ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಶ್ರೀ ತಲಕಾವೇರಿ ಜ್ಞಾನವಿಕಾಸ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಭಾನುವಾರ ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕಾನ್‌ಬೈಲ್ ಕಾರ್ಯಕ್ಷೇತ್ರದ ಶ್ರೀ ಕ್ಷೇತ್ರ ಧ.ಗ್ರಾ.ಯೋ. ಕಾನ್‌ಬೈಲ್ ವ್ಯಾಪ್ತಿಯ ಸ್ವಸಹಾಯ ಸಂಘದ ಸದಸ್ಯರಿಗೆ ಸ್ವ ಉದ್ಯೋಗ ಹಾಗೂ ಆರೋಗ್ಯದ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮಾಹಿತಿ ಕಾರ್ಯಗಾರವನ್ನು ಉದ್ದೇಶಿಸಿ ಕೂಡಿಗೆ ಸ್ವ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕರಾದ ರವೀಶ್ ಕುಮಾರ್ ಮಾತನಾಡಿ, ಕಳೆದ 12 ವರ್ಷಗಳಿಂದ ನಮ್ಮ ಸಂಸ್ಥೆಯು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದು ಸಾವಿರಾರು ಮಂದಿ ಯುವಜನತೆಯ ಪಾಲಿಗೆ ಸಂಜೀವಿನಿಯಾಗಿ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳ ಯುವಜನತೆಗೆ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದೆ. ಪ್ರತಿಯೊಬ್ಬ ತನ್ನದೆಯಾದ ಪ್ರತಿಭೆಯನ್ನು ಹೊಂದಿರುತ್ತಾರೆ. ಅದನ್ನು ಸಕಾರಗೊಳಿಸಲು ತರಬೇತಿಗಳಿಗೆ ತೆರಳಿ ತಮಗಿರುವ ಆಸಕ್ತಿಯ ತಿಳಿಸಿದಲ್ಲಿ ಸ್ವ ಉದ್ಯೋಗಗಳಿಗೆ ಅನುಸಾರವಾಗಿ ತರಬೇತಿಯನ್ನು ಪಡೆದುಕೊಂಡು ತಮ್ಮ ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ ಎಂದರು.ಇಲ್ಲಿ ತರಬೇತಿ ಪಡೆದ ಅದೇಷ್ಟೋ ಮಂದಿ ನಗರ ಪ್ರದೇಶಗಳಿಗೆ ತೆರಳಿ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಕೂಡಿಗೆಯ ತರಬೇತಿ ಕೇಂದ್ರಗಳಲ್ಲಿ ಟೈಲರಿಂಗ್, ಎಂಬ್ರಾಯಿಡರ್, ಕುಚುಹಾಕುವುದು, ಪಿನಾಯಿಲ್, ಸೋಪ್‌ತಳಿ ಹಾಗೂ ತ್ವರಿತ ಆಹಾರ ( ಪಾಸ್ಟ್ಪುಡ್), ಬೇಕರಿ ತಿಂಡಿ ತಿನ್ನಿಸುಗಳ ತಯಾರಿಕ ತರಬೇತಿಯನ್ನು ನೀಡಲಾಗುವುದು. ತರಬೇತಿ ಪಡೆದ ತರಬೇತುದಾರರಿಗೆ ಪ್ರಮಾಣ ಪತ್ರವನ್ನು ಇಲಾಖೆ ವತಿಯಿಂದ ನೀಡಲಾಗುವುದು. ಇದನ್ನು ಪಡೆದವರು ಉದ್ಯೋಗಗಳಿಗೂ ತೆರಳಬಹುದು ಮತ್ತು ಸ್ವ ಉದ್ಯೋಗ ಆರಂಭಿಸಲು ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದೆಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಮತ್ತೋರ್ವ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆ ಸುಮಿತ್ರ ಮಾತನಾಡಿ ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಪ್ರತಿಯೊಬ್ಬರೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮಳೆಗಾಲದ ಸಂದರ್ಭದಲ್ಲಿ ಡೆಂಘಿ ರೋಗಗಳು ಬಾಧಿಸುವುದರಿಂದ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಲು ಆದ್ಯತೆ ನೀಡಬೇಕು ಎಂದರು. ನಮ್ಮ ದೇಹಗಳಲ್ಲಿ ಸಣ್ಣ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬಂದ ತಕ್ಷಣವೇ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆಗೆ ಮುಂದಾಗುವುದು ಉತ್ತಮ. ಅದನ್ನು ನಿರ್ಲಕ್ಷಿಸುವುದರಿಂದ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ರೋಗದ ಲಕ್ಷಣಗಳು ಗೋಚರಿಸಿದ ಕೂಡಲೇ ನಿರ್ಲಕ್ಷಿಸಿದೆ ವೈದ್ಯರನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀನಿಧಿ ತಂಡದ ವಿನುತ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಕಾನ್‌ಬೈಲ್ ಒಕ್ಕೂಟದ ಅಧ್ಯಕ್ಷೆ ಭವ್ಯ, ನಿಕಟಪೂರ್ವ ಅಧ್ಯಕ್ಷೆ ಖತ್ತೀಜ ಹಾಗೂ ಸೇವಾ ಪ್ರತಿನಿಧಿ ಯಶೋಧ ಉಪಸ್ಥಿತರಿದ್ದರು.