ವಸ್ತುಪ್ರದರ್ಶನದಿಂದ ರೈತರಿಗೆ, ಉದ್ಯಮಿಗಳಿಗೆ ಮಾಹಿತಿ

KannadaprabhaNewsNetwork |  
Published : Feb 19, 2025, 12:49 AM IST

ಸಾರಾಂಶ

ಪ್ರತಿವರ್ಷ ಹೊಸತನವನ್ನು ಈ ವಸ್ತುಪ್ರದರ್ಶನದಲ್ಲಿ ಕಾಣಬಹುದು. ಇದರಿಂದ ಶ್ರೀಶಿವಕುಮಾರ ಸ್ವಾಮೀಜಿಗಳ ಆಶಯ ಈಡೇರಿದಂತಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ನುಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಿದ್ದಗಂಗೆಯ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ದೂರದೃಷ್ಟಿಯ ಫಲವಾದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ರೈತರಿಗೆ, ಕೈಗಾರಿಕೋದ್ಯಮಿಗಳಿಗೆ ಮಾಹಿತಿ ಒದಗಿಸುವ ಒಂದು ವೇದಿಕೆಯಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

ಸಿದ್ದಗಂಗಾ ಮಠದ ವತಿಯಿಂದ ನಡೆಯುವ ಶ್ರೀಸಿದ್ದಲಿಂಗೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸುಮಾರು 61 ವರ್ಷಗಳ ಹಿಂದೆ ಡಾ. ಶಿವಕುಮಾರ ಸ್ವಾಮೀಜಿಗಳು ಮಠಕ್ಕೆ ಬರುವ ಭಕ್ತರಿಗೆ ಧಾರ್ಮಿಕ ಉತ್ಸವ, ಆಚರಣೆಗಳ ಜೊತೆಗೆ, ಕೃಷಿ ಮತ್ತು ಕೃಷಿಗೆ ಪೂರಕವಾದ ಅಂಶಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ವಸ್ತುಪ್ರದರ್ಶನವನ್ನು ಆಯೋಜಿಸಿದ್ದು, ಶ್ರೀಸಿದ್ದಲಿಂಗಸ್ವಾಮೀಜಿಗಳು ಅದನ್ನು ಮುಂದುವರೆಸಿಕೊಂಡು ಬರುತಿದ್ದಾರೆ ಎಂದರು.

ಸಿದ್ದಗಂಗಾ ಮಠದ ಭಕ್ತರು, ಇಲ್ಲಿಗೆ ಬರುವ ರೈತರು, ಉದ್ಯಮಿದಾರರಿಗೆ ದೇಶದಲ್ಲಿ ನಡೆಯುವ ಹೊಸ ಅವಿಷ್ಕಾರದ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಆರಂಭಿಸಿದ ವಸ್ತು ಪ್ರದರ್ಶನವನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ಯಾವುದೇ ರೀತಿಯ ಲೋಪದೋಷಗಳು ಬರದಂತೆ ಹಲವಾರು ವರ್ಷಗಳಿಂದ ಸುಸೂತ್ರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ಹೊಸತನವನ್ನು ಈ ವಸ್ತುಪ್ರದರ್ಶನದಲ್ಲಿ ಕಾಣಬಹುದು. ಇದರಿಂದ ಶ್ರೀಶಿವಕುಮಾರ ಸ್ವಾಮೀಜಿಗಳ ಆಶಯ ಈಡೇರಿದಂತಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ನುಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸಿದ್ದಗಂಗಾ ಜಾತ್ರೆಯ ವಿಶೇಷತೆ ಎಂದರೆ ಅದು ವಸ್ತು ಪ್ರದರ್ಶನ, ಖಾಸಗಿ ಸಂಸ್ಥೆಯೊಂದು ಸರ್ಕಾರದ ಸಹಕಾರದೊಂದಿಗೆ ಇಷ್ಟೊಂದು ಸುದೀರ್ಘ ಕಾಲದವರೆಗೆ ವಸ್ತು ಪ್ರದರ್ಶನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಿದ್ದಗಂಗ ಮಠ ಕೇವಲ ಧಾರ್ಮಿಕ ಉತ್ಸವಗಳನ್ನೇ ನೀಡದೆ, ಕೃಷಿ, ಕೈಗಾರಿಕೆಗೆ ಪೂರಕ ಮಾಹಿತಿಗಳನ್ನು ಒದಗಿಸುವ ಒಂದು ವೇದಿಕೆಯಾಗಿ ಪರಿವರ್ತನೆಯಾಗಿದೆ ಎಂದರು.

ಕೃಷಿ ನಮ್ಮ ದೇಶದ ಬೆನ್ನೆಲುಬು. ಹಾಗಾಗಿ ಕೃಷಿಕರಿಗೆ ಈ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳ ಮಾಹಿತಿ ನೀಡುವುದು, ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ, ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಸರ್ಕಾರದ ಸವಲತ್ತುಗಳನ್ನು ಜನರು ಹೇಗೆ ಪಡೆದುಕೊಳ್ಳಬೇಕು ಎಂಬುದು ಪ್ರತಿ ಇಲಾಖೆ ತಮ್ಮ ಮಳಿಗೆ ತೆರೆದು ಮಾಹಿತಿ ನೀಡುತಿದ್ದಾರೆ. 15 ದಿನಗಳ ಕಾಲ ನಡೆಯುವ ಈ ವಸ್ತುಪ್ರದರ್ಶನದ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ಮಲ್ಲಿಕಾರ್ಜುನ್, ಶೇಖರ್, ಶ್ರೀನಿವಾಸ್, ರಾಜಶೇಖರ್, ವಿಶ್ವಣ್ಣ, ವಸ್ತುಪ್ರದರ್ಶನ ಆಯೋಜನಾ ಸಮಿತಿಯ ಕಾರ್ಯದರ್ಶಿ ಪ್ರೊ. ಗಂಗಾಧರಯ್ಯ,ಬಿ, ಜಂಟಿ ಕಾರ್ಯದರ್ಶಿಗಳಾದ ಕೆಂ.ಬ.ರೇಣುಕಯ್ಯ, ಎಸ್.ಶಿವಕುಮಾರ್, ಸಾಂಸ್ಕೃತಿಕ ಸಮಿತಿಯ ಉಮಾಮಹೇಶ್, ಮೈದಾಳ ಮಂಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಇಲಾಖೆಗಳಿಂದ ತೆರೆದಿರುವ ಮಳಿಗೆಗಳನ್ನು ಶಾಸಕರು ವೀಕ್ಷಿಸಿ ಮಾಹಿತಿ ಪಡೆದರು.ಫೋಟೋ: ಸಿದ್ದಗಂಗಾ ಮಠದ ವತಿಯಿಂದ ನಡೆಯುವ ಶ್ರೀಸಿದ್ದಲಿಂಗೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಕ್ಕಲಿಗರು ಸಂಘಟಿತರಾಗುವುದು ಅಗತ್ಯ: ಶ್ರೀಗಳ ಕರೆ
ಆಹಾರ ಉತ್ಪನ್ನಗಳ ಆರೋಗ್ಯಕ್ಕೂ ಗಮನಹರಿಸಿ: ಡಾ.ಸಿಂಧೂರು ಗಣಪತಿ