಗಟ್ಟಿಯಾದರೆ ದೇಶಗಟ್ಟಿಯಾಗುತ್ತದೆ ಎಂದ ಅವರು, ಒಗ್ಗಟ್ಟು ಇದ್ದರೆ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ ಎಂದರು.
ಓಣಂ ಘೋಷಂ ಓಣಂ ಸದ್ಯ ಆಚರಿಸುವ ಮೂಲಕ ಹಿಂದೂ ಮಲಯಾಳಿ ಸಮಾಜದ ಆಚಾರ ವಿಚಾರವನ್ನು ಉಳಿಸಿ ಬೆಳಸುವ ಕೆಲಸವಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಹಿಂದೂ ಮಲಯಾಳಿ ಸಮುದಾಯ ಬಾಂಧವರು ಪ್ರಾಮಾಣಿಕತೆ, ನಿಷ್ಠೆಯನ್ನು ಎಲ್ಲರೂ ಮೆಚ್ಚುವಂತೆ ಜಿಲ್ಲೆಯಲ್ಲಿ ಜೀವನ ಸಾಗಿಸುತ್ತಿದ್ದು, ಅಂತೆಯೇ ಮುಂದುವರಿಯಲಿ ಎಂದರು.ಸಮುದಾಯ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದ ಅವರು, ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ಕಾರಣ, ಇಂದು ಬುದ್ಧಿವಂತಿಕೆಯು ದೇಶಕ್ಕೆ ಕೀರ್ತಿ ತಂದಿದ್ದು, ಇದರಿಂದ ಮಕ್ಕಳು ವಂಚಿತರಾಗದಂತೆ ಎಚ್ಚರವಹಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿಂದೂ ಮಲಯಾಳಿ ಸಂಘ ಅಧ್ಯಕ್ಷ ಕೆ.ವಿ.ಧಮೇಂದ್ರ ಮಾತನಾಡಿ, ಮಲಯಾಳಿಗಳ ಸಂಸ್ಕೃತಿ ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಸಮಾಜ ಬಾಂಧವರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಛದ್ಮವೇಷ ಸ್ಪರ್ಧೆ, ಪೂಕಳಂ ಸ್ಪರ್ಧೆ ನಡೆಯಿತು. ಓಣಾಘೋಷಂ ಓಣಂಸದ್ಯದಲ್ಲಿ ಮಾವೇಲಿ ಹಾಗೂ ಚಂಡೆ ವಾದ್ಯ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ಸ್ಥಾಪಕ ಅಧ್ಯಕ್ಷ ಕೆ.ಎಸ್.ರಮೇಶ್, ಸಂಘದ ಉಪಾಧ್ಯಕ್ಷ ವಿಜಯ್ ಕುಮಾರ್, ಪ್ರಚಾರ ಸಮಿತಿ ಸಂಚಾಲಕ ರವಿ ಅಪ್ಪುಕುಟ್ಟನ್, ಗೌರವ ಸಲಹೆಗಾರರಾದ ಪಿ.ಟಿ.ಉಣ್ಣಿಕೃಷ್ಣ, ಟಿ.ಆರ್.ವಾಸುದೇವ್ ಹಾಗೂ ತಾಲೂಕು ಸಂಘಗಳ ಅಧ್ಯಕ್ಷರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.