ಪಾಕ್‌ನ ಇಬ್ಬಗೆ ನೀತಿಗೆ ಭಾರತೀಯ ಸೇನೆ ಪ್ರತ್ಯುತ್ತರ: ಜೋಶಿ

KannadaprabhaNewsNetwork |  
Published : May 12, 2025, 12:15 AM ISTUpdated : May 12, 2025, 11:22 AM IST
Prahlad Joshi

ಸಾರಾಂಶ

ಪಹಲ್ಗಾಂ ಭಯೋತ್ಪಾದನಾ ದಾಳಿಯ ನಂತರ ಗುಳ್ಳೇನರಿ ಬುದ್ಧಿಯ ಪಾಕಿಸ್ತಾನಕ್ಕೆ ಪಾಠ ಕಲಿಸಲು ನಮ್ಮ ಸರ್ಕಾರ ಭಾರತೀಯ ಸೇನೆಗೆ ಮುಕ್ತ ಅವಕಾಶ ನೀಡಿದೆ. ಅದರಂತೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ, ಪ್ರತಿಕಾರದಲ್ಲಿ ತೊಡಗಿದೆ. 

ಹುಬ್ಬಳ್ಳಿ: ಕದನ ವಿರಾಮ ಘೋಷಣೆಯಾದ ಮೇಲೂ ಪಾಕಿಸ್ತಾನ ದಾಳಿ ಮುಂದುವರಿಸಿ ಇಬ್ಬಗೆ ನೀತಿ ಪ್ರದರ್ಶಿಸಿದ್ದು, ಭಾರತೀಯ ಸೇನೆ ಇದಕ್ಕೆ ಪ್ರತ್ಯುತ್ತರ ಕೊಡುತ್ತದೆ. ಪಾಕ್‌ ವಿರುದ್ಧದ ದಾಳಿಗೆ ಕೇಂದ್ರ ಸರ್ಕಾರ ಸೇನೆಗೆ ಮುಕ್ತ ಅಧಿಕಾರ, ಸ್ವಾತಂತ್ರ್ಯ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಯಾವತ್ತು ದ್ವಂದ್ವ ನಿಲುವು ಮತ್ತು ಇಬ್ಬಗೆ ನೀತಿ ಅನುಸರಿಸುವಲ್ಲಿ ಎತ್ತಿದ ಕೈ ಎಂಬುದು ಗೊತ್ತೇ ಇದೆ. ಅಲ್ಲಿನ ಮಿಲಿಟರಿ ಪಡೆ ಸರ್ಕಾರದ ಮಾತು ಕೇಳುವುದಿಲ್ಲ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ ಎಂದರು.

ಪಹಲ್ಗಾಂ ಭಯೋತ್ಪಾದನಾ ದಾಳಿಯ ನಂತರ ಗುಳ್ಳೇನರಿ ಬುದ್ಧಿಯ ಪಾಕಿಸ್ತಾನಕ್ಕೆ ಪಾಠ ಕಲಿಸಲು ನಮ್ಮ ಸರ್ಕಾರ ಭಾರತೀಯ ಸೇನೆಗೆ ಮುಕ್ತ ಅವಕಾಶ ನೀಡಿದೆ. ಅದರಂತೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ, ಪ್ರತಿಕಾರದಲ್ಲಿ ತೊಡಗಿದೆ. ಬಹು ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದೆ ಎಂದರು.

ಭಾರತೀಯ ಸೇನೆ ಮೊದಲ ದಿನವೇ ಪಾಕಿಸ್ತಾನದ 9 ಕ್ಕಿಂತ ಹೆಚ್ಚು ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದೆ. ಈ ದಾಳಿಯಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರು, ಅವರ ಕುಟುಂಬಗಳು ಬಲಿಯಾಗಿವೆ ಎಂದು ತಿಳಿಸಿದರು.

ಯುದ್ಧವಾಗಿ ಪರಿಗಣನೆ: ದೇಶದಲ್ಲಿ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಗೆ ಪಣ ತೊಟ್ಟ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅತ್ಯಂತ ಕಠೋರ ನಿಲುವು ತೆಗೆದುಕೊಂಡಿದೆ. ಪಾಕ್‌ ಕದನ ವಿರಾಮಕ್ಕೂ ಮೊದಲೇ ಭಯೋತ್ಪಾದನೆಯನ್ನು ಯುದ್ಧವಾಗಿ ಪರಿಗಣಿಸುವಂತಹ ಅಭೂತಪೂರ್ವ ನಿರ್ಣಯ ಕೈಗೊಂಡಿದೆ ಎಂದರು.

ಪಾಕಿಸ್ತಾನದ ಡಿಜಿಎಂಒ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ ಫೋನ್‌ ಮಾಡಿ ಕದನ ವಿರಾಮಕ್ಕೆ ವಿನಂತಿ ಮಾಡಿದ್ದರು. ಆದರೀಗ ಅದನ್ನು ಉಲ್ಲಂಘಿಸಿದ್ದಾರೆ. ಯಾವತ್ತೂ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸಿಕೊಂಡು ಬಂದ ಪಾಕ್‌ಗೆ ಭಾರತೀಯ ಸೇನೆ ಪ್ರತ್ಯುತ್ತರ ಕೊಡುತ್ತದೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಭಯೋತ್ಪಾದನೆ ನಿಗ್ರಹಿಸಲಾಗಿದೆ. 1980ರ ನಂತರ ಪಹಲ್ಗಾಂಗಿಂತ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದ್ದವು. ಆದರೆ, ಈಗ ಅಂಥದ್ದಕ್ಕೆಲ್ಲ ಕಡಿವಾಣ ಹಾಕಲಾಗಿದೆ ಎಂದರು.

ಹಿಂದೆಲ್ಲಾ ದೊಡ್ಡ ಪ್ರಮಾಣದ ಭಯೋತ್ಪಾದನೆ ನಡೆದಾಗಲೂ ಸೌಮ್ಯ ಪ್ರತಿಕ್ರಿಯೆ ನೀಡುತ್ತಿದ್ದ ಭಾರತ, ಇದೇ ಮೊದಲ ಬಾರಿ ಪಾಕ್‌ಗೆ ನುಗ್ಗಿ ಹೊಡೆಯುತ್ತಿದ್ದೇವೆ ಎಂದರು.

ಪಹಲ್ಗಾಂ ದಾಳಿಯ ನಂತರ ಭಯೋತ್ಪಾದನೆ ವಿರುದ್ಧ ಇಡೀ ದೇಶವೇ ಒಂದಾಗಿ ಹೋರಾಡುತ್ತಿದೆ. ದಾಳಿಯಲ್ಲಿ ಕಂದಹಾರ ಪ್ರಕರಣದಲ್ಲಿದ್ದವರು ಮತ್ತು ಪ್ರಮುಖ ಉಗ್ರರನ್ನು, ಅವರ ಕುಟುಂಬಗಳು ಹತರಾಗಿದ್ದಾರೆ. ಭಾರತ ಶಾಂತಿಪ್ರಿಯ ರಾಷ್ಟ್ರ. ನಾವಾಗಿಯೇ ಯಾವತ್ತೂ ಯಾರ ಮೇಲೂ ದಂಡೆತ್ತಿ ಹೋಗುವುದಿಲ್ಲ. ಆದರೆ, ನಮ್ಮ ಮೇಲೆ ಯಾರಾದರೂ ಬಂದರೆ ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ