ಆಲಮಟ್ಟಿ ಡ್ಯಾಂಗೆ ಒಳ ಹರಿವು ಹೆಚ್ಚಳ

KannadaprabhaNewsNetwork |  
Published : Jun 19, 2025, 12:35 AM IST
18 ಆಲಮಟ್ಟಿ 1 | Kannada Prabha

ಸಾರಾಂಶ

ಆಲಮಟ್ಟಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದು, ಮುಂಜಾಗ್ರತೆಯ ಕ್ರಮವಾಗಿ ನೀರನ್ನು ಹೊರ ಬಿಡಲಾಗುತ್ತಿದೆ. ಬುಧವಾರ ಜಲಾಶಯದಿಂದ 70 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಬುಧವಾರ ಬೆಳಿಗ್ಗೆ 50,000 ಕ್ಯುಸೆಕ್ ಇದ್ದ ಹೊರ ಹರಿವು ಸಂಜೆ 7 ಗಂಟೆ ವೇಳೆ 70 ಸಾವಿರ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.

ಆಲಮಟ್ಟಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದು, ಮುಂಜಾಗ್ರತೆಯ ಕ್ರಮವಾಗಿ ನೀರನ್ನು ಹೊರ ಬಿಡಲಾಗುತ್ತಿದೆ. ಬುಧವಾರ ಜಲಾಶಯದಿಂದ 70 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಬುಧವಾರ ಬೆಳಿಗ್ಗೆ 50,000 ಕ್ಯುಸೆಕ್ ಇದ್ದ ಹೊರ ಹರಿವು ಸಂಜೆ 7 ಗಂಟೆ ವೇಳೆ 70 ಸಾವಿರ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.

ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ವರುಣನ ಅರ್ಭಟ ಮುಂದುವರೆದಿದ್ದು, ಕೊಯ್ನಾ, ನವಜಾ, ಮಹಾಬಳೇಶ್ವರ, ರಾಧಾನಗರಿ, ದೂಧಗಂಗಾ, ವಾರಣಾ ಮತ್ತಿತರ ಕಡೆ ಭಾರಿ ಮಳೆಯಾಗುತ್ತಿದೆ. ಮಳೆಯ ಅಬ್ಬರ ಬುಧವಾರವೂ ಮುಂದುವರೆದಿದೆ. ಹೀಗಾಗಿ ಕಲ್ಲೋಳ ಬ್ಯಾರೇಜ್‌ಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಹೊರಹರಿವನ್ನು ಮುಂಜಾಗ್ರತೆಯ ಕ್ರಮವಾಗಿ ಹೆಚ್ಚಿಸಲಾಗಿದೆ. 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ 515.48 ಮೀ ಎತ್ತರದವರೆಗೆ ನೀರಿದ್ದು, ಜಲಾಶಯದಲ್ಲಿ 67.665 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯದ ಶೇ.54 ರಷ್ಟು ಮಾತ್ರ ಭರ್ತಿಯಾಗಿದೆ. ಸಂಜೆಯ ವೇಳೆಗೆ ಜಲಾಶಯದ ಒಳಹರಿವು 78,250 ಕ್ಯೂಸೆಕ್ ಗೆ ಹೆಚ್ಚಳವಾಗಿದೆ.ನಾಳೆ ಒಳಹರಿವು ಹೆಚ್ಚಳವಾದರೆ ಹೊರಹರಿವು ಮತ್ತಷ್ಟು ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ ತಿಂಗಳಲ್ಲಿಯೇ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದ ಕಾರಣ, ಜಲಾಶಯದ ಶೇ.54 ರಷ್ಟು ಭರ್ತಿಯಾದರೂ ಹೊರಹರಿವನ್ನು ಹೆಚ್ಚಿಸಲಾಗಿದೆ. ಯಾವುದೇ ಮಹಾಪೂರ ಬರಬಾರದು ಎಂಬ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜುಲೈ ನಂತರ ಜಲಾಶಯ ಕ್ರಮೇಣ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಈಗ ಮಹಾಪೂರದ ಸಮಯದ ಕಾರಣ ಸಾಕಷ್ಟು ಅಂತರ ಕಾಯ್ದುಕೊಂಡು ಹೊರಹರಿವನ್ನು ಹೆಚ್ಚಿಸಲಾಗಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು. ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಘಟಕದ ಮೂಲಕ 42,500 ಕ್ಯೂಸೆಕ್ ನೀರು ಬಿಟ್ಟ ಕಾರಣ ಕೇಂದ್ರದ ಆರು ಘಟಕಗಳು ಕಾರ್ಯಾರಂಭ ಮಾಡಿವೆ. ಅದರ ಮೂಲಕ ಸದ್ಯ 225 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಅಧಿಕಾರಿಗಳು ತಿಳಿಸಿದರು. ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ. ನದಿ ತೀರಕ್ಕೆ ಜನ, ಜಾನುವಾರು ಸುಳಿಯದಂತೆ, ನದಿಗೆ ಇಳಿಯದಂತೆ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ ಎಂದು ತಹಸೀಲ್ದಾರ್ ಎ.ಡಿ.ಅಮರವಾಡಗಿ ತಿಳಿಸಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''