ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಹಕ್ಕುಪತ್ರ ವಿತರಣೆ
ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಸಿವು ಮುಕ್ತ ಕರ್ನಾಟಕ ಚಿಂತನೆಯಂತೆ ಇಂದಿರಾ ಕ್ಯಾಂಟೀನ್‌ಗಳು ಅಗತ್ಯ ಸ್ಥಳಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಿ ಅದನ್ನು ಪ್ರತಿಯೊಬ್ಬರಿಗೆ ತಲುಪಿಸುವ ಧ್ಯೇಯವನ್ನು ಸರ್ಕಾರ ಹೊಂದಿದ್ದು, ಯಾವುದೇ ಭೇದ ಭಾವವಿಲ್ಲದೆ ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಅವರು ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಹಾಗೂ ಫಲಾನುಭವಿಗಳಿಗೆ 94ಸಿ ಮತ್ತು 94 ಸಿಸಿ ಹಕ್ಕು ಪತ್ರ ವಿತರಿಸಿ ಮಾತನಾಡಿದರು.ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆ.ಜಿ. ಅಕ್ಕಿಯ ಜತೆ ಕುಟುಂಬ ಸದಸ್ಯರ ಸಂಖ್ಯೆ ಆಧಾರದಲ್ಲಿ ಮುಂದಿನ ಎರಡು ತಿಂಗಳಲ್ಲಿ ಬೇಳೆ, ಎಣ್ಣೆ, ಸಕ್ಕರೆ ಹಾಗೂ ಇತರ ಕೆಲವು ಸಾಮಗ್ರಿ ವಿತರಿಸಲು ಯೋಜನೆ ರೂಪಿಸಲಾಗಿದೆ. ಅಧಿಕಾರಿಗಳು ಜನರನ್ನು ಗೊಂದಲಕ್ಕೆ ತಳ್ಳದೇ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. 137 ಮಂದಿಗೆ 94 ಸಿ ಹಾಗೂ 94 ಸಿಸಿ ಹಕ್ಕುಪತ್ರ ವಿತರಿಸಲಾಗಿದೆ. ಅರಣ್ಯ ತೊಡಕಿರುವ 584 ಹಾಗೂ ತಾಂತ್ರಿಕ ಅಡಚಣೆ 703 ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸ ತಕ್ಷಣ ನಡೆಯಬೇಕು. ಅಕ್ರಮ ಸಕ್ರಮ, ಕುಮ್ಕಿ, 9/11 ನೀತಿಯನ್ನು ಸರ್ಕಾರ ಸಡಿಲಗೊಳಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಬೇಕು. ಜಿಲ್ಲಾ ಪಂಚಾಯಿತಿ, ಪಿಡಬ್ಲ್ಯೂಡಿ, ಗ್ರಾಮೀಣ ರಸ್ತೆಗಳಿಗೆ ಸರ್ಕಾರ ಹೆಚ್ಚಿನ ಅನುದಾನವನ್ನು ಒದಗಿಸಬೇಕು. ಕೆಂಪು ಕಲ್ಲು, ಮರಳು ಸಮಸ್ಯೆಯನ್ನು ಶೀಘ್ರ ಪರಿಹರಿಸುವುದು ಅಗತ್ಯ ಎಂದು ಪೂಂಜ ಹೇಳಿದರು.ಎಂಎಲ್ ಸಿ ಮಂಜುನಾಥ ಭಂಡಾರಿ ಮಾತನಾಡಿ, ಇಂದಿರಾ ಕ್ಯಾಂಟೀನ್ ಬಡವರ್ಗದ ಜನರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ನೀಡುತ್ತದೆ. ಅಲ್ಪ ದರದಲ್ಲಿ ಶುಚಿ ರುಚಿಯ ಆಹಾರ ಒದಗಿಸುವ ಮೂಲಕ ಹೆಸರುವಾಸಿಯಾಗಿದೆ ಎಂದು ಹೇಳಿದರು.ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಕೆ. ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ರಾಜ್ಯ ಬೀಜ ಹಾಗೂ ಸಾವಯವ ಪ್ರಾಮಾಣೀಕರಣ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್, ಕರ್ನಾಟಕ ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಟಿ., ಉಪಾಧ್ಯಕ್ಷೆ ಗೌರಿ, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಶೇಖರ ಕುಕ್ಕೇಡಿ, ತಾಲೂಕು ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ತಹಸೀಲ್ದಾರ್ ಪೃಥ್ವಿ ಸಾನಿಕಂ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.ತಾಪಂ ಇಒ ಭವಾನಿ ಶಂಕರ್ ಸ್ವಾಗತಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು
ಅಂತರ್ ಧರ್ಮ, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಿಸುವ ಮೂಲಕ ಸಮಾಜದಲ್ಲಿ ಹಿತಕರ ಅಭಿವೃದ್ಧಿಯ ಅಗತ್ಯವಿದೆ. ಸಮಾಜದ ನಿರ್ಮಾಣಕ್ಕೆ ರಾಜಕೀಯ ಪಕ್ಷಗಳು ಪೂರಕವಾಗಿ ಒಗ್ಗಟ್ಟಿನ ಮೂಲಕ ಶಕ್ತಿಯನ್ನು ವೃದ್ಧಿಸಿಕೊಂಡು ಕೆಲಸ ಮಾಡಬೇಕು. ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ರಜೆಯನ್ನು ನೀಡುವ ಮಹತ್ವದ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ.-ದಿನೇಶ್ ಗುಂಡೂರಾವ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ