11 ಸಂಸ್ಥೆಗಳಿಂದ 100 ಶಾಲೆಗಳಿಗೆ ಮೂಲ ಸೌಕರ್ಯ

KannadaprabhaNewsNetwork |  
Published : Jan 25, 2024, 02:05 AM IST
ಚಿತ್ರದುರ್ಗಲೀಡ್ ಮಾಡಿಕೊಳ್ಳಬಹುದು. | Kannada Prabha

ಸಾರಾಂಶ

ದೈನಂದಿನ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವಂತ ಕೌಶಲ್ಯ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದು ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಗಾಯಿತ್ರಿದೇವಿ ಶಿಕ್ಷಕರುಗಳಿಗೆ ತಿಳಿಸಿದರು.

ಚಿತ್ರದುರ್ಗ: ದೈನಂದಿನ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವಂತ ಕೌಶಲ್ಯ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದು ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಗಾಯಿತ್ರಿದೇವಿ ಶಿಕ್ಷಕರುಗಳಿಗೆ ತಿಳಿಸಿದರು.

ಜೆಎಸ್‌ಡಬ್ಲ್ಯೂ ಫೌಂಡೇಶನ್ ಕರ್ನಾಟಕ ಮಾದರಿ ಶಾಲಾ ಮಾರ್ಗದರ್ಶಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ನೂರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಚಿತ್ರದುರ್ಗದ ತರಾಸು ರಂಗಮಂದಿರಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿವೆ. ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಜೆಎಸ್‌ಡಬ್ಲ್ಯೂ, ಯುವ, ಶಿಕ್ಷಣ ಫೌಂಡೇಶನ್, ಉದ್ಯಮ್, ಸತ್ವ, ಸಂಬೋಧಿ ಸೇರಿದಂತೆ 11 ಸಂಸ್ಥೆಗಳು ಜಿಲ್ಲೆಯಲ್ಲಿ 66 ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ 34 ಪೌಢಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಇರುವ ಅಂತರ ದೂರ ಮಾಡಬೇಕಾಗಿರುವುದರಿಂದ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಬೇಕಾಗಿದೆ. ವಿದ್ಯಾರ್ಥಿಗಳ ದಾಖಲಾತಿ ಕೂಡ ಹೆಚ್ಚಿಸಬೇಕು. ಶಾಲೆಗಳಲ್ಲಿ ಡಿಜಿಟಲೀಕರಣ, ಉದ್ಯಮಶೀಲತೆ ಬೆಳೆಸಬೇಕಿದೆ. ಇಂತಹ ಕಾರ್ಯಕ್ರಮದಿಂದ ಶಿಕ್ಷಕರುಗಳು ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸ್ಪೋಕನ್ ಇಂಗ್ಲಿಷ್ ಮೂಲಕ ಮಕ್ಕಳಲ್ಲಿರುವ ಕ್ರಿಯಾಶೀಲತೆ, ಸಾಮರ್ಥ್ಯ ಹೊರತರಬೇಕಿದೆ. ಜೆಎಸ್‌ಡಬ್ಲ್ಯೂ ಸಂಸ್ಥೆಯ ಉತ್ತಮ ಯೋಜನೆ ರೂಪಿಸುವ ಕಾರ್ಯಕ್ರಮ ಇದಾಗಿದ್ದು, ಜಿಲ್ಲೆಯಲ್ಲಿ ಆಯ್ಕೆ ಮಾಡಿಕೊಂಡಿರುವ 100 ಸರ್ಕಾರಿ ಶಾಲೆಗಳು ಬೇರೆ ಶಾಲೆಗಳಿಗಿಂತ ಭಿನ್ನವಾಗಿರಬೇಕು. ಇದರಿಂದ ಮಕ್ಕಳ ಸಮಗ್ರ ಕಲಿಕೆಯಾಗುತ್ತದೆ ಎಂದರು.

ಜೆಎಸ್‌ಡಬ್ಲ್ಯೂ ಮುಖ್ಯಸ್ಥ ಪ್ರದೀಪ್ ಶರ್ಮಾ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ದಾವಣಗೆರೆ, ತುಮಕೂರು, ಯಾದಗಿರಿ, ಹಾವೇರಿ ಜಿಲ್ಲೆಯಲ್ಲಿ 105 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಚಿತ್ರದುರ್ಗ ಜಿಲ್ಲೆಯೊಂದರಲ್ಲಿಯೇ 100 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಶಿಕ್ಷಣ ಇಲಾಖೆಯ ಎಲ್ಲರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.

ಯೋಜನೆಗೆ ಸಂಬಂಧಿಸಿದ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಬಿಇಡಿ ಕಾಲೇಜಿನ ಪ್ರಾಂಶುಪಾಲ ಟಿ.ಜಿ.ಲೀಲಾವತಿ, ಶಿಕ್ಷಣ ಇಲಾಖೆಯಲ್ಲಿ ಉನ್ನತೀಕರಣವಾಗಬೇಕಿದೆ. ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹೆಚ್ಚಿನ ಕಾಳಜಿವಹಿಸುತ್ತಿರುವುದರಿಂದ ಶಿಕ್ಷಕರ ಹಾಗೂ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಕೂಡ ಜಾಸ್ತಿಯಿದೆ. ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳು ಪೈಪೋಟಿ ಎದುರಿಸುತ್ತಿರುವುದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಬೇಕಿದೆ. ಅದಕ್ಕಾಗಿ ಶಿಕ್ಷಕರು ಅನೇಕ ರೀತಿ ತರಬೇತಿಗಳನ್ನು ನೀಡಲಾಗುತ್ತಿದೆ. ಸರ್ಕಾರದಿಂದ ಸಾವಿರಾರು ಕೋಟಿ ರು.ಗಳ ಅನುದಾನ ಹರಿದು ಬರುತ್ತಿದ್ದು, ಇಂತಹ ಅವಕಾಶ ಎಲ್ಲರಿಗೂ ಸಿಗಲ್ಲ. ಜೆಎಸ್‌ಡಬ್ಲ್ಯೂ ಸಂಸ್ಥೆ ಅವರ ಕೊಡುಗೆಯನ್ನು ಉಪಯೋಗಪಡಿಸಿಕೊಳ್ಳಿ ಎಂದು ಶಿಕ್ಷಕರುಗಳಿಗೆ ತಾಕೀತು ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‌ ರೆಡ್ಡಿ ಮಾತನಾಡಿ, ಜೆಎಸ್‌ಡಬ್ಲ್ಯೂ ಸೇರಿದಂತೆ ಹನ್ನೊಂದು ಸಂಸ್ಥೆಗಳು ಒಟ್ಟುಗೂಡಿ ಜಿಲ್ಲೆಯಲ್ಲಿ ನೂರು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದೆ ಬಂದಿರುವುದು ನಿಜಕ್ಕೂ ಸುವರ್ಣಾವಕಾಶ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಏನೆಲ್ಲಾ ಕೊಡಲು ಬಂದಿರುವ ಇಂತಹ ಸಂಸ್ಥೆಗಳ ಉಪಯೋಗವನ್ನು ಪಡೆದುಕೊಂಡು ಮಕ್ಕಳ ಭವಿಷ್ಯ ರೂಪಿಸುವತ್ತ ಶಿಕ್ಷಕರುಗಳು ಮುಂದಾಗಬೇಕೆಂದು ಕರೆ ನೀಡಿದರು.

ಡಯಟ್ ಪ್ರಾಂಶುಪಾಲ ಎಸ್.ಎ.ನಾಸಿರುದ್ದಿನ್, ಜೆಎಸ್‌ಡಬ್ಲ್ಯೂ ಸಂಸ್ಥೆಯ ಹರ್ಷವರ್ಧನ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀನಿವಾಸ್, ನಿರ್ಮಲಾದೇವಿ, ಸವಿತಾ, ವೆಂಕಟೇಶ್, ಶೈಲಜಾ ಕುಮಾರಿ, ತಿಪ್ಪೇಸ್ವಾಮಿ ಸೈಯದ್ ಮೊಹಸಿನ್, ತಿಪ್ಪೇಸ್ವಾಮಿ ಹಾಗೂ ಜೆಎಸ್‌ಡಬ್ಲ್ಯೂ ಸಂಸ್ಥೆಯ ಅನೇಕರು ವೇದಿಕೆಯಲ್ಲಿದ್ದರು. ನೂರು ಶಾಲೆಗಳ ಮುಖ್ಯೋಪಾಧ್ಯಾಯರು, ನೋಡಲ್ ಅಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿಗಳು, ಸಿಆರ್‌ಪಿ ಡಯಟ್‍ನ ಹಿರಿಯ ಉಪನ್ಯಾಸಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಟಿಪ್ಪರಲ್ಲಿ ಕರೆದೊಯ್ದ ಹೆಡ್‌ಮಾಸ್ಟರ್‌!
ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಶಿಫ್ಟ್‌ : ಸಂಪುಟ