ಶಿವಕುಮಾರ ಕುಷ್ಟಗಿಗದಗ: ಬಡವರು ಮತ್ತು ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಊಟ, ಉಪಾಹಾರ ಒದಗಿಸುವ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯು ರಾಜ್ಯಾದ್ಯಂತ ಜಾರಿಗೆ ಬಂದು 7 ವರ್ಷಗಳೇ ಕಳೆದಿದ್ದರೂ, ಜಿಲ್ಲಾ ಕೇಂದ್ರವಾದ ಗದಗ ನಗರದಲ್ಲಿ ಮಾತ್ರ ಇಂದಿಗೂ ಈ ಸೌಲಭ್ಯ ಪ್ರಾರಂಭವಾಗಿಲ್ಲ.ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದ ಇಂದಿರಾ ಕ್ಯಾಂಟೀನ್‌ಗೆ 2017ರ ಆಗಸ್ಟ್ 16ರಂದು ಬೆಂಗಳೂರಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದರು. ಆದರೆ ಇದುವರೆಗೂ ಅದರ ಪ್ರಾರಂಭದ ಯಾವುದೇ ಸೂಚನೆ ಮಾತ್ರ ಗದಗ ನಗರದಲ್ಲಿ ಕಂಡು ಬರುತ್ತಿಲ್ಲ.ಗದಗಕ್ಕೆ ಅಗತ್ಯ: ಇಂದಿರಾ ಕ್ಯಾಂಟೀನ್ ಯೋಜನೆಯ ಮುಖ್ಯ ಉದ್ದೇಶ ಕೇವಲ ₹ 5ಕ್ಕೆ ಉಪಾಹಾರ ಮತ್ತು ₹10 ಕ್ಕೆ ಊಟ ಒದಗಿಸುವುದು, ಆ ಮೂಲಕ ಬಡವರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ಕಡಿಮೆ ಆದಾಯದ ಜನರಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಾಗಿದೆ. ಗದಗ ಜಿಲ್ಲಾ ಕೇಂದ್ರವಾಗಿದ್ದು, ಪ್ರತಿದಿನ ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಆಗಮಿಸುತ್ತಾರೆ. ಇವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಊಟ ಸಿಗುವುದು ಅತ್ಯಗತ್ಯ. ಹೀಗಿದ್ದರೂ, ಗದಗ ನಗರದಲ್ಲಿ ಈ ಯೋಜನೆಯು ಕಾರ್ಯರೂಪಕ್ಕೆ ಬಾರದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮೂಡಿಸಿದೆ.ಆಸಕ್ತಿಯ ಕೊರತೆಯೇ?: ಸಚಿವ, ಗದಗ ಶಾಸಕರಾಗಿರುವ ಎಚ್.ಕೆ. ಪಾಟೀಲ ಅವರು ಈ ಯೋಜನೆಯ ಅನುಷ್ಠಾನಕ್ಕೆ ಏಕೆ ಆಸಕ್ತಿ ತೋರಿಸುತ್ತಿಲ್ಲ ಎಂಬ ಪ್ರಶ್ನೆ ಇದೀಗ ವ್ಯಾಪಕವಾಗಿ ಕೇಳಿಬರುತ್ತಿದೆ. ಕಾಂಗ್ರೆಸ್ ಸರ್ಕಾರವೇ ಈ ಯೋಜನೆಯನ್ನು ಜಾರಿಗೆ ತಂದಿದ್ದರೂ, ಜಿಲ್ಲಾ ಕೇಂದ್ರದಲ್ಲಿಯೇ ಅದರ ಸೌಲಭ್ಯ ಇಲ್ಲದಿರುವುದು ವಿಪರ್ಯಾಸ. ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ ಅಥವಾ ಕಾರ್ಮಿಕರು ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರೆ, ಅದು ನಗರದ ಬಡ ಜನತೆಗೆ ದೊಡ್ಡ ಉಪಕಾರವಾಗುತ್ತದೆ ಎನ್ನುತ್ತಾರೆ ಶ್ರಮಿಕರು.
ಶೀಘ್ರ ಕಾಮಗಾರಿ ಆರಂಭ: ಗದಗ ನಗರದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಈಗಾಗಲೇ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಗದಗ ನಗರದ ಹಳೆಯ ಬಸ್ ನಿಲ್ದಾಣದ ಆವರಣದ ಉತ್ತರ ಭಾಗದಲ್ಲಿರುವ 3 ಸಾವಿರ ಚದರ ಅಡಿ ವಿಸ್ತೀರ್ಣದ (ಕೆಎಸ್‌ಆರ್‌ಟಿಸಿ) ಜಾಗವನ್ನು ಇಂದಿರಾ ಕ್ಯಾಂಟೀನ್ ಸ್ಥಾಪನೆಗಾಗಿ ಹಸ್ತಾಂತರಿಸುವಂತೆ ನಗರಸಭೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಗದಗ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.