ಬಳ್ಳಾರಿ: ಭಾರತೀಯ ಸಂಸ್ಕೃತಿ ಉಳಿದೆಲ್ಲ ದೇಶಗಳಿಗೂ ಮಾದರಿ. ಹೀಗಾಗಿಯೇ ಅನೇಕ ದೇಶಗಳು ನಮ್ಮ ದೇಶದ ಸಂಸ್ಕೃತಿ ಮೈಗೂಡಿಸಿಕೊಳ್ಳುತ್ತಿದ್ದಾರೆ ಎಂದು ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ವ್ಯಕ್ತಿ ಉನ್ನತಿಯಿಂದ ರಾಷ್ಟ್ರದ ಉನ್ನತಿ ಸಾಧ್ಯ ಎಂಬ ನಿಟ್ಟಿನಲ್ಲಿ ಬರುವ 2025ರ ಜನವರಿ 29ರಿಂದ ಫೆಬ್ರವರಿ 6ರ ವರೆಗೆ ಕಲಬುರ್ಗಿ ಜಿಲ್ಲೆಯ ಸೇಡಮ್‌ನಲ್ಲಿ 7ನೇ ಭಾರತೀಯ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. ಒಂಭತ್ತು ದಿನಗಳ ಈ ಉತ್ಸವಕ್ಕೆ ಪೂರಕವಾಗಿ ಈ ಕಲ್ಯಾಣ ಕರ್ನಾಟಕ ವಿಕಾಸ ಪಥ ಸಂಚಾರ ಹಮ್ಮಿಕೊಳ್ಳಲಾಗಿದೆ. ಈ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, 4 ರಾಜ್ಯಗಳ ರಾಜ್ಯಪಾಲರು, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ 153 ಗಣ್ಯವ್ಯಕ್ತಿಗಳು ಭಾಗಿಯಾಗಲಿದ್ದಾರೆ. ಈ ಉತ್ಸವದಲ್ಲಿ 80 ಸಾವಿರ ಜನ ಸಾಮರ್ಥ್ಯದ ಸಭಾಂಗಣ ಸೇರಿ 5 ಸಾವಿರ ಸಾಮರ್ಥ್ಯದ 4 ಸಭಾಂಗಣಗಳಲ್ಲಿ ಉತ್ಸವ ನಡೆಯಲಿದೆ. 10 ಸಾವಿರಕ್ಕೂ ಅಧಿಕ ಕೊಠಡಿ, ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕಮ್ಮರಚೇಡು ಕಲ್ಯಾಣಮಠದ ಶ್ರೀ ಕಲ್ಯಾಣ ಸ್ವಾಮಿ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಎಸ್‌ಜಿಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎನ್. ರುದ್ರಪ್ಪ ಮಾತನಾಡಿದರು.ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ಡಾ. ಜಿ.ಆರ್. ವಸ್ತ್ರದ, ಸಹ ಸಂಚಾಲಕ ಅಡವಿಸ್ವಾಮಿ, ನಗರ ಸಂಚಾಲಕ ವೆಂಕಟೇಶ ಬಡಿಗೇರ, ಬಳ್ಳಾರಿ ಗ್ರಾಮೀಣ ತಾಲೂಕು ಸಂಚಾಲಕ ಜೋಳದರಾಶಿ ಪೊಂಪನಗೌಡ ಉಪಸ್ಥಿತರಿದ್ದರು.