ಹೊಸಪೇಟೆ: ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದ ನವಜಾತ ಶಿಶುವೊಂದು ಸಾವನಪ್ಪಿದ ಘಟನೆ ನಗರದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ನಡೆದಿದೆ.
ಹೆರಿಗೆಗೆಂದು ಬುಧವಾರ ರಾತ್ರಿ ನಗರದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ ಮೇಘನಾಗೆ ನರ್ಸಯೊಬ್ಬರು ಹೆರಿಗೆ ಮಾಡಿಸಿದ್ದಾರೆ. ಕರ್ತವ್ಯನಿರತ ವೈದ್ಯೆ ಅನುಪಸ್ಥಿತಿಯಲ್ಲಿ ನರ್ಸ್‌ಗಳು ಹೆರಿಗೆ ಮಾಡಿಸಿದ ವೇಳೆ ನವಜಾತ ಶಿಶುವಿನ ತಲೆ ಅರ್ಧಕ್ಕೆ ನಿಂತು ವಿಲವಿಲ ಒದ್ದಾಡಿ ಹೆಣ್ಣು ಶಿಶು ಸಾವನಪ್ಪಿದೆ.
ತಕ್ಷಣವೇ ತಾಯಿ, ಮಗುವನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ನೀಡಿದ್ಧಾರೆ. ಕೊಪ್ಪಳದ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದಾಗ ಶಿಶು ಸಾವನ್ನಪ್ಪಿದ ಬಗ್ಗೆ ವೈದ್ಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಕುಟುಂಬಸ್ಥರು, ಆಸ್ಪತ್ರೆ ಎದುರು ಮೃತ ಶಿಶುವಿನ ಶವ ಇಟ್ಟು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.ಹೆರಿಗೆ ಸಮಯದಲ್ಲಿ ವೈದ್ಯರಿದ್ದರೇ ಮಗು ಬದುಕುಳಿಯುತಿತ್ತು ಎಂದು ಆರೋಪಿದ ಅವರು, ಕೂಡಲೇ ನಿರ್ಲಕ್ಷ್ಯ ತೋರಿದ ವೈದ್ಯಾಧಿಕಾರಿ ಅಮಾನತುಗೊಳಿಸಲು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಐಟಿಯುನ ಎಂ.ಗೋಪಾಲ, ಬಿಸಾಟಿ ಮಹೇಶ್, ಪವನ್ ಕುಮಾರ್, ಹನಮಾನಾಯ್ಕ, ಬಸವರಾಜ ಸೇರಿದಂತೆ ಆಟೋ ಚಾಲಕರ ಸಂಘ, ಭಗತ್‌ಸಿಂಗ್ ರಕ್ತದಾನಿಗಳ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಮಗುವಿನ ಕುಟುಂಬಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.