ಸಾಮರ್ಥ್ಯ ಸದ್ಬಳಕೆ ಮಾಡಿಕೊಳ್ಳುವವನೇ ಸಾಧಕ

KannadaprabhaNewsNetwork |  
Published : Jun 19, 2025, 12:35 AM IST
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೫ ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪುಸ್ತಕ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಲಾಯಿತು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಗತ್ತಿನಲ್ಲಿ ಎಲ್ಲವನ್ನು ಸಾಧಿಸಬಲ್ಲ ಶಕ್ತಿ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ ಯಾವ ವ್ಯಕ್ತಿಯೂ ತನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಾನೋ ಆತ ಮಾತ್ರ ಸಾಧಕನಾಗಿ ಹೊರ ಹೊಮ್ಮುತ್ತಾನೆ. ಸಾಧನೆ ಎಂಬುದು ಸಾಧಕನ ಸ್ವತ್ತಾಗಿರುತ್ತದೆಯೇ ಹೊರತು ಯಾವತ್ತೂ ಸೋಮಾರಿಯ ಸ್ವತ್ತಾಗಲ್ಲ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಸಾಮರ್ಥ್ಯವನ್ನು ಸದ್ಭಳಕೆ ಮಾಡಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ್ ಯಲಿಗಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಗತ್ತಿನಲ್ಲಿ ಎಲ್ಲವನ್ನು ಸಾಧಿಸಬಲ್ಲ ಶಕ್ತಿ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ ಯಾವ ವ್ಯಕ್ತಿಯೂ ತನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಾನೋ ಆತ ಮಾತ್ರ ಸಾಧಕನಾಗಿ ಹೊರ ಹೊಮ್ಮುತ್ತಾನೆ. ಸಾಧನೆ ಎಂಬುದು ಸಾಧಕನ ಸ್ವತ್ತಾಗಿರುತ್ತದೆಯೇ ಹೊರತು ಯಾವತ್ತೂ ಸೋಮಾರಿಯ ಸ್ವತ್ತಾಗಲ್ಲ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಸಾಮರ್ಥ್ಯವನ್ನು ಸದ್ಭಳಕೆ ಮಾಡಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ್ ಯಲಿಗಾರ ಹೇಳಿದರು.

ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೫ ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪುಸ್ತಕ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದು ವಿದ್ಯಾರ್ಥಿಗಳು ಸಣ್ಣ ಸಣ್ಣ ಸೋಲುಗಳಿಗೆ ಕುಗ್ಗಿ ಹೋಗುತ್ತಾರೆ. ಈ ಕಾರಣದಿಂದಾಗಿ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇಲ್ಲಿಯವರೆಗೂ ನಾವು ಕೇವಲ ಶೇ.೫ ಮಾತ್ರ ನಮ್ಮನ್ನು ಅರ್ಥ ಮಾಡಿಕೊಂಡಿದ್ದೇವೆ. ಇನ್ನೂ ಶೇ.೯೫ ನಮಗೆ ನಾವೇ ಅರ್ಥವಾಗದೇ ಉಳಿದಿದ್ದೇವೆ. ಹೀಗಾಗಿಯೇ ನಾವು ಬೇರೆಯವರನ್ನು ನಂಬಿದಷ್ಟು ನಮ್ಮನ್ನು ತಾವು ನಂಬುತ್ತಿಲ್ಲ. ಎಲ್ಲಿಯವರೆಗೆ ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಅಂದುಕೊಂಡಿದ್ದನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಸತತ ಪರಿಶ್ರಮ ಪಟ್ಟಾಗ ಮಾತ್ರ ಗೆಲುವು ದಕ್ಕುತ್ತದೆ. ಯಶಸ್ಸು ಎಂದರೆ ಅದು ರಾತ್ರೋ ರಾತ್ರಿ ಜರುಗುವ ಪವಾಡವಲ್ಲ. ಎಷ್ಟೋ ವರ್ಷಗಳ ತಪ್ಪಸ್ಸಿನ ಒಟ್ಟು ಮೊತ್ತವಾಗಿರುತ್ತದೆ. ಬರೀ ಎಂಜಿನೀಯರ್, ಡಾಕ್ಟರ್ ಎನ್ನುವ ಕಡೆ ಗೋಲು ನಿಗದಿ ಪಡಿಸಿಕೊಳ್ಳದೇ ಬೇಸಿಕ್ ಸೈನ್ಸ್‌ ಕಡೆಗೂ ಗಮನ ಹರಿಸಿದಲ್ಲಿ ವಿಫುಲ ಅವಕಾಶಗಳ ಜೊತೆಗೆ ಉತ್ತಮ ಭವಿಷ್ಯ ದೊರೆಯುತ್ತದೆ ಎಂದು ಹೇಳಿದರು.

ಉದ್ಯಮಿ ಶಾಂತೇಶ ಕಳಸಗೊಂಡ ಮಾತನಾಡಿ, ಸ್ವಾಮಿ ವಿವೇಕಾನಂದರು ಶಕ್ತಿಯೇ ಜೀವನ ನಿಶ್ಯಕ್ತಿಯೇ ಮರಣ ಎಂದು ಹೇಳಿದ್ದಾರೆ. ಹೀಗಾಗಿ ನನ್ನಿಂದ ಆಗುವುದಿಲ್ಲ ಎಂದು ಕುಳಿತುಕೊಂಡರೆ ಯಾವುದನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಹೋಟೆಲ್ ಕ್ಲೀನರ್ ಆಗಿ ಇಷ್ಟೇ ನನ್ನ ಜೀವನ ಎಂದುಕೊಂಡು ಕೂತಿದ್ದರೆ ೨೨ ಹೊಟೆಲ್‌ಗಳ ಮಾಲೀಕನಾಗುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಧನಾತ್ಮಕ ವಿಚಾರಧಾರೆಗಳು. ನೀವು ಧನಾತ್ಮಕವಾಗಿ ಚಿಂತನೆ ಮಾಡಿದರೆ ಬದುಕಿನಲ್ಲಿ ಯಶಸ್ಸು ಕಾಣುತ್ತೀರಿ ಎಂದು ಕಿವಿಮಾತು ಹೇಳಿದರು.

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಸತ್ಯ ಶೋಧನೆಯ ದಾರಿಯಲ್ಲಿ ಹೊರಟ ಸಿದ್ಧಾರ್ಥ ನನ್ನಿಂದ ಆಗದು ಎಂದು ಮರಳಿ ಬಂದಿದ್ದರೆ ಬುದ್ಧನಾಗುತ್ತಿರಲಿಲ್ಲ. ನಾನು ಚಿಕ್ಕವನಿದ್ದೇನೆ ನನ್ನಿಂದ ಏನಾಗುತ್ತದೆ ಎಂದು ಹಿಂದೆ ಹೆಜ್ಜೆ ಇಟ್ಟಿದ್ದರೆ ವೈಭವ್ ಸೂರ್ಯವಂಶಿ ಐಪಿಎಲ್ ನಲ್ಲಿ ದಾಖಲೆ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಚಾಂಪಿಯನ್‌ಗಳ ಎದುರು ನಾನೇನು ಮಾಡುವದಕ್ಕೆ ಸಾಧ್ಯವಾಗುತ್ತದೆ ಎಂದು ಕೈಕಟ್ಟಿ ಕೂತಿದ್ದರೆ ಗುಕೇಶ್ ಚದುರಂಗದ ಚಾಂಪಿಯನ್ ಆಗಿ ಹೊರ ಹೊಮ್ಮುವುದಕ್ಕೆ ಆಗುತ್ತಿರಲಿಲ್ಲ. ಹಾಗೆಯ ಇಂದು ಆ ವಿಷಯ ಕಠಿಣವಿದೆ ಈ ವಿಷಯ ಕಬ್ಬಿಣದ ಕಡಲೆಯಾಗಿದೆ ಎಂದುಕೊಂಡು ಕೂತರೆ ಕಾಲೇಜು ಶಿಕ್ಷಣ ಪೂರೈಸುವುದಕ್ಕೆ ಸಾಧ್ಯವಿಲ್ಲ. ಎಲ್ಲಿ ಕಠಿಣತೆ ಇದೆಯೋ ಅಲ್ಲಿ ಶ್ರೇಷ್ಠತೆ ಇರುತ್ತದೆ. ಕಠಿಣತೆಯನ್ನು ಬೇಧಿಸಿದಲ್ಲಿ ಶ್ರೇಷ್ಠತೆ ಹೊರ ಹೊಮ್ಮುತ್ತದೆ. ಆ ನಿಟ್ಟಿನಲ್ಲಿ ನೀವು ಎದೆಗುಂದದೆ ಮುನ್ನಗ್ಗಬೇಕು ಎಂದು ಸಲಹೆ ನೀಡಿದರು.

ಉಪ ನಿರ್ದೇಶಕರ ಕಚೇರಿಯ ಶಾಲಾ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಕ್ಸಲಂಟ್ ಪ್ರಕಾಶನ ಸಂಸ್ಥೆಯ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಸ್ವಾಗತಿಸಿದರು, ಆಂಗ್ಲ ವಿಭಾಗದ ಉಪನ್ಯಾಸಕ ಶ್ರದ್ಧಾ ಜಾಧವ ನಿರೂಪಿಸಿದರು, ಮುಸ್ತಾಕ ಮಲಘಾಣ ವಂದಿಸಿದರು.

---------

ಕೋಟ್‌ಸತ್ಯ ಶೋಧನೆಯ ದಾರಿಯಲ್ಲಿ ಹೊರಟ ಸಿದ್ಧಾರ್ಥ ನನ್ನಿಂದ ಆಗದು ಎಂದು ಮರಳಿ ಬಂದಿದ್ದರೆ ಬುದ್ಧನಾಗುತ್ತಿರಲಿಲ್ಲ. ನಾನು ಚಿಕ್ಕವನಿದ್ದೇನೆ ಎಂದು ಹೆಜ್ಜೆ ಹಿಂದೆ ಇಟ್ಟಿದ್ದರೆ ವೈಭವ್ ಸೂರ್ಯವಂಶಿ ಐಪಿಎಲ್ ನಲ್ಲಿ ದಾಖಲೆ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಚಾಂಪಿಯನ್‌ಗಳ ಎದುರು ನಾನೇನು ಮಾಡುವದಕ್ಕೆ ಸಾಧ್ಯವಾಗುತ್ತದೆ ಎಂದು ಕೈಕಟ್ಟಿ ಕೂತಿದ್ದರೆ ಗುಕೇಶ್ ಚದುರಂಗದ ಚಾಂಪಿಯನ್ ಆಗಿ ಹೊರ ಹೊಮ್ಮುವುದಕ್ಕೆ ಆಗುತ್ತಿರಲಿಲ್ಲ. ಎಲ್ಲಿ ಕಠಿಣತೆ ಇದೆಯೋ ಅಲ್ಲಿ ಶ್ರೇಷ್ಠತೆ ಇರುತ್ತದೆ.ಬಸವರಾಜ ಕೌಲಗಿ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ