ಇಂದ್ರಾಳಿ ಮೇಲ್ಸೇತುವೆ ವಿಳಂಬ: ‘ಏಪ್ರಿಲ್‌ ಫೂಲ್’ ಪ್ರತಿಭಟನೆ

KannadaprabhaNewsNetwork | Published : Apr 2, 2025 1:04 AM

ಸಾರಾಂಶ

ರೈಲ್ವೆ ಮೇಲ್ಸೇತುವೆಯ ಪ್ರತಿಕೃತಿಯೊಂದಿಗೆ ಕಲ್ಸಂಕದಿಂದ ಇಂದ್ರಾಳಿ ವರೆಗೆ ಪಾದಯಾತ್ರೆ ನಡೆಸಲಾಯಿತು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಭಿಕ್ಷುಕನ ವೇಷ ಹಾಕಿದ್ದ ಅನ್ಸಾರ್ ಅಹಮ್ಮದ್‌ಗೆ ಭಿಕ್ಷೆ ನೀಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಹೋರಾಟಗಾರರಿಂದ ತಲೆ ಬೋಳಿಸಿ ಆಕ್ರೋಶ । ಮೇಲ್ಸೇತುವೆ ಪ್ರತಿಕೃತಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವನ್ನು ಖಂಡಿಸಿ ಏ.1ರಂದು ಏಪ್ರಿಲ್‌ ಫೂಲ್ ಎಂಬ ವೈಶಿಷ್ಟ್ಯರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕಳೆದ 8 ವರ್ಷಗಳಿಂದ ಉಡುಪಿ ಸಂಸದರು ಸೇತುವೆಯನ್ನು ತಕ್ಷಣ ಪೂರ್ಣಗೊಳಿಸುವುದಾಗಿ ಹೇಳಿ ಜನತೆಯನ್ನು ಫೂಲ್‌ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ನಗರದ ಕಲ್ಸಂಕ ವೃತ್ತದಲ್ಲಿ ಆರಂಭವಾದ ಪ್ರತಿಭಟನಾ ಮೆರವಣಿಗೆಗೆ ಮೊದಲು ಹೋರಾಟಗಾರರಾದ ಅಮೃತ್ ಶೆಣೈ ಮತ್ತು ಅನ್ಸಾರ್‌ ಅಹಮ್ಮದ್‌ ತಮ್ಮ ತಲೆಗಳನ್ನು ಬೋಳಿಸಿಕೊಂಡು ಕೇಂದ್ರ ಸರ್ಕಾರ ಜನರನ್ನು ಬೋಳಿಸುತ್ತಿದೆ ಎಂದೂ, ಇತರ ಹೋರಾಟಗಾರರು ತಂತಮ್ಮ ಕಿವಿ ಮೇಲೆ ದಾಸವಾಳದ ಹೂವುಗಳನ್ನಿಟ್ಟು, ಉಡುಪಿ ಸಂಸದರು ಜನರ ಕಿವಿ ಮೇಲೆ ಹೂವಿಟ್ಟು ಮೋಸ ಮಾಡುತ್ತಿದ್ದಾರೆ ಎಂದು ಸಂಕೇತಿಸಿದರು.ನಂತರ ರೈಲ್ವೆ ಮೇಲ್ಸೇತುವೆಯ ಪ್ರತಿಕೃತಿಯೊಂದಿಗೆ ಕಲ್ಸಂಕದಿಂದ ಇಂದ್ರಾಳಿ ವರೆಗೆ ಪಾದಯಾತ್ರೆ ನಡೆಸಲಾಯಿತು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಭಿಕ್ಷುಕನ ವೇಷ ಹಾಕಿದ್ದ ಅನ್ಸಾರ್ ಅಹಮ್ಮದ್‌ಗೆ ಭಿಕ್ಷೆ ನೀಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಪಾದಯಾತ್ರೆಯುದ್ದಕ್ಕೂ ಭಿಕ್ಷೆ ಬೇಡಿದ ಅನ್ಸಾರ್‌, ಅದರಿಂದ ಸಂಗ್ರಹವಾಗುವ ಹಣವನ್ನು ಮೇಲ್ಸೇತುವೆ ನಿರ್ಮಾಣಕ್ಕೆ ದೇಣಿಗೆ ನೀಡುವುದಾಗಿ ಹೇಳಿ, ಈ ಮೂಲಕವಾದರೂ ಕಾಮಗಾರಿ ತ್ವರಿತಗೊಳ್ಳಬಹುದು ಎಂದು ಆಶಿಸಿದರು.

ನಂತರ ಇಂದ್ರಾಳಿಯಲ್ಲಿ ಮೋದಿ, ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖವಾಡಗಳನ್ನು ಧರಿಸಿ, ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಅಪೂರ್ಣ ಮೇಲ್ಸೆತುವೆಯನ್ನು ಉದ್ಘಾಟಿಸುವ ಅಣಕು ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ರಾ.ಹೆ.ಯಲ್ಲಿ ರಾಸ್ತಾ ರೋಕೋ ನಡೆಸಲಾಯಿತು. ಅವರನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸಿದರು.* ವಿಳಂಬಕ್ಕೆ ಸಂಸದರೇ ಹೊಣೆ: ಜೆ.ಪಿ. ಹೆಗ್ಡೆ

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಈ ಕಾಮಗಾರಿ ವಿಳಂಬಕ್ಕೆ ಡಿಸಿ ಅಥವಾ ಎಸ್ಪಿಯನ್ನು ಬೈಯ್ಯುವುದು ಸರಿಯಲ್ಲ, ಇದಕ್ಕೆ ಅವರ ಜವಾಬ್ದಾರರಲ್ಲ. ಇದು ಕೇಂದ್ರ ಸರ್ಕಾರದ ಕಾಮಗಾರಿ, ಕೇಂದ್ರದಲ್ಲಿ ಇಲ್ಲಿನ ಪ್ರತಿನಿಧಿಯಾಗಿರುವ ಸಂಸದರು ಈ ವಿಳಂಬಕ್ಕೆ ಜವಾಬ್ದಾರಿಯಾಗಿದ್ದಾರೆ. ಸಂಬಂಧಪಟ್ಟ ಕಚೇರಿಗೆ ಹೋಗಿ ಅನುಮೋದನೆ, ಅನುದಾನ ತರುವ ಕೆಲಸ ಸಂಸದರದ್ದು ಎಂದರು.

ಅಲ್ಲದೇ ಇಲ್ಲಿನ ಸಂಸದರು ಈ ಕಾಮಗಾರಿಯನ್ನು ತಕ್ಷಣ ಮುಗಿಸುವಂತೆ ಡಿಸಿಗೆ ಹೇಳಿದ್ದೇನೆ ಎನ್ನುತ್ತಾರೆ, ಅವರು ಹೇಳಬೇಕಾದದ್ದು ರಾ.ಹೆ. ಪ್ರಾಧಿಕಾರಕ್ಕೆ ಮತ್ತು ರೈಲ್ವೆ ಇಲಾಖೆಗೆ. ಆದರೆ ಅವರಿಗೆ ಯಾರಿಗೆ ಹೇಳಬೇಕು ಎಂದೇ ಗೊತ್ತಿಲ್ಲ ಎಂದವರು ವ್ಯಂಗ್ಯ ಮಾಡಿದರು.

ಕಾಮಗಾರಿ ವಿಳಂಬವಾದಷ್ಟು ಯೋಜನಾ ವೆಚ್ಚ ಹೆಚ್ಚಾಗುತ್ತದೆ. ವೆಚ್ಚ ಹೆಚ್ಚಾದಷ್ಟು ಹೆಚ್ಚು ಅನುದಾನ ತರಿಸಬೇಕಾಗುತ್ತದೆ, ಇದರಿಂದ ಯಾರಿಗೆಲ್ಲಾ ಲಾಭ ಆಗುತ್ತಿದೆಯೋ ಗೊತ್ತಿಲ್ಲ, ಜನರಿಗಂತೂ ನಷ್ಟ ಕಷ್ಟ ಆಗುತ್ತಿದೆ ಎಂದವರು ಟೀಕಿಸಿದರು.

ಬಿಜೆಪಿ ಯಾಕೆ ಪ್ರತಿಭಟಿಸಿಲ್ಲ: ಸೊರಕೆ

ಮಾಜಿ ಸಂಸದ ವಿನಯಕುಮಾರ್ ಸೊರಕೆ ಮಾತನಾಡಿ, ಗೆಲ್ಲುವುದಕ್ಕೆ ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ, ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿ ಭಾವನಾತ್ಮಕ ವಿಷಯಗಳಿಂದ ವೋಟ್ ಸಿಗುತ್ತದೆ ಎಂದು ಕಳೆದ 11 ವರ್ಷಗಳಿಂದ ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಈ ಸೇತುವೆ ಪೂರ್ಣಗೊಳ್ಳುತ್ತಿಲ್ಲ ಎಂದರು.

ಹಾಲಿನ ದರ ಏರಿಕೆಗೆ ಪ್ರತಿಭಟಿಸುವ ಬಿಜೆಪಿಯವರು ಕೇಂದ್ರ ಸರ್ಕಾರ ಪೆಟ್ರೋಲ್‌, ಗ್ಯಾಸ್‌, ಟೋಲ್‌ ದರ ಏರಿಸಿದಾಗ, ಬದುಕುವುದಕ್ಕೆ ಅತ್ಯಗತ್ಯವಾಗಿರುವ ಅಕ್ಕಿ, ಹಾಲಿನ ಮೇಲೂ ಜಿಎಸ್ಟಿ ಹಾಕಿದಾಗ ಯಾಕೆ ಪ್ರತಿಭಟಿಸಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮತ್ತು ಇತರ ಸಂಘಟನೆಗಳ ಪ್ರಮುಖರಾದ ರಮೇಶ್‌ ಕಾಂಚನ್, ಡಾ.ಸುನಿತಾ ಶೆಟ್ಟಿ, ಮಹಾಬಲ ಕುಂದರ್, ಸುರೇಶ್ ಶೆಟ್ಟಿ ಬನ್ನಂಜೆ, ಜ್ಯೋತಿ ಹೆಬ್ಬಾರ್, ಅಶೋಕ್ ಕುಮಾರ್, ಕುಶಾಲ್ ಶೆಟ್ಟಿ, ಕೀರ್ತಿ ಶೆಟ್ಟಿ, ಹರಿಪ್ರಸಾದ್ ರೈ, ಪ್ರಶಾಂತ ಜತ್ತನ್ನ, ರೆನೋಲ್ಡ್ ಪ್ರವೀಣ್ ಕುಮಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರೊ. ಸುರೇಂದ್ರನಾಥ ಶೆಟ್ಟಿ, ಎಂ.ಎ.ಗಫೂರ್, ಬಾಲಕೃಷ್ಣ ಶೆಟ್ಟಿ ಮುಂತಾದವರಿದ್ದರು.

Share this article