ಶಿವಾನಂದ ಅಂಗಡಿ
ದೇಶದ ಮಹಾನಗರಗಳಲ್ಲಿ ಇರುವಂತೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡದಲ್ಲೂ ಸಣ್ಣ ಕೈಗಾರಿಕೆಗಳು ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿವೆ. ಆದರೆ, ಉದ್ಯಮಿಗಳು, ಏಜೆಂಟರು, ಕಾರ್ಮಿಕರು, ಈ ಉದ್ಯಮ ಅವಲಂಬಿಸಿದ ಜನತೆಯ ಸಮಸ್ಯೆಗಳು ಮಾತ್ರ ಹಲವು ವರ್ಷಗಳಿಂದ ದೊಡ್ಡದಾಗಿವೆ.
ಧಾರವಾಡ ಜಿಲ್ಲೆ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿಯ ಗೋಕುಲ ಕೈಗಾರಿಕೆ ವಸಾಹತು, ತಾರಿಹಾಳ ಕೈಗಾರಿಕಾ ವಸಾಹತು, ಗಾಮನಗಟ್ಟಿ ಕೈಗಾರಿಕೆ, ರಾಯಾಪುರ ಕೈಗಾರಿಕಾ ವಸಾಹತು, ಧಾರವಾಡದ ಬೇಲೂರು ಕೈಗಾರಿಕಾ ವಸಾಹತವಿನಲ್ಲಿ ಸಾವಿರಾರು ಸಣ್ಣ ಕೈಗಾರಿಕೆಗಳು ತಲೆ ಎತ್ತಿದ್ದು, ಹಲವಾರು ಸಮಸ್ಯೆಗಳ ಮಧ್ಯೆಯೂ ಮಹತ್ತರ ಸಾಧನೆ ಮಾಡಿ ಹುಬ್ಬಳ್ಳಿ-ಧಾರವಾಡಕ್ಕೆ ಉದ್ಯಮ ನಗರ ಎಂತಲೂ ಖ್ಯಾತಿ ತಂದುಕೊಟ್ಟಿವೆ.ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿರುವ ಉದ್ದಿಮೆದಾರರೇ ಸರ್ಕಾರ ಸೇರಿದಂತೆ ಸಂಬಂಧಿಸಿದವರಿಗೆ ಅಹವಾಲು ಸಲ್ಲಿಸಲು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ರಚಿಸಿಕೊಂಡಿದ್ದಾರೆ. 840 ಸದಸ್ಯರಿದ್ದು, ಕೆಲ ಉದ್ದಿಮೆದಾರರೇ (ಪದಾಧಿಕಾರಿಗಳು) ಸಂಘದ ನೊಗ ಹೊತ್ತಿದ್ದು, ಸಂಘದ ಸಭೆಯಲ್ಲಿ ಸದಸ್ಯರು ಹೇಳಿದ ಸಮಸ್ಯೆಗಳನ್ನು ಸಂಘದ ಮೂಲಕ ಸರ್ಕಾರ, ಪಾಲಿಕೆ, ಜಿಲ್ಲಾಧಿಕಾರಿ, ಕೈಗಾರಿಕೆ ಸಚಿವರಿಗೆ ಸಚಿವರಿಗೆ ಮನವಿ ಸಲ್ಲಿಸುತ್ತಾರೆ.
ಈ ಪ್ರದೇಶದಲ್ಲಿ 2 ಸಾವಿರ ಸಣ್ಣ ಕೈಗಾರಿಕೆಗಳಿವೆ. 5 ಸಾವಿರಕ್ಕೂ ಅಧಿಕ ಕಾರ್ಮಿಕರು ಇಲ್ಲಿ ವಿವಿಧ ಕೆಲಸದಲ್ಲಿ ತೊಡಗಿದ್ದು, ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇಡೀ ಪ್ರದೇಶದಲ್ಲಿ ಎರಡೇ ಎರಡು ಸಾರ್ವಜನಿಕ ಶೌಚಾಲಯಗಳಿದ್ದು, ಅವು ಕೂಡಾ ನಿರ್ವಹಣೆ ಕೊರತೆಯಿಂದ ಬಂದಾಗಿವೆ. ಹೀಗಾಗಿ ಕಾರ್ಮಿಕರು ಸೇರಿ ಇಲ್ಲಿಗೆ ಕೆಲಸದ ನಿಮಿತ್ತ ಆಗಮಿಸುವ ಜನರು ಮೂತ್ರ, ಶೌಚಕ್ಕೂ ತೀವ್ರ ಪ್ರಯಾಸ ಪಡಬೇಕಾಗಿದೆ.120 ಎಕರೆ ಪ್ರದೇಶದಲ್ಲಿ ಈ ಕೈಗಾರಿಕಾ ಪ್ರದೇಶ ಹರಡಿಕೊಂಡಿದ್ದು, ಮೊದಲ ಹಂತದ 70 ಎಕರೆ ಪ್ರದೇಶ ಕೆಎಸ್ಎಸ್‌ಐಡಿಸಿಯಿಂದ ಹುಬ್ಬಳ್ಳಿ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದೆ. ಉಳಿದ 50 ಎಕರೆ ಮಾತ್ರ ಕೆಎಸ್‌ಎಸ್‌ಐಡಿಸಿ ವ್ಯಾಪ್ತಿಯಲ್ಲಿದೆ. ಹೀಗೆ ಹಸ್ತಾಂತರವಾದ ಮೇಲೆ ಪಾಲಿಕೆ ಮೂಲಭೂತ ಸೌಕರ್ಯ ಕಲ್ಪಿಸಲು ತೀವ್ರ ನಿರ್ಲಕ್ಷ್ಯ ತೋರಿದ್ದು, ಉದ್ಯಮಿಗಳು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಹೀಗಾಗಿ ಸಣ್ಣ ಮಳೆಯಾದರೂ ನೀರು ಹರಿದು ಹೋಗದೇ ತೀವ್ರ ಯಾತನೆ ಅನುಭವಿಸುತ್ತೇವೆ ಎನ್ನುತ್ತಾರೆ ಉದ್ಯಮಿಗಳು.
ಈ ಪ್ರದೇಶದಲ್ಲಿ ಸಂಜೆಯಾದರೆ ಸಾಕು ಕುಡುಕರ ಹಾವಳಿಯೂ ಹೆಚ್ಚಾಗಿದ್ದು, ಅವರನ್ನು ನಿಯಂತ್ರಿಸುವುದೇ ಕಷ್ಟವಾಗಿದೆ ಎನ್ನುತ್ತಾರೆ ಅವರಿಂದ ನೊಂದವರು.
ಎಲ್ಲೆಲ್ಲಿ ಸಣ್ಣ ಕೈಗಾರಿಕೆ ಸಂಘಗಳು:
ಕೈಗಾರಿಕೆಗಳಿಗೆ ನೀರು, ಶೌಚಾಲಯ ವ್ಯವಸ್ಥೆ, ಸರಿಯಾದ ರಸ್ತೆ, ಒಳಚರಂಡಿ ವ್ಯವಸ್ಥೆ ಸರಿಪಡಿಸಿ ಮಳೆ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸುವಂತೆ ಹಲವಾರು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಇಲ್ಲಿಂದಲೂ ಕಸ ಎತ್ತಲೂ ಸಹ ಪಾಲಿಕೆ ಕಾರ್ಮಿಕರಿಗೆ ದುಂಬಾಲು ಬೀಳಬೇಕಾಗಿದೆ ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಜಂಟಿ ಕಾರ್ಯದರ್ಶಿ ಭರತ ಕುಲಕರ್ಣಿ ಹೇಳಿದರು.