ಶಾಂತಿಯಲ್ಲಿ ಭಾರತ ವಿಶ್ವಕ್ಕೇ ಮಾದರಿ: ನಿಂಗರಾಜ್‌ಗೌಡ

KannadaprabhaNewsNetwork |  
Published : Jan 19, 2026, 12:15 AM IST
೧೮ಕೆಎಂಎನ್‌ಡಿ-೩ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆಯಿಂದ ನಡೆದ ಸುಗ್ಗಿ ಹಬ್ಬ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಸಂಕ್ರಾಂತಿ ಎಂದರೆ ಶ್ರಮ, ಸಂಸ್ಕೃತಿ, ಸಹಭಾಗಿತ್ವದ ಸಂಗಮ. ಈ ಹಬ್ಬದಲ್ಲಿ ಎಳ್ಳು-ಬೆಲ್ಲದ ಸಿಹಿ, ಕಬ್ಬಿನ ಮಧುರತೆ, ಹೊಸ ಬೆಳೆಯ ಸಮೃದ್ಧಿ ಪ್ರತಿಯೊಬ್ಬರ ಜೀವನವನ್ನೂ ತುಂಬಬೇಕು. ಸಂಕ್ರಾಂತಿ ಸೂರ್ಯನ ಉತ್ತರಾಯಣ ಪ್ರಾರಂಭದ ಸಂಕೇತ. ರೈತರೊಡನೆ ಎಲ್ಲರೂ ಪ್ರಕೃತಿ, ಭೂಮಿ, ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಸಮೃದ್ಧಿಯ ಹಬ್ಬವಾಗಿ ಇದನ್ನು ಆಚರಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತ ಶಾಂತಿ ಪ್ರಿಯ ದೇಶ. ಹಲವಾರು ವಿಚಾರಗಳಲ್ಲಿ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಇಂದು ಹಲವು ರಾಷ್ಟ್ರಗಳಲ್ಲಿ ನಡೆಯುತ್ತಿರುವ ಘಟನೆಗಳು ಆತಂಕ ಮೂಡಿಸಿವೆ. ವಿಶ್ವಮಾನವ ಸಂದೇಶ ಸಾರಿದ ಭಾರತ ಯುದ್ಧದಿಂದ ದೂರವೇ ಉಳಿದು ಸಾಮರಸ್ಯದ ಸಂಕೇತದ ಪ್ರತಿರೂಪದಂತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ ನಿಂಗರಾಜ್‌ಗೌಡ ತಿಳಿಸಿದರು.

ಭಾನುವಾರ ನಗರದ ಕರ್ನಾಟಕ ಸಂಘ ಆವರಣದ ಕೆ.ವಿ.ಶಂಕರಗೌಡ ಶಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆಯಿಂದ ಆಯೋಜಿಸಲಾಗಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ ಉದ್ಘಾಟಿಸಿ ಮಾತನಾಡಿ, ರಷ್ಯಾ ಮತ್ತು ಉಕ್ರೇನ್ ನಡುವೆ ನಾಲ್ಕು ವರ್ಷದಿಂದ ಯುದ್ಧ ನಡೆದಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದ್ದರೆ, ಸ್ವಯಂಘೋಷಿತ ದೊಡ್ಡಣ್ಣ ಎನಿಸಿಕೊಂಡವರು ವೆನಿಜುಲಾ ಅಧ್ಯಕ್ಷರನ್ನೇ ಮಕ್ಕಳನ್ನು ಅಪಹರಿಸಿದಂತೆ ಕಿಡ್ನಾಪ್ ಮಾಡುವುದು, ಗ್ರೀನ್‌ಲ್ಯಾಂಡ್ ತನಗೇ ಬೇಕೆಂದು ಹಠ ಹಿಡಿಯುವುದು, ಇರಾನ್‌ಗೆ ಬೆದರಿಕೆ ಹಾಕುವುದು, ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕಸಿದುಕೊಳ್ಳುತ್ತಿರುವ ಬೆಳವಣಿಗೆ ನಿಜಕ್ಕೂ ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಕ್ರಾಂತಿ ಎಂದರೆ ಶ್ರಮ, ಸಂಸ್ಕೃತಿ, ಸಹಭಾಗಿತ್ವದ ಸಂಗಮ. ಈ ಹಬ್ಬದಲ್ಲಿ ಎಳ್ಳು-ಬೆಲ್ಲದ ಸಿಹಿ, ಕಬ್ಬಿನ ಮಧುರತೆ, ಹೊಸ ಬೆಳೆಯ ಸಮೃದ್ಧಿ ಪ್ರತಿಯೊಬ್ಬರ ಜೀವನವನ್ನೂ ತುಂಬಬೇಕು. ಸಂಕ್ರಾಂತಿ ಸೂರ್ಯನ ಉತ್ತರಾಯಣ ಪ್ರಾರಂಭದ ಸಂಕೇತ. ರೈತರೊಡನೆ ಎಲ್ಲರೂ ಪ್ರಕೃತಿ, ಭೂಮಿ, ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಸಮೃದ್ಧಿಯ ಹಬ್ಬವಾಗಿ ಇದನ್ನು ಆಚರಿಸುತ್ತೇವೆ ಎಂದರು.

ಎಳ್ಳು, ಬೆಲ್ಲ, ಕಡಲೆ, ಒಣಕೋಬ್ಬರಿ ಮಿಶ್ರಣವೇ ಎಳ್ಳು-ಬೆಲ್ಲ. ಇದನ್ನು ಹಂಚಿಕೊಳ್ಳುತ್ತಾ ಎಳ್ಳು ಬೆಲ್ಲ ತಿನ್ನಿ, ಒಳ್ಳೆ ಮಾತಾಡಿ ಎಂದು ಜನರು ಹೇಳುತ್ತಾರೆ. ಸಿಹಿಯಾದ ಈ ಮಿಶ್ರಣದಂತೆಯೇ ಸಂಬಂಧಗಳೂ ಸಿಹಿಯಾಗಲಿ, ದ್ವೇಷಗಳು ದೂರವಾಗಿ, ಸ್ನೇಹ-ಸೌಹಾರ್ದ ಹೆಚ್ಚಾಗಲಿ ಎಂಬುದು ಇದರ ಒಳಾರ್ಥವಾಗಿದೆ ಎಂದರು.

ಇತಿಹಾಸಕಾರ ಡಾ.ಎಚ್.ಶ್ರೀಧರ ಮಾತನಾಡಿ, ಕನ್ನಡ ಭಾಷೆಯು ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಚಾರಿತ್ರಿಕ ಭಾಷೆಯಾಗಿದೆ. ಕನ್ನಡ ಭಾಷೆಗೆ ಸರ್ವ ಭಾಷೆಗಳ ಜನರನ್ನು ಆಕರ್ಷಿಸುವ, ಸೆಳೆಯುವ ಆಯಸ್ಕಾಂತದಂತ ಶಕ್ತಿ ಇದೆ. ಅದು ಕನ್ನಡದ ಶಕ್ತಿ ಮತ್ತು ತಾಕತ್ತು ಎಂದು ಪ್ರತಿಪಾದಿಸಿದರು.

ಕನ್ನಡಕ್ಕೆ ಕನ್ನಡವೇ ಸಾಕ್ಷಿ. ಕನ್ನಡ ಭಾಷೆ ಕೇವಲ ಹಾಡು ಭಾಷೆಯಾಗಬಾರದು. ಅದು ಹಸಿವಿನ ಭಾಷೆ. ಉಸಿರಿನ ಭಾಷೆ. ಮನಸ್ಸಿನ ಭಾಷೆ. ಹೃದಯದ ಭಾಷೆ ಹಾಗೂ ಬದುಕಿನ ಭಾಷೆಯಾಗಬೇಕು. ಪ್ರತಿಯೊಬ್ಬ ಕನ್ನಡಿಗನು ತನ್ನ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗಟ್ಟಿ ಮನಸ್ಸು ಮತ್ತು ನಿರ್ಧಾರ ಮಾಡಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಖ್ಯಾತ ವೈದ್ಯ ಡಾ.ಚಂದ್ರಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಬನ್ನಂಗಾಡಿ ಸಿದ್ದಲಿಂಗಯ್ಯ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ವೇದಿಕೆಯ ಪದಾಧಿಕಾರಿಗಳಾದ ರಾಗಿಮುದ್ದನಹಳ್ಳಿ ನಾಗೇಶ್, ಮಂಗಲ ಶಿವಣ್ಣ, ರೂಪಾ ಹೊಸಹಳ್ಳಿ, ನೇತ್ರಾ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ವಾರ್ಥ ಸೇವೆಯಿಂದ ಸಾಮಾಜಿಕ ಪಿಡುಗುಗಳ ದೂರಗೊಳಿಸಲು ಸಾಧ್ಯ: ಸಮಾಜ ಸೇವಕ ಡಾ.ಟಿ.ಶ್ರೀನಿವಾಸಪ್ಪ
ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಗೆ ಸಂಭ್ರಮದ ರಥೋತ್ಸವ