ತುರುವೇಕೆರೆಯಲ್ಲಿ ಇಂದಿರಾ ಕ್ಯಾಂಟೀನ್ ಬಂದ್

KannadaprabhaNewsNetwork |  
Published : Mar 14, 2026, 01:30 AM IST
13 ಟಿವಿಕೆ 1 – ತುರುವೇಕೆರೆಯ ಇಂದಿರಾ ಕ್ಯಾಂಟೀನ್ ಗೆ ವಾಣಿಜ್ಯ ಬಳಕೆಯ ಸಿಲೆಂಡರ್ ಇಲ್ಲ ಅನ್ನೋ ಕಾರಣಕ್ಕೆ ಕ್ಯಾಂಟೀನ್ ಮುಚ್ಚಲಾಗಿದೆ.  | Kannada Prabha

ಸಾರಾಂಶ

ಎಲ್ಲೋ ಯುದ್ಧ. ಎಲ್ಲೋ ಸಾವು ನೋವು. ಆದರೂ ಅಲ್ಲಿನ ಯುದ್ಧದ ಬಿಸಿ ಕುಗ್ರಾಮವನ್ನೂ ತಲುಪಿ ಜನ ಸಾಮಾನ್ಯರು ಪರದಾಡುವಂತೆ ಮಾಡಿಬಿಟ್ಟಿದೆ. ಇರಾನ್, ಅಮೇರಿಕಾ ನಡುವಿನ ಯುದ್ಧದ ಕಾವು ಗ್ರಾಮಾಂತರ ಪ್ರದೇಶವನ್ನೂ ಸುಡುವಂತೆ ಮಾಡಿದೆ.

ಎಸ್.ನಾಗಭೂಷಣ ಕನ್ನಡಪ್ರಭ ವಾರ್ತೆ ತುರುವೇಕೆರೆ

ಎಲ್ಲೋ ಯುದ್ಧ. ಎಲ್ಲೋ ಸಾವು ನೋವು. ಆದರೂ ಅಲ್ಲಿನ ಯುದ್ಧದ ಬಿಸಿ ಕುಗ್ರಾಮವನ್ನೂ ತಲುಪಿ ಜನ ಸಾಮಾನ್ಯರು ಪರದಾಡುವಂತೆ ಮಾಡಿಬಿಟ್ಟಿದೆ. ಇರಾನ್, ಅಮೇರಿಕಾ ನಡುವಿನ ಯುದ್ಧದ ಕಾವು ಗ್ರಾಮಾಂತರ ಪ್ರದೇಶವನ್ನೂ ಸುಡುವಂತೆ ಮಾಡಿದೆ.

ಅಡಿಗೆ ಗ್ಯಾಸ್ ಏನೇನೂ ಸಮಸ್ಯೆ ಇಲ್ಲ ಎಂದು ಸರ್ಕಾರ ಸಾರಿ ಸಾರಿ ಹೇಳುತ್ತಿದ್ದರೂ ಸಹ ಜನ ಸಾಮಾನ್ಯರು ಯುದ್ಧ ಇನ್ನು ಎಷ್ಟು ದಿನ ಮುಂದುವರೆಯುವುದೋ, ಮನೆಯಲ್ಲಿ ಗ್ಯಾಸ್ ಸಿಲೆಂಡರ್ ತುಂಬಿಕೊಂಡಿದ್ದರೆ, ನೆಮ್ಮದಿಯಾಗಿ ಜೀವನ ಮಾಡಬಹುದೆಂಬ ಭಾವನೆಯಿಂದ ಗ್ಯಾಸ್ ಬುಕಿಂಗ್ ಮಾಡಲು ಹಾಗೂ ತೆಗೆದುಕೊಂಡು ಬರಲು ನಾಮುಂದು, ತಾಮುಂದು ಎಂದು ಹಾತೊರೆಯುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಬಂದ್

ಯುದ್ಧದ ಬಿಸಿ ಈಗ ಬಡವರ ಹೊಟ್ಟೆಯ ಮೇಲೂ ಹೊಡೆದಿದೆ. ಕಡಿಮೆ ಬೆಲೆಯಲ್ಲಿ ತಿಂಡಿ ಮತ್ತು ಊಟ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ಗೆ ಯುದ್ಧದ ಬಿಸಿ ತಟ್ಟಿದೆ. ಈಗ ವಾಣಿಜ್ಯ ಬಳಕೆಯ ಸಿಲೆಂಡರ್ ಸರಬರಾಜು ಆಗದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನನ್ನು ಶುಕ್ರವಾರದಿಂದ ಬಂದ್ ಮಾಡಲಾಗಿದೆ. ಕ್ಯಾಂಟೀನ್ ಮುಂಭಾಗವೇ ಗ್ಯಾಸ್ ಸಿಲೆಂಡರ್ ಅಭಾವವಿರುವುದರಿಂದ ಇಂದಿರಾ ಕ್ಯಾಂಟೀನ್ ನನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಫಲಕದಲ್ಲಿ ಸೂಚಿಸಲಾಗಿದೆ. ಇದರಿಂದಾಗಿ ಕೂಲಿ ಕೆಲಸದವರು, ಸಣ್ಣಪುಟ್ಟ ಕೆಲಸ ಮಾಡಿ ದುಡಿಯುವವರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಪಟ್ಟಣದಲ್ಲಿರುವ ಹಲವಾರು ಹೋಟೆಲ್ ಗಳು ಗ್ಯಾಸ್ ಸಿಲೆಂಡರ್ ಮೇಲೆ ಅವಲಂಭಿತವಾಗಿಲ್ಲ. ಬಹುಪಾಲು ಹೋಟೆಲ್ ಗಳು ಕಟ್ಟಿಗೆ, ತೆಂಗಿನ ಕಾಯಿ ಮಟ್ಟೆ, ಕುರಂಬಳೆ, ಸೌದೆಗಳ ಬಳಕೆ ಮಾಡುತ್ತಿವೆ. ಹಾಗಾಗಿ ನಮ್ಮೂರಲ್ಲಿ ಹೋಟೆಲ್ ಗಳಿಗೆ ಗ್ಯಾಸ್ ಬಿಸಿ ತಟ್ಟಿಲ್ಲ. ಸಾಯಂಕಾಲದ ವೇಳೆ ಗ್ಯಾಸ್ ಬಳಸಿ ಮಾಡಲಾಗುವ ಬೋಂಡ, ಪಾನಿಪೂರಿ, ಗೋಬಿ ಮಂಚೂರಿ ಸೇರಿದಂತೆ ವಿವಿಧ ಚಾಟ್ ಐಟಮ್ ಗಳನ್ನು ಮಾಡುವವರಿಗೆ ಗ್ಯಾಸ್ ನ ಬಿಸಿ ಮುಟ್ಟಿದೆ.ಇತ್ತ ಅಡಿಗೆ ಸಿಲೆಂಡರ್ ನ ಸಮಸ್ಯೆ ಎದುರಾದಂತೆ ತಹಸೀಲ್ದಾರ್ ಎನ್. ಎ. ಕುಂಇ ಅಹಮದ್ ರವರು ವಾಣಿಜ್ಯ ವ್ಯವಹಾರಕ್ಕೆ ಅಡುಗೆ ಸಿಲೆಂಡರ್ ಬಳಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯ ಸಂದೇಶವನ್ನೂ ಸಾರಿದ್ದಾರೆ. ಇದುವರೆಗೂ ಗೃಹ ಬಳಕೆಯ ಸಿಲೆಂಡರ್ ಗಳನ್ನು ಬಳಸುತ್ತಿದ್ದ ರಸ್ತೆ ಬದಿ ವ್ಯಾಪಾರಿಗಳಿಗೆ ಈ ಆದೇಶ ತಲೆ ಬಿಸಿ ತಂದಿದೆ.ಕಳೆದ ಮೂರ್ನಾಲ್ಕು ದಿನಗಳಿಂದ ಗ್ಯಾಸ್ ಸಮಸ್ಯೆ ತಲೆದೋರುತ್ತಿದ್ದಂತೆ ಕಟ್ಟಿಗೆಯ ಸ್ಟೌವ್ ಗೆ ಡಿಮ್ಯಾಂಡ್ ಬಂದಿದೆ. ದೊಡ್ಡ ದೊಡ್ಡ ವಾಹನಗಳಲ್ಲಿ ಕಟ್ಟಿಗೆಯಿಂದ ಅಡಿಗೆ ಮಾಡುವ ಗ್ಯಾಸ್ ಸ್ಟೌವ್ ನ ಮಾದರಿಯಲ್ಲೇ ಇರುವ ಬ್ಲೋಯಿಂಗ್ ಸ್ಟೌವ್ ಗಳನ್ನು ಪಟ್ಟಣದ ಬಹುತೇಕ ಕಡೆ ಮಾರಾಟ ಮಾಡಲಾಗುತ್ತಿದೆ. ಒಂದು ಸೆಟ್ ಗೆ 2800 ರು ಹೇಳುವ ಮಾರಾಟಗಾರ ಕೊನೆಗೆ ಎರಡು ಸಾವಿರಕ್ಕೆ ಮಾರುತ್ತಿದ್ದಾರೆ. ಸ್ವಲ್ಪ ಹೊಗೆ ಬರುತ್ತೆ ಅಷ್ಠೆ. ಆರೋಗ್ಯಕ್ಕೆ ಉತ್ತಮ ಎಂಬ ಉಪದೇಶವನ್ನೂ ಉಚಿತವಾಗಿ ನೀಡುತ್ತಾ ಸ್ಟೌವ್ ಗಳನ್ನು ಮಾರುತ್ತಿದ್ದಾರೆ.

ನಮಗೆ ಪ್ರತಿದಿನ ಕನಿಷ್ಠ 800 ಸಿಲೆಂಡರ್ ಅವಶ್ಯಕತೆ ಇದೆ. ಪ್ರತಿ ದಿನ ತಪ್ಪದೇ ಸರಬರಾಜೂ ಸಹ ಆಗ್ತಾ ಇದೆ. ಆದರೆ ಜನರು ಸಿಲೆಂಡರ್ ಸಿಗಲ್ಲವಂತೆ ಅನ್ನೋ ಸುಳ್ಳು ಸುದ್ದಿಗೆ ಗಮನ ನೀಡಿ ಸುಖಾ ಸುಮ್ಮನೆ ಗ್ಯಾಸ್ ಬುಕ್ಕಿಂಗ್ ಮಾಡುತ್ತಿದ್ದಾರೆ. ಒಟ್ಟಿಗೆ ಬುಕ್ಕಿಂಗ್ ಮಾಡುತ್ತಿರುವುದರಿಂದ ಸರ್ವರ್ ಸಮಸ್ಯೆ ಸಹಜವಾಗಿ ಆಗಲಿದೆ. ಅದನ್ನೂ ಸಹ ತಪ್ಪು ತಿಳಿಯುವ ಜನರು ಗ್ಯಾಸ್ ಬುಕ್ಕಿಂಗ್ ಮಾಡಲೂ ಆಗ್ತಾ ಇಲ್ಲ. ಅಂತ ಗಾಬರಿ ಆಗ್ತಾ ಇದ್ದಾರೆ. ಸರ್ವರ್ ಸಮಸ್ಯೆಯಿಂದ ಕೆಲವರಿಗೆ ಓಟಿಪಿ ಬರುವುದು ತಡ ಆಗ್ತಾ ಇದೆ. ಅಡಿಗೆ ಸಿಲೆಂಡರ್ ಗೆ ಏನೇನೂ ಸಮಸ್ಯೆ ಇಲ್ಲ. ಜನರು ಗಾಭರಿ ಆಗುವುದು ಬೇಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ಪುರಸಭಾ ಚುನಾವಣೆಯಲ್ಲಿ ಪ್ರತಿ ವಾರ್ಡ್‌ಗೂ ಬಿಜೆಪಿ ಅಭ್ಯರ್ಥಿ
21, 22ರಂದು ದಾವಣಗೆರೆ ಭಾವಸಾರ ಕ್ಷತ್ರಿಯ ಬಿಸಿನೆಸ್ ಎಕ್ಸ್‌ಪೋ: ಮಹೇಶ ಶೇಂಡಗೆ