ಆಪರೇಷನ್‌ ಸಿಂದೂರ ಸಮರ : ಅಭಿಪ್ರಾಯಗಳು

KannadaprabhaNewsNetwork |  
Published : May 12, 2025, 12:15 AM ISTUpdated : May 12, 2025, 12:00 PM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಪದೇಪದೇ ಉಗ್ರರ ಮೂಲಕ ಪಾಕಿಸ್ತಾನವು ಭಾರತವನ್ನು ಕೆಣುಕುತ್ತಲೇ ಇರುವುದನ್ನು ಕಂಡಿದ್ದೇವೆ. ವಾಜಪೇಯಿ ನಂತರ ಇಡೀ ವಿಶ್ವವೇ ಭಾರತದ ಶಕ್ತಿ ಏನೆಂಬುದನ್ನು ತೋರಿಸುವ ಕೆಲಸವಾಗುತ್ತಿದೆ. 

ಪದೇಪದೇ ಉಗ್ರರ ಮೂಲಕ ಪಾಕಿಸ್ತಾನವು ಭಾರತವನ್ನು ಕೆಣುಕುತ್ತಲೇ ಇರುವುದನ್ನು ಕಂಡಿದ್ದೇವೆ. ವಾಜಪೇಯಿ ನಂತರ ಇಡೀ ವಿಶ್ವವೇ ಭಾರತದ ಶಕ್ತಿ ಏನೆಂಬುದನ್ನು ತೋರಿಸುವ ಕೆಲಸವಾಗುತ್ತಿದೆ. ಪ್ರವಾಸಿಗರ ಹತ್ಯೆಗೈದ ಉಗ್ರರು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಕೆಲಸ ನಡೆದಿದೆ. ಯಾವುದೇ ಕಾರಣಕ್ಕೂ ಪಾಠ ಅಪೂರ್ಣವಾಗಬಾರದು. ನೆಲ, ಜಲ, ವಾಯು ಹೀಗೆ ಎಲ್ಲಾ ವಿಧಾನದಲ್ಲೂ ಪಾಕಿಸ್ತಾನವನ್ನು ಹಣಿಯುವ ಕೆಲಸ ಮುಂದುವರಿಯಲಿ.

- ಸಹನಾ ರವಿ, ಮಾಜಿ ಅಧ್ಯಕ್ಷೆ, ದಾವಣಗೆರೆ ಜಿಪಂ

ಮೋದಿಗೆ ಹೇಳು ಅಂದಿದ್ದಕ್ಕೆ ಪಾಕಿಸ್ತಾನಕ್ಕೇ ನುಗ್ಗಿ ಉಗ್ರರ ದಮನಕ್ಕೆ ಭಾರತ ಮುಂದಾಗಿದೆ. ನವವಧು ಸೇರಿದಂತೆ 26 ಮಹಿಳೆಯರ ಹಣೆ ಮೇಲಿನ ಕುಂಕುಮ ಅಳಿಸಿದ ಪಾಕಿಸ್ತಾನವನ್ನು ವಿಶ್ವ ಭೂಪಟದಿಂದಲೇ ಅಳಿಸಿ, ಹಾಕುವ ಶಕ್ತಿ, ಸಾಮರ್ಥ್ಯ ಭಾರತ ಸೇನೆಗಿದೆ. ಇಸ್ಲಾಮಾಬಾದ್, ಕರಾಚಿ, ರಾವಲ್ಪಿಂಡಿ ಹೀಗೆ ಇಡೀ ಪಾಕಿಸ್ತಾನ ತತ್ತರಿಸಿದೆ. ನಂಬಿಕೆಗೆ ಅರ್ಹವಲ್ಲದ ಪಾಕಿಸ್ತಾನವು ಭಾರತದ ಮೇಲಿನ ದ್ವೇಷದ ಬದಲು ತನ್ನ ಪ್ರಜೆಗಳ ಏಳಿಗೆಗೆ ಒತ್ತು ನೀಡದೇ, ಕೆಡಕನ್ನೇ ಬಯಸಿದ್ದು, ಪಾಕ್‌ ಬಗ್ಗುಬಡಿಯಲೇಬೇಕು.

- ಡಿ.ಎಸ್.ಉಮಾ ಪ್ರಕಾಶ, ಮಾಜಿ ಮೇಯರ್, ಪಾಲಿಕೆ

- - - ಅಳಿಸಲ್ಪಟ್ಟ ಸಿಂದೂರವು ಇಂದು ಯುದ್ಧದ ಹಾದಿ ತೋರಿಸಿದೆ. ಉಗ್ರರ ದಮನಕ್ಕೆ ಇದು ಸಕಾಲವಾಗಿದೆ. ಶಾಂತಿ ಮಂತ್ರದಿಂದ ಉಗ್ರರನ್ನಾಗಲೀ, ಭಯೋತ್ಪಾದನೆಯನ್ನಾಗಲೀ ಹತ್ತಿಕ್ಕುವುದಕ್ಕೆ ಸಾಧ್ಯವೇ ಇಲ್ಲ. ಸ್ವಯಂ ಕೃಷ್ಣನೇ ಯಾವಾಗ ಶಸ್ತ್ರ ಎತ್ತಬೇಕು, ಯಾವಾಗ ಮಾತಿನಲ್ಲಿ ಹೇಳಬೇಕೆಂದು ಸಾರಿದ್ದಾರೆ. ಪಾಕ್‌ಗೆ ಮಾತಿನಿಂದ ಹೇಳಿದ್ದಾಗಿದೆ. ಇದೀಗ ಸುದರ್ಶನ ಚಕ್ರದ ರೂಪದಲ್ಲೇ ಶತೃಗಳ ಕ್ಷಿಪಣಿಗಳಿಂದ ದೇಶ ರಕ್ಷಿಸುವ ಕೆಲಸವಾಗುತ್ತಿದೆ. ಭಾರತಕ್ಕೆ, ನಮ್ಮ ಸೇನೆ, ನಮ್ಮೆಲ್ಲಾ ಯೋಧರಿಗೆ ಯಶಸ್ಸು ಸಿಗಲಿ.

- ಮಂಜುಳಾ ಪ್ರಸಾದ, ಶಿಕ್ಷಕಿ, ಕೆಪಿಎಸ್ ಶಾಲೆ, ತ್ಯಾವಣಿಗೆ

- - - ಭಾರತದ 26 ತಾಯಂದಿರ ಸಿಂದೂರ ಅಳಿಸಿದ ಉಗ್ರರನ್ನು ಸದೆ ಬಡಿಯುವವರೆಗೂ, ನ್ಯಾಯ ಸಿಗುವವರೆಗೂ ಆಪರೇಷನ್ ಸಿಂದೂರ ನಿಲ್ಲಿಸಬಾರದು. ನಮ್ಮದೇ ನೆಲವಾದ, ಪಿಒಕೆ ಹಿಂಪಡೆಯಲು ಇದೊಂದು ಸುವರ್ಣಾವಕಾಶ. ರಾಜಕೀಯ ಪ್ರೇರಿತಚುನಾವಣೆ ವೇಳೆ ಮಾತ್ರ ಉಗ್ರರು ದಾಳಿ ನಡೆಸುತ್ತಿರುವುದು ದುರಂತ. ವ್ಯಾಪಾರಿ ಮನೋಭಾವದ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಹೇಳಿಕೆಗೆ ಆಪರೇಷನ್ ಸಿಂದೂರ ನಿಲ್ಲಿಸುವುದು ಸೂಕ್ತವೇ ಎಂಬ ಬಗ್ಗೆ ಕೇಂದ್ರ ಆತ್ಮಾವಲೋಕನ ಮಾಡಿಕೊಳ್ಳಲಿ.

- ಶ್ರೀಕಾಂತ್ ಬಗರೆ, ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿ

- - - ಪಾಕಿಸ್ತಾನವನ್ನು ಮಟ್ಟಹಾಕದೇ, ಸರ್ವನಾಶ ಮಾಡದೇ ಬಿಟ್ಟರೆ ವಿಷಸರ್ಪವನ್ನು ನಾವು ಬಗಲಿನಲ್ಲಿ ಇಟ್ಟುಕೊಂಡಂತಾಗುತ್ತದೆ. ಕದನ ವಿರಾಮ ಘೋಷಣೆ ಮಾಡಿದ ನಂತರವೂ ರಾತ್ರೋ ರಾತ್ರಿ ಜನ ವಸತಿ ಪ್ರದೇಶಗಳ ಮೇಲೆ ಪಾಕ್ ದಾಳಿ ಮಾಡಿದೆಯೆಂದರೆ ಅದರ ಪಾಪದ ಕೊಡ ತುಂಬಿದೆಯೆಂತಲೇ ಅರ್ಥ. ಶತ್ರುರಾಷ್ಟ್ರ, ಭಯೋತ್ಪಾದಕರು, ಭಾರತ ವಿರೋಧಿಗಳ ಆಶ್ರಯದಾತ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಇದು ಸುಸಮಯ. ಜಗತ್ತಿಗೆ ಕಂಟಕವಾಗಿರುವ ಪಾಕಿಸ್ತಾನ ನಕ್ಷೆಯೇ ಇಲ್ಲದಂತೆ ಅಳಿಸಿ ಹಾಕಬೇಕು.

- ಕೆ.ಹನುಮಂತಪ್ಪ ಎಒಜಿ, ಜಿಲ್ಲಾಧ್ಯಕ್ಷ, ಧರ್ಮಪ್ರಸಾರ ಆಯಾಮ, ವಿಹಿಂಪ

- - - ಹೇಗೂ ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ಶಕ್ತಿ, ಸಾಮರ್ಥ್ಯ ಪ್ರದರ್ಶಿಸಿದ ಇತಿಹಾಸ, ಹಿನ್ನೆಲೆ ಇದೆ. ಅನೇಕ ಯುದ್ಧಗಳಲ್ಲಿ ಪಾಕಿಗಳನ್ನು ಮಂಡಿಯೂರಿಸಿದ ವೀರರ ಸೇನಾ ಪರಂಪರೆ ನಮ್ಮದಿದೆ. ಉಗ್ರರ ಪೋಷಕ ಪಾಕಿಸ್ತಾನವನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಕದನ ವಿರಾಮ ಘೋಷಣೆ ನಂತರವೂ ಕಳೆದ ರಾತ್ರಿ ಭಾರತದ ಜನವಸತಿ ಪ್ರದೇಶ, ದೆಹಲಿ ಮೇಲೆ ದಾಳಿಗೆ ಮುಂದಾಗಿದೆ. ಯಾವುದೇ ಮುಲಾಜಿಲ್ಲದೇ ಪಾಕ್ ಮೇಲೆ ದಾಳಿ ಮಾಡಿ, ಪಿಒಕೆಯನ್ನು ಭಾರತ ತನ್ನ ತೆಕ್ಕೆಗೆ ಪಡೆಯಲಿ.

- ಶಂಭು ಎಸ್.ಉರೇಕೊಂಡಿ, ತಾಲೂಕು ಅಧ್ಯಕ್ಷ, ಅಭಾವೀಮ

- - - ಉಗ್ರರ ಜನಕ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಕಪಾಳಕ್ಕೆ ಹೊಡೆದಂತೆ ನಾಲ್ಕೈದು ದಿನಗಳಿಂದಲೂ ಪಾಠ ಕಲಿಸುವ ಕೆಲಸವನ್ನು ಭಾರತೀಯ ಸೇನೆ, ನಮ್ಮ ವೀರ ಯೋಧರು ಮಾಡುತ್ತಿದ್ದಾರೆ. ಪಾಕ್‌ ಜೊತೆ ಯಾವುದೇ ಕಾರಣಕ್ಕೂ ಮಾತುಕತೆ ಸಲ್ಲದು. ಭಾರತೀಯ ಸೇನೆಯ ಟ್ರೈಲರ್‌ಗೆ ಇಷ್ಟು ಪೆಚ್ಚಾಗಿರುವ ಪಾಕಿಸ್ತಾನ ಅಸಲಿ ಯುದ್ಧಕ್ಕೆ ಭಾರತ ಇಳಿದರೆ, ಕೆಲವೇ ಗಂಟೆಗಳಲ್ಲಿ ವಿಶ್ವ ಭೂಪಟದಿಂದ ಆ ದೇಶ ಕಣ್ಮರೆಯಾಗುವುದು ನಿಶ್ಚಿತ. ಧರ್ಮ ಬಿಟ್ಟರೂ ಕರ್ಮ ಬಿಡದೆಂಬುದಕ್ಕೆ ಪಾಕ್‌ ಉತ್ತಮ ನಿದರ್ಶನ.

- ಪಿ.ಎನ್.ಜಗದೀಶ ಕುಮಾರ ಪಿಸೆ, ಸ್ವಉದ್ಯೋಗಿ

- - - ದೀಪಾವಳಿಯಲ್ಲಿ ಉಳಿದ ಪಟಾಕಿಗಳಂತೆ ವ್ಯರ್ಥವಾಗುವಂತೆ ಆಗಬಾರದೆಂಬ ಕಾರಣಕ್ಕೆ ಕದನ ವಿರಾಮ ನಂತರವೂ ಪಾಕಿಸ್ತಾನ ತನ್ನಲ್ಲಿ ಉಳಿದ ಡ್ರೋಣ್ ಹಾರಿಸುತ್ತಿದೆಯೇ? ಕದನ ವಿರಾಮ ಒಪ್ಪಿದರೂ ಭಯೋತ್ಪಾದಕರು ಡ್ರೋಣ್ ಹಾರಿಸುತ್ತಿದ್ದಾರಾ? ಇದರ ಹಿಂದೆ ಮತ್ತೊಂದು ಶತ್ರುರಾಷ್ಟ್ರ ಚೀನಾದ ಕೈವಾಡ ಇದೆಯಾ? ನರಿಬುದ್ಧಿಯ ಪಾಕಿಸ್ತಾನದ ಕಪಟ ಮಾತುಗಳನ್ನು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಒಪ್ಪಬಾರದು. ಆಪರೇಷನ್ ಸಿಂದೂರಗೆ ವಿರಾಮ ಬೇಡ. ವಿಶ್ವ ಭೂಪಟದಲ್ಲಿ ಪಾಕ್ ಅಸ್ತಿತ್ವವೇ ಇಲ್ಲದಂತೆ ಮಾಡಬೇಕು.

- ಪ್ರಸಾದ್ ಎಸ್. ಬಂಗೇರ, ಪ್ರಾಚಾರ್ಯ, ಖಾಸಗಿ ಪಿಯು ಕಾಲೇಜು

- - - ತನ್ನ ಶಕ್ತಿ, ಹೋರಾಟದ ಕಿಚ್ಚು ಏನೆಂಬುದನ್ನು ಭಾರತ ತೋರಿಸಿದೆ. ಅಮೆರಿಕ ಮಧ್ಯ ಪ್ರವೇಶದಿಂದ ಕದನ ವಿರಾಮಕ್ಕೆ ಭಾರತ ಒಪ್ಪಿದರೂ ಕಳೆದ ರಾತ್ರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಹುಟ್ಟು ಸುಳಿ ತಲೆ ಬೋಳಿಸಿದರೂ ಹೋಗುವುದಿಲ್ಲ ಎಂಬಂತೆ ಪಾಕಿಸ್ತಾನ ತನ್ನ ಕೆಟ್ಟ ಬುದ್ಧಿ ಬಿಡುವುದಿಲ್ಲ. ಅತ್ತ ಬಲೂಚಿಸ್ತಾನ ಸೇರಿದಂತೆ ಆಂತರಿಕ ಸಮಸ್ಯೆಗಳನ್ನೇ ಸರಿಪಡಿಸಿಕೊಳ್ಳಲಾಗದ ಪಾಕಿಸ್ತಾನ ಇಡೀ ವಿಶ್ವಕ್ಕೆ ಕ್ಯಾನ್ಸರ್‌ನಂತೆ ಕಾಡುತ್ತಿದೆ. ವಿಶ್ವ ಭೂಪಟದಲ್ಲಿ ಇರುವುದಕ್ಕೂ ಪಾಕಿಸ್ತಾನ ನಾಲಾಯಕ್ ಆಗಿದೆ.

- ಎಂ.ರಾಜು, ಕಲಾವಿದ

- - - ಭಾರತ, ಭಾರತೀಯರ ತಂಟೆಗೆ ಬಂದರೆ ಏನಾಗುತ್ತದೆಂಬುದಕ್ಕೆ ಆಪರೇಷನ್ ಸಿಂದೂರ ಮೂಲಕ ಭಾರತೀಯ ಸೇನೆ ತೋರಿಸುತ್ತಿದೆ. ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದು, ಅಷ್ಟು ಮಹಿಳೆಯರ ಕುಂಕುಮ ಅಳಿಸುವ ಮೂಲಕ ಪೈಶಾಚಿಕ ಕೃತ್ಯ ಎಸಗಿದ ಉಗ್ರರ ಕೃತ್ಯವನ್ನು ಇಡೀ ಮಾನವ ಕುಲ ಖಂಡಿಸುತ್ತಿದೆ. ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜೊತೆಗೆ ಕದನ ವಿರಾಮ ಬೇಡ. ದೂರದ ಅಮೆರಿಕಾ ಅಧ್ಯಕ್ಷರ ಮಾತಿಗೆ ಕಿವಿಗೊಟ್ಟಿದ್ದು ಸಾಕು. ಈಗಾಗಲೇ ಪಾಕಿಸ್ತಾನ ವಿಶ್ವಮಟ್ಟದಲ್ಲಿ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದು ಜಗತ್ತಿಗೆ ಗೊತ್ತಾಗಿದೆ.

- ಸೌಮ್ಯ ಸತೀಶ ಧಾರವಾಡ, ಗಾಯಕಿ, ಸಮಾಜ ಸೇವಕಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!