30 ದಿನದೊಳಗೆ ಮಾಹಿತಿ: ಡಾ ಹರೀಶ್ ಕುಮಾರ್

KannadaprabhaNewsNetwork |  
Published : Dec 21, 2025, 03:45 AM IST
ಚಿತ್ರ :  21ಎಂಡಿಕೆ1 : ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಉತ್ತರದಾಯಿತ್ವ ಹೊಂದಿರಬೇಕು. ಜೊತೆಗೆ ಪಾರದರ್ಶಕತೆ ಇದ್ದಲ್ಲಿ ವಿಚಲಿತರಾಗುವ ಅಗತ್ಯವಿಲ್ಲ ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸರ್ಕಾರಿ ನೌಕರರ ರಕ್ಷಣೆ ಮತ್ತು ಭದ್ರತೆಗಾಗಿ ಮಾಹಿತಿ ಹಕ್ಕು ಕಾಯ್ದೆ ಇದೆ ಎಂದು ಭಾವಿಸಬೇಕೇ ಹೊರತು, ಇದರಿಂದ ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗುತ್ತದೆಯೆಂದು ಭಾವಿಸಬಾರದು ಎಂದು ರಾಜ್ಯ ಮಾಹಿತಿ ಆಯುಕ್ತ ಡಾ ಹರೀಶ್ ಕುಮಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ ಹಾಗೂ ಸಂವಾದದಲ್ಲಿ ಮಾತನಾಡಿದರು.

ಮಾಹಿತಿ ಆಯುಕ್ತ ಬದ್ರುದ್ದೀನ್ ಕೆ. ಮಾತನಾಡಿ ಮಾಹಿತಿ ಹಕ್ಕು ನಿಯಮದಡಿ ಸಲ್ಲಿಕೆಯಾದ ಅರ್ಜಿಗೆ ನಿಯಮಾನುಸಾರ 30 ದಿನದೊಳಗೆ ಮಾಹಿತಿ ಒದಗಿಸಬೇಕು ಎಂದು ಸಲಹೆ ನೀಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಉತ್ತರದಾಯಿತ್ವ ಹೊಂದಿರಬೇಕು. ಜೊತೆಗೆ ಪಾರದರ್ಶಕತೆ ಇದ್ದಲ್ಲಿ ವಿಚಲಿರಾಗುವ ಅಗತ್ಯವಿಲ್ಲ ಎಂದರು. ತಪ್ಪುಗಳನ್ನು ತಿದ್ದಿ ನಡೆಯುವುದು ಅತ್ಯಗತ್ಯ. ಅದನ್ನು ಬಿಟ್ಟು ಸುಳ್ಳು ಮಾಹಿತಿ ನೀಡಿ ಪೇಚಿಗೆ ಸಿಲುಕಬಾರದು. ಸತ್ಯ ಮಾಹಿತಿ ನೀಡಿದ್ದಲ್ಲಿ ಕ್ಷಮೆಗೂ ಅರ್ಹರಿರುತ್ತಾರೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.ಕೆಡಿಪಿ ಸಭೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ಸಲ್ಲಿಕೆ, ವಿಲೇವಾರಿ ಮತ್ತಿತರ ವಿಷಯ ಚರ್ಚಿಸಿದ್ದಲ್ಲಿ ಸಮಸ್ಯೆಯನ್ನು ಜಿಲ್ಲಾ ಮಟ್ಟದಲ್ಲಿಯೇ ಪರಿಹರಿಸಿಕೊಳ್ಳಬಹುದು ಎಂದರು.ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಮಾಹಿತಿ ಹಕ್ಕು ಸಹಕಾರಿ. ಹಾಗಾಗಿ ಅಧಿಕಾರಿಗಳು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಮಾಹಿತಿ ಹಕ್ಕು ಕಾಯ್ದೆಯನ್ನು ಮನನ ಮಾಡಿಕೊಳ್ಳಬೇಕು ಎಂದರು.‘ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರ ಜೊತೆ ಯಾವುದೇ ಕಾರಣಕ್ಕೂ ಕರೆ ಮಾಡಿ ಮಾತನಾಡಬಾರದು. ಅಡ್ಡದಾರಿ ಹಿಡಿಯಬಾರದು ಎಂದು ಬದ್ರುದ್ದೀನ್ ಸಲಹೆ ನೀಡಿದರು.ನಿಯಮ 4(1)ಎ ಮತ್ತು 4(1) (ಬಿ)ರಡಿ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಬೇಕು. ನಿಖರ, ನಿರ್ದಿಷ್ಟ ಹಾಗೂ ಸ್ಪಷ್ಟವಾಗಿ 150 ಶಬ್ದಗಳಲ್ಲಿ ಮಾಹಿತಿ ಒದಗಿಸಬೇಕು. ಯಾವುದೇ ಕಾರಣಕ್ಕೂ ಕ್ರೋಢೀಕರಿಸಿ ಮಾಹಿತಿ ನೀಡಬಾರದು ಎಂದರು. ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರದಲ್ಲಿ 60 ಲಕ್ಷ ಅರ್ಜಿಗಳು ಬಾಕಿ ಇವೆ. ರಾಜ್ಯದಲ್ಲಿ 6 ಲಕ್ಷ ಅರ್ಜಿ, ಜಿಲ್ಲೆಯಲ್ಲಿ 38 ಸಾವಿರ ಅರ್ಜಿಗಳು ಇದ್ದು, ರಾಜ್ಯದಲ್ಲಿ ಕೊಡಗು ಜಿಲ್ಲೆ ಕೊನೆ ಸ್ಥಾನದಲ್ಲಿದೆ. ಇದನ್ನು ಸೊನ್ನೆಗೆ ತರಬೇಕು ಎಂದರು. ಮಾಹಿತಿ ಆಯುಕ್ತರಾದ ಡಾ.ಹರೀಶ್ ಕುಮಾರ್ ಅವರು ಮಾತನಾಡಿ ಸರ್ಕಾರಿ ನೌಕರರನ್ನು ಸಾರ್ವಜನಿಕರು ನೋಡುವ ದೃಷ್ಟಿ, ಸರ್ಕಾರಿ ನೌಕರರು ಸಮಾಜವನ್ನು ನೋಡುವ ದೃಷ್ಟಿ ಎರಡನ್ನು ಗಮನಿಸಬೇಕು ಎಂದರು. ಸ್ವೀಡನ್ ದೇಶದಲ್ಲಿ 1776 ರಲ್ಲಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸಲಾಗಿದೆ. ಕರ್ನಾಟಕ ಇಡೀ ದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯ ಎಂದರು. ಮಾಹಿತಿ ಹಕ್ಕು ಅಧಿನಿಯಮವು 2005 ರಲ್ಲಿ ಜಾರಿಗೆ ಬಂದಿದ್ದು, ಉತ್ತಮ ಆಡಳಿತ, ದಕ್ಷತೆ ಮತ್ತು ಪಾರದರ್ಶಕತೆ ತರುವುದು ಉದ್ದೇಶವಾಗಿದೆ ಎಂದರು. ಮಾಹಿತಿ ಹಕ್ಕು ಕಾಯ್ದೆ ಇರುವುದರಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸರ್ಕಾರಿ ನೌಕರರ ರಕ್ಷಣೆ ಇದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು. ‘ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಕೆಯಾದ 30 ದಿನದೊಳಗೆ ಮಾಹಿತಿ ನೀಡಬೇಕು. ಮಾಹಿತಿ ನೀಡದಿದ್ದಲ್ಲಿ 25 ಸಾವಿರ ದಂಡ ವಿಧಿಸಲಾಗುತ್ತದೆ. ಜೊತೆಗೆ ತಪ್ಪು ಮಾಡಿದ್ದಲ್ಲಿ 5 ವರ್ಷ ಜೈಲು ಶಿಕ್ಷೆ ಇದೆ. ಆದ್ದರಿಂದ ದಾಖಲೆ ನಿರ್ವಹಣೆ ಅತೀ ಮುಖ್ಯ ಎಂದು ಡಾ.ಹರೀಶ್ ಕುಮಾರ್ಹೇ ಹೇಳಿದರು.ಅರ್ಜಿ ಸಲ್ಲಿಸಿದವರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ 100 ಪುಟಗಳವರೆಗೆ ಉಚಿತವಾಗಿ ಮಾಹಿತಿ ನೀಡಬೇಕು. ಉಳಿದಂತೆ ಪ್ರತಿ ಪುಟಕ್ಕೆ 2 ರೂ.ನಂತೆ ಶುಲ್ಕ ಪಾವತಿಸಿಕೊಂಡು ಮಾಹಿತಿ ಒದಗಿಸಬೇಕು ಎಂದರು.

ಮಾಹಿತಿ ಹಕ್ಕು ಕಾಯ್ದೆಯನ್ನು ಜನರು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಮಾಹಿತಿ ಹಕ್ಕು ಕಾಯ್ದೆಯಡಿ ವೈಯಕ್ತಿಕ ವಿವರ ಬೇಕಿಲ್ಲ. ಮಾಹಿತಿ ಹಕ್ಕು ಕಾಯ್ದೆ ಬಲಪಡಿಸುವುದು, ಜೊತೆಗೆ ದುರುಪಯೋಗ ತಡೆಯಲು ಆಯೋಗ ಮುಂದಾಗಿದೆ ಎಂದರು. ಇತ್ತೀಚೆಗೆ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಸಹ ಸಲ್ಲಿಕೆಯಾಗುತ್ತಿವೆ ಎಂದು ಮಾಹಿತಿ ಆಯುಕ್ತರು ವಿವರಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಮಾಹಿತಿ ಹಕ್ಕು ಕಾಯ್ದೆಯು ಸರ್ಕಾರಿ ನೌಕರರಿಗೆ ಕೆಲಸ ಮಾಡಲು ಅಡ್ಡ ಬರುತ್ತದೆ ಎಂದು ಭಾವಿಸದೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಿದೆ ಎಂದು ತಿಳಿದುಕೊಳ್ಳಬೇಕು ಎಂದರು.ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಪ್ರತಿಯೊಬ್ಬರಲ್ಲೂ ತಿಳುವಳಿಕೆ ಇರಬೇಕು. ಸಾರ್ವಜನಿಕ ಕೆಲಸ ಮಾಡುವಾಗ ಎಚ್ಚರವಹಿಸಬೇಕು. ಸಾರ್ವಜನಿಕ ಅಧಿಕಾರಿ ಯಾರೇ ಮಾಹಿತಿ ಕೇಳಿದರೂ ಸಹ ನೀಡಬೇಕು ಎಂದರು. ಸಾಧ್ಯವಿದ್ದಲ್ಲಿ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಭೂಸುರಕ್ಷಾ ಯೋಜನೆಯಡಿ ಡಿಜಿಟಲೀಕರಣವಾಗುತ್ತಿದ್ದು, ರಾಜ್ಯದಲ್ಲಿ ಕೊಡಗು ಪ್ರಥಮ ಜಿಲ್ಲೆಯಾಗಿದೆ. ಮುಂದಿನ ದಿನಗಳಲ್ಲಿ ಶೇಕಡಾವಾರು ಪ್ರಗತಿ ಸಾಧಿಸಲು ಪ್ರಯತ್ನ ಸಾಗಿದೆ ಎಂದರು.ಮಾಹಿತಿ ಹಕ್ಕು ಕಾಯ್ದೆಯಡಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಕೆಯಾಗುತ್ತಿದ್ದು, ಈ ಬಗ್ಗೆಯೂ ಸಹ ಗಮನಹರಿಸಬೇಕು ಎಂದು ಬದ್ರುದ್ದೀನ್ ಅವರು ಹೇಳಿದರು.ಸರ್ಕಾರಿ ಕಚೇರಿಗಳಲ್ಲಿ ಇ-ಕಚೇರಿ, ಇ-ಆಡಳಿತ ವ್ಯವಸ್ಥೆ ವೇಗ ಪಡೆಯುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಹರೀಶ್ ಕುಮಾರ್ ಅವರು ಸಲಹೆ ನೀಡಿದರು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವವರು ಮಾಹಿತಿ ಹಕ್ಕು ಕಾರ್ಯಕರ್ತ ಎಂದು ಬಿಂಬಿಸಿಕೊಳ್ಳುತ್ತಿರುವ ಬಗ್ಗೆ ಗಮನಸೆಳೆದಾಗ ಪ್ರತಿಕ್ರಿಯಿಸಿದ ಬದ್ರುದ್ದೀನ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವವರು ಅವರೊಬ್ಬ ಅರ್ಜಿದಾರರೇ ಹೊರತು ಯಾವುದೇ ವಿಶೇಷ ಪ್ರಾಧಾನ್ಯತೆ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು. ಮಾಹಿತಿ ಹಕ್ಕು ಕಾಯ್ದೆ ಸಂಬಂಧಿಸಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ವಿಷಯ ಪ್ರಸ್ತಾಪಿಸಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ