ಕನ್ನಡಪ್ರಭ ವಾರ್ತೆ ಬೆಂಗಳೂರು
ಪೈಲೆಟ್‌ಗಳ ಕೊರತೆ, ತಾಂತ್ರಿಕ ದೋಷದಿಂದಾಗಿ ಶನಿವಾರವೂ ಇಂಡಿಗೋ ವಿಮಾನ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಒಂದೇ ದಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 165 ವಿಮಾನಗಳ ಸೇವೆ ರದ್ದಾಗಿದ್ದವು.ಇಂಡಿಗೋ ವಿಮಾನ ಸೇವೆ ರದ್ದು ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ಬುಧವಾರದಿಂದ ಶುಕ್ರವಾರದವರೆಗೆ 247 ವಿಮಾನಗಳ ಸೇವೆ ರದ್ದಾಗಿತ್ತು. ಅದೇ ಶನಿವಾರ ಒಂದೇ ದಿನ 165 ವಿಮಾನಗಳು ಸೇವೆ ರದ್ದು ಮಾಡಿವೆ. ಅವುಗಳಲ್ಲಿ 86 ವಿಮಾನಗಳು ಬೆಂಗಳೂರಿನಿಂದ ಹೊರಡಬೇಕಿದ್ದರೆ, 79 ವಿಮಾನಗಳು ಬೆಂಗಳೂರಿಗೆ ಆಗಮಿಸಬೇಕಿತ್ತು. ಉಳಿದಂತೆ 116 ವಿಮಾನಗಳ ಹಾರಾಟ ವಿಳಂಬವಾಗುವಂತಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಶನಿವಾರವೂ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿತ್ತು.
ಕಳೆದ ಕೆಲ ದಿನಗಳಿಂದ ಇಂಡಿಗೋ ವಿಮಾನಯಾನ ಸೇವೆಯಲ್ಲಿ ಭಾರೀ ವ್ಯತ್ಯಯವಾಗುತ್ತಿರುವುದರಿಂದ ಪ್ರಯಾಣಿಕರು ಗಂಟೆಗಟ್ಟಲೆ ನಿಲ್ದಾಣದಲ್ಲಿಯೇ ಉಳಿದರು. ಶನಿವಾರ ಸಾವಿರಾರು ಮಂದಿ ವಿಮಾನ ನಿಲ್ದಾಣದ ನಿರ್ಗಮನ ಗೇಟ್ ಬಳಿ ವಿಮಾನ ಸೇವೆ ಕುರಿತ ಮಾಹಿತಿಗಾಗಿ ಕಾಯುತ್ತಾ ಕುಳಿತಿದ್ದ ದೃಶ್ಯ ಕಂಡು ಬಂತು. ವಿಮಾನ ನಿಲ್ದಾಣದೊಳಗೆ ಸಿಲುಕಿದ್ದ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಸಿಬ್ಬಂದಿಯೇ ಆಹಾರ ನೀಡಿ ಉಪಚರಿಸಿದ್ದಾರೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಜಮಾವಣೆಯಾಗಿದ್ದ ಕಾರಣದಿಂದಾಗಿ ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇಂಡಿಗೋ ಸಂಸ್ಥೆಯ ಕೌಂಟರ್‌ಗಳ ಎದುರು ಭಾರೀ ಜನಸಂದಣಿ ಕಂಡುಬಂತು.ಇಂಡಿಗೋ ವಿಮಾನ ಸೇವೆ ರದ್ದಾದ ಕಾರಣಕ್ಕಾಗಿ ಇತರ ವಿಮಾನಯಾನ ಸಂಸ್ಥೆಗಳು ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಿಗೆ ತಮ್ಮ ವಿಮಾನ ಪ್ರಯಾಣದ ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದವು. ಅದೇ ರೀತಿ ಖಾಸಗಿ ಬಸ್‌ಗಳು ಮಾಮೂಲಿ ಪ್ರಯಾಣ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ನಿಗದಿ ಮಾಡಿರುವುದು ಸಹ ತಿಳಿದುಬಂದಿದೆ.