ಭಾರತದ್ದು ಇಡೀ ವಿಶ್ವವೇ ಮೆಚ್ಚುವ ಹೆಜ್ಜೆ

KannadaprabhaNewsNetwork | Published : May 11, 2025 1:24 AM
Follow Us

ಸಾರಾಂಶ

ಪಹಲ್ಗಾಮ್ ಉಗ್ರರ ಹತ್ಯಾಕಾಂಡ ವಿರುದ್ಧ ಭಾರತ ನಡೆಸಿರುವ ಆಪರೇಶನ್‌ ಸಿಂದೂರ ಕಾರ್ಯಾಚರಣೆಗೆ ಎಲ್ಲೆಡೆ ಮಾಜಿ ಸೈನಿಕರು, ಸಮಾಜದ ಮುಖಂಡರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಉಗ್ರರ ನಿರ್ಮೂಲನೆ ಆಗಬೇಕು ಎಂದು ಹೇಳಿದ್ದಾರೆ.

ರಾಣಿಬೆನ್ನೂರು: ಕೊಡಲಿ ಕಾವು ಕುಲಕ್ಕೆ ಮೂಲ ಎನ್ನುವ ಗಾದೆಯಂತೆ ಉಗ್ರವಾದ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಅದರ ಫಲ ಅನುಭವಿಸುವಂತಾಗಿದೆ. ಪಹಲ್ಗಾಮ್‌ ದುರಂತಕ್ಕೆ ಉತ್ತರವಾಗಿ ಉಗ್ರಗಾಮಿಗಳ ತಾಣಗಳ ಮೇಲೆ ಭಾರತ ದಾಳಿ ನಡೆಸಿದೆಯೇ ಹೊರತು ಇದು ಪಾಕಿಸ್ತಾನದ ಜತೆ ಯುದ್ಧಕ್ಕೆ ಮುನ್ನುಡಿಯಲ್ಲ. ಭಾರತ ಇಟ್ಟ ಹೆಜ್ಜೆಗೆ ಇಡೀ ವಿಶ್ವವೇ ಮೆಚ್ಚುವಂತಾಗಿದೆ.

ನಮ್ಮ ದೇಶದ ಹೆಣ್ಣು ಮಕ್ಕಳ ಮಾಂಗಲ್ಯ ಕಸಿದುಕೊಂಡ ದೇಶವನ್ನು ಸರ್ವನಾಶ ಮಾಡುವುದು ಭಾರತೀಯರ ಕರ್ತವ್ಯವಾಗಿದೆ. ಹೆಣ್ಣು ಮಕ್ಕಳ ತಂಟೆಗೆ ಬಂದ ಕೌರವರನ್ನು ನಾಶ ಮಾಡಿದ್ದು ಮಹಾಭಾರತ ಯುದ್ಧ. ಪ್ರಸ್ತುತ ಪ್ರಧಾನಿ ಮೋದಿ ನೇತೃತ್ವದ ಭಾರತ ಸುಮ್ಮನೆ ಕೂರುವುದಿಲ್ಲ. ಸ್ವಾತಂತ್ರ್ಯಾನಂತರ ತಗಣೆ ಕುಟುಕಿದಂತೆ ಕುಟುಕುತ್ತಾ ಬಂದ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ಮಗ್ಗಲು ಮುರಿಯದೇ ಬಿಡುವುದಿಲ್ಲ. ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು, ರಕ್ತಕ್ಕೆ ರಕ್ತ ಮೋದಿ ಅವರ ಉದ್ದೇಶವಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತಗಳೊಂದಿಗೆ ಪಾಕಿಸ್ತಾನ ನಾಶ ಮಾಡಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ವಶಪಡಿಸಿಕೊಳ್ಳಬೇಕಾಗಿದೆ.

ಭಾರತ ಜಗತ್ತೇ ಹೆಮ್ಮೆಪಡುವಂತಹ ಪ್ರಧಾನ ಮಂತ್ರಿಯನ್ನು ಪಡೆದಿದೆ. ಇದರಿಂದ ದೇಶದಲ್ಲಿ ಹೊಸ ಮನ್ವಂತರ ಪ್ರಾರಂಭವಾಗಿ ಭಾರತದ ವಿರುದ್ಧ ಯಾರೇ ತಂಟೆ ತಕರಾರು ತೆಗೆದರೆ ಸುಮ್ಮನಿರಲ್ಲ ಎಂಬ ಸಂದೇಶವನ್ನು ಸಾರುವಂತಾಗಿದೆ.

ಯುದ್ಧ ಪ್ರಾರಂಭವಾಗಿ ಅವಶ್ಯಕತೆ ಬಿದ್ದರೆ ಪ್ರತಿಯೊಬ್ಬ ಭಾರತೀಯ ಪ್ರಜೆ ಸೇನೆಗೆ ಸೇರುವಂತೆ ಕರೆ ಬಂದರೆ ನಾನು ಕೂಡ ಸೈನ್ಯಕ್ಕೆ ಸೇರಿ ಭಾರತಮಾತೆಯ ರಕ್ಷಣೆಗೆ ಕಟಿಬದ್ಧನಾಗಿರುವೆ ಎಂದು ರಾಣಿಬೆನ್ನೂರು ಜೇಸಿ ಸಂಸ್ಥೆ ಮಾಜಿ ಅಧ್ಯಕ್ಷ ಶ್ರೀನಿವಾಸ ದೊಡ್ಡನಾಗಪ್ಪ ಕಾಕಿ ಹೇಳಿದರು.

ಪಾಕಿಸ್ತಾನಕ್ಕೆ ಪಾಠ ಕಲಿಸುವ ಇಂಥ ಅವಕಾಶ ಕಳೆದುಕೊಳ್ಳಬಾರದು: ಗುರುರಾಜ ನಿಂಗೋಜಿ

ಭಾರತದಲ್ಲಿಯೇ ಇದ್ದು ಪಾಕಿಸ್ತಾನಕ್ಕೆ ಜೈಕಾರ ಹಾಕುವ ದೇಶ ವಿರೋಧಿಗಳನ್ನು ಮೊದಲು ಮಟ್ಟ ಹಾಕಬೇಕು. ಕಾಲು ಕೆದರಿ ದಾಳಿ ಮಾಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸುವ ಸರಿಯಾದ ಸಮುಯ ಇದಾಗಿದೆ. ಭಾರತ ದೇಶಾಭಿಮಾನದ ವಿಷಯದಲ್ಲಿ ಮುಸ್ಲಿಂರನ್ನೊಳಗೊಂಡು ಎಲ್ಲ ಧರ್ಮೀಯರು ಭಾರತದ ಯಶಕ್ಕೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.ಪಾಕಿಸ್ತಾನಕ್ಕೆ ತಕ್ಕ ಶಿಕ್ಷೆ ನೀಡುವ ಇಂಥ ಅವಕಾಶ ಕಳೆದುಕೊಳ್ಳಬಾರದು. ಭಾರತದ ತಾಳ್ಮೆ ಪರೀಕ್ಷಿಸುತ್ತಿರುವ ಪಾಕಿಗಳಿಗೆ ಉತ್ತರ ನೀಡುವಲ್ಲಿ ನಮ್ಮ ಸೈನ್ಯ ತೋರಿದ ಧೈರ್ಯ ಹೆಮ್ಮೆಪಡುವಂತಹದ್ದು. ಎಲ್ಲರ ಜೀವಕ್ಕೂ ಅಷ್ಟೇ ಬೆಲೆ ಇದೆ. ಅಮಾಯಕರನ್ನು ಹತ್ಯೆ ಮಾಡಿ ಭಾರತವನ್ನು ಕೆರಳಿಸಿದ ಪಾಕಿಸ್ತಾನಕ್ಕೆ ರೆಕ್ಕೆ ಪುಕ್ಕ ಬರುವ ಮೊದಲು ಅವರ ಉಗ್ರತ್ವವನ್ನು ಮಟ್ಟ ಹಾಕಬೇಕು.ಭಾರತದಲ್ಲಿದ್ದೂ ಪಾಕಿಸ್ತಾನದ ಪರ ಪೋಸ್ಟ್‌ಗಳನ್ನು ಹಾಕುವ, ಜಯಕಾರ ಹಾಕುವವರಿಗೆ ನಮ್ಮ ಎಲ್ಲ ರಾಜ್ಯಗಳ ಸರ್ಕಾರಗಳು ವಿಳಂಬವಿಲ್ಲದೆ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ನಮ್ಮ ಸೈನಿಕರ ಸಾಹಸ ಬೆಂಬಲಿಸಬೇಕು. ಒಳಗಿನ ವೈರಿಗಳನ್ನು ಹೊರ ಹಾಕುವುದು ಕೂಡ ಒಂದು ಅತ್ಯಂತ ಪ್ರಮುಖ ಕಾರ್ಯವಾಗಿದೆ. ಇದು ಅನಿವಾರ್ಯ ಹಾಗೂ ಅತ್ಯವಶ್ಯ. ಇಂಥವರಿಗೆ ತಕ್ಕ ಶಿಕ್ಷೆಯೂ ಆಗಬೇಕು. ಆಗಲೇ ಇಂಥ ದುಷ್ಕೃತ್ಯಗಳನ್ನು ಮಟ್ಟ ಹಾಕಲು ಸಾಧ್ಯ ಎಂದು ಹಾನಗಲ್ಲದ ಯುವ ನಾಯಕ, ಸಾಮಾಜಿಕ ಕಾರ್ಯಕರ್ತ ಗುರುರಾಜ ನಿಂಗೋಜಿ ಹೇಳಿದರು.

ಕೈಕಟ್ಟಿ ಕುಳಿತುಕೊಂಡರೆ ಹೇಡಿಗಳಾಗುತ್ತೇವೆ: ಶಂಭು ಬಿಜಾಪುರ

ಪಾಕಿಸ್ತಾನದ ನಡವಳಿಕೆಗೆ ಭಾರತದ ಪ್ರತಿಕ್ರಿಯೆ ಸರಿಯಾಗಿದೆ. ಯುದ್ಧದ ಸ್ಥಿತಿಗಳಿಗೆ ಆರ್ಥಿಕ, ಜೀವ ಹಾನಿಗಳು ಅನಿವಾರ್ಯ. ಆದರೆ ಕೈ ಕಟ್ಟಿ ಕುಳಿತುಕೊಂಡರೆ ಹೇಡಿಗಳಾಗುತ್ತೇವೆ. ಭಾರತ ಶಾಂತಿ ರಾಷ್ಟ್ರ. ನಾವಾಗೆ ಯಾರನ್ನೂ ಕೆಣಕಿಲ್ಲ. ಅಮಾಯಕರ ಮೇಲೆ ಉಗ್ರ ದಾಳಿಯನ್ನು ಇಡೀ ದೇಶ ಖಂಡಿಸುವುದು ಮಾತ್ರವಲ್ಲ, ಅದಕ್ಕೆ ಪ್ರತೀಕಾರಕ್ಕಾಗಿ ಒಕ್ಕೊರಲಿನ ಬೆಂಬಲ ನೀಡಿದೆ. ನಮ್ಮ ಸೈನ್ಯವೂ ನಿರ್ದಾಕ್ಷಿಣ್ಯವಾಗಿ ಪ್ರತಿಕ್ರಿಯೆ ನೀಡಿದೆ. ಯುದ್ಧದಿಂದ ಆರ್ಥಿಕ ಹಾನಿ ತಪ್ಪಿಸುವುದು ಸಾಧ್ಯವಿಲ್ಲ. ಅದಕ್ಕೆ ನಾವು ಸನ್ನದ್ಧರಾಗಲೇಬೇಕು. ನಮ್ಮ ದೇಶಾಭಿಮಾನ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಕ್ಷಣಾ ಮಂತ್ರಿಗಳು ಅತ್ಯಂತ ಜಾಗ್ರತವಾಗಿ ಈ ವಿಷಯದಲ್ಲಿ ಮುನ್ನಡೆ ಇಟ್ಟಿದ್ದಾರೆ. ಆದಾಗ್ಯೂ ಎಚ್ಚರಿಕೆಯ ಹೆಜ್ಜೆಗಳಿರಬೇಕು. ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಮಾತ್ರವಲ್ಲ, ಹಿಂದೆ ಸರಿಯದೆ ಭಾರತ ರಕ್ಷಣೆಗೆ ನಮ್ಮ ಸಮರ ವೀರರು ಜಯ ಗಳಿಸುತ್ತಾರೆ ಎಂದು ಮಾಜಿ ಸೈನಿಕ ಶಂಭು ಬಿಜಾಪುರ ಕೂಡಲ ಹೇಳಿದರು.