ಪ್ರತಿ ಕ್ಷೇತ್ರದಲ್ಲೂ ಪಂಚಮಸಾಲಿಗಳಿಗೆ ಅನ್ಯಾಯ

KannadaprabhaNewsNetwork |  
Published : Sep 23, 2024, 01:20 AM IST
ಜಮಖಂಡಿ ನಗರದ ವಿರಶೈವ ಪಂಚಮಸಾಲಿ ಸಮಾಜದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. | Kannada Prabha

ಸಾರಾಂಶ

ಪಂಚಮಸಾಲಿ ಸಮಾಜಕ್ಕೆ ಸಂಖ್ಯಾನುಗುಣವಾಗಿ ಸ್ಥಾನಮಾನಗಳು ದೊರೆತಿಲ್ಲ. ರಾಜ್ಯದಲ್ಲಿ ಬಹುಸಂಖ್ಯೆ ಹೊಂದಿದ್ದರೂ ಪ್ರತಿಯೊಂದು ಕ್ಷೇತ್ರದಲ್ಲಿ ವಂಚಿತರಾಗುತ್ತಿದ್ದೇವೆ ಎಂದು ಕೈಗಾರಿಕಾ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪಂಚಮಸಾಲಿ ಸಮಾಜಕ್ಕೆ ಸಂಖ್ಯಾನುಗುಣವಾಗಿ ಸ್ಥಾನಮಾನಗಳು ದೊರೆತಿಲ್ಲ. ರಾಜ್ಯದಲ್ಲಿ ಬಹುಸಂಖ್ಯೆ ಹೊಂದಿದ್ದರೂ ಪ್ರತಿಯೊಂದು ಕ್ಷೇತ್ರದಲ್ಲಿ ವಂಚಿತರಾಗುತ್ತಿದ್ದೇವೆ ಎಂದು ಕೈಗಾರಿಕಾ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಪಂಚಮಸಾಲಿ ಸಂಘ, ರಾಣಿ ಚನ್ನಮ್ಮ ವಿವಿಧೋದ್ದೇಶ ಸಹಕಾರಿ ಸಂಘ ನಿ ಆಶ್ರಯದಲ್ಲಿ ಭಾನುವಾರ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಂಡು ಹೆಣ್ಣು ಎಂದು ತಾರತಮ್ಯ ಮಾಡದೆ ಎಲ್ಲ ಮಕ್ಕಳಿಗೂ ಪದವಿವರೆಗೂ ಶಿಕ್ಷಣ ಕೊಡಿಸಬೇಕು. ಇದರಿಂದ ಕೃಷಿ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿದ್ದರೂ ಅದರಲ್ಲಿ ಬಹಳಷ್ಟು ಜ್ಞಾನ ಬೆಳೆಯುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ, ಸಮಾಜಕ್ಕೆ ಗ್ರಾಮಕ್ಕೆ ಹೆಸರು ತರುವ ಕಾರ್ಯ ಮಾಡಬೇಕು. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಕಷ್ಟಪಟ್ಟು ಶ್ರಮದಿಂದ ದುಡಿದರೆ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ನಾನು ಸರ್ಕಾರಿ ಕನ್ನಡ ಶಾಲೆಯಲ್ಲೆ ಕಲಿತ ವಿದ್ಯಾರ್ಥಿ ಎಂಜಿನಿಯರಿಂಗ್‌ನಲ್ಲಿ ನನಗೆ ಕೆವಲ 9 ಅಂಕ ಕಡಿಮೆ ಬಂದ ಕಾರಣ ಸರ್ಕಾರಿ ನೌಕರಿಯಿಂದ ವಂಚಿತನಾದೆ. ಆದರೆ ನಾನು ₹10 ಲಕ್ಷ ದಿಂದ ಪ್ರಾರಂಭಿಸಿ 500 ಟನ್ ಕಬ್ಬುನುರಿಸುವ ಕಾರ್ಖಾನೆಯಿಂದ ಇಂದು ಇಡೀ ದೇಶದಲ್ಲೆ ಅತೀ ಹೆಚ್ಚು ೧ ಲಕ್ಷ ಟನ್ ಕಬ್ಬು ನುರಿಸುವಷ್ಟರ ಮಟ್ಟಿಗೆ ಬೆಳೆದಿದ್ದೇನೆ. 400 ಎಂ.ವಿ ವಿದ್ಯುತ್ ಉತ್ಪಾದನೆ, ಸಿಎನ್‌ಜಿ, ಇಥೆನಾಲ್ ಸೇರಿದಂತೆ ಹಲವಾರು ಉತ್ಪನ್ನಗಳು ನಮ್ಮಲ್ಲೆ ಉತ್ಪಾದಿಸುತ್ತಿದ್ದೇವೆ ಎಂದರು.

ರೈತರ ಮಕ್ಕಳು ಉದ್ಯಮಿಗಳಾಗಿ ಬೆಳೆಯಬೇಕು. ಕೈಗಾರಿಕೆ ಮಾಡಲು ಯುವಕರು ಮುಂದೆ ಬಂದರೆ ಅವರಿಗೆ ಎಲ್ಲ ರೀತಿಯ ತರಬೇತಿ ನೀಡಲು ನಾನು ಸಿದ್ಧ. ದುಡಿಯುವ ಕೈಗಳು ಕಡಿಮೆಯಾಗುತ್ತಿವೆ. ತಿನ್ನುವ ಬಾಯಿಗಳು ಹೆಚ್ಚಾಗುತ್ತಿವೆ. ಇದ್ದಂತ ಭೂಮಿಯಲ್ಲಿ ಹೆಚ್ಚು ಬೆಳೆಯುವ ತಂತ್ರಜ್ಞಾನಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿ ಎಕರೆಗೆ 100 ಟನ್‌ಗೂ ಅಧಿಕ ಹೆಚ್ಚು ಕಬ್ಬು ಬೆಳೆಯುವ ರೈತರಿಂದ ಕಡಿಮೆ ಬೆಳೆಯುವ ರೈತರು ಮಾಹಿತಿ ತರಬೇತಿ ಪಡೆದುಕೊಳ್ಳಬೇಕು ಎಂದರು.ಮುಂಬರುವ ದಿನಗಳಲ್ಲಿ ಸುಮಾರು 500 ಟ್ರ್ಯಾಕ್ಟರ್‌ಗಳಿಗೆ ಸಿಎನ್‌ಜಿ ಅಳವಡಿಸಲಾಗುವುದು. ಇದರಿಂದ ರೈತರ ಇಂಧನಕ್ಕಾಗಿ ಬಳಸುತಿದ್ದ ವೆಚ್ಚ ಶೇ.50ರಷ್ಟು ಕಡಿಮೆಯಾಗಲಿದೆ ಎಂದು ಹೇಳಿದರು.

ವಿಜಯ ಸಂಕೇಶ್ವರ ಅವರು ಕೇವಲ ಒಂದು ಟ್ರಕ್‌ನಿಂದ ಉದ್ಯೋಗ ಪ್ರಾರಂಭಿಸಿ ಕಷ್ಟ ನೋವುಗಳನ್ನು ಎದುರಿಸಿ ಬೆಳೆಸಿದ ಉದ್ಯಮ ಇಂದು ಜಮಖಂಡಿಯಿಂದ ದೆಹಲಿವರೆಗಿನ ರಸ್ತೆಯಲ್ಲಿ ಪ್ರತಿ ಅರ್ಧ ಗಂಟೆಗೊಂದು ವಾಹನ ಸಂಚರಿಸುತ್ತಿರುತ್ತದೆ. 25 ಸಾವಿರಕ್ಕೂ ಅಧಿಕ ಟ್ರಕ್, ಬಸ್‌ಗಳನ್ನು ಹೊಂದಿದೆ. ಅಷ್ಟರ ಮಟ್ಟಿಗೆ ವಿಆರ್‌ಎಲ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಎಂದರೆ ಸಣ್ಣ ವಿಷಯವಲ್ಲ ಎಂದು ನಿರಾಣಿ ಹೇಳಿದರು.

ಜಕನೂರ ಕಮರಿಮಠದ ಸಿದ್ದಲಿಂಗ ದೇವರು ಮಾತನಾಡಿ, ವಿದ್ಯಾರ್ಥಿಗಳು ಅಂಕ ನೌಕರಿಗಾಗಿ ಶಿಕ್ಷಣ ಪಡೆಯದೇ ಶಾಶ್ವತ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅತೀ ಅವಶ್ಯವಾಗಿದೆ. ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಮೈಗೂಡಿಸಿಕೊಳ್ಳುವಂತೆ ಪಾಲಕರು ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಬಿಡಿಸಿಸಿ ಮಾಜಿ ನಿರ್ದೇಶಕ ಬಿ.ಎಸ್.ಸಿಂಧೂರ ಮಾತನಾಡಿ, ಸಮಾಜ ಒಗ್ಗಟ್ಟಿನಿಂದ ಇರಬೇಕು. ಸಮಾಜದ ಕೆಲಸ ಕಾರ್ಯಗಳಿಗೆ ಕೈ ಜೋಡಿಸಲು ಆಗದಿದ್ದರೆ ಸುಮ್ಮನೆ ಇರಬೇಕು. ವಿರೋಧಿಸುವ ಕಾರ್ಯ ಮಾಡಬಾರದು. ಸಮಾಜದ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕು. ಆ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದರು.

ಸಮಾಜದ ಅಧ್ಯಕ್ಷ ಪಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಲಗೂರ ಧರಿದೇವರ ಮಠದ ಲಕ್ಷ್ಮಣ ಮುತ್ಯಾ ಶ್ರೀಗಳು, ಸಿ.ಪಿ.ಜನವಾಡ, ಅಪ್ಪಸಾಬ ಚೌಗಲಾ, ಎ.ಎಸ್.ಜನಗೌಡ, ಭೀಮಶಿ ಮಗದುಮ್, ಸುರೇಶಗೌಡ ಪಾಟೀಲ, ರಾಜು ಕೋವಳ್ಳಿ, ಬಿ.ಎಂ.ಪಾಟೀಲ, ಬಸವರಾಜ ಬಳಿಗಾರ, ಪ್ರಕಾಶ ಪಾಟೀಲ, ಪ್ರಭು ಜನವಾಡ, ಕಾಡಪ್ಪ ಗಡಾದ, ಹಣಮಂತ ಪಾಟೀಲ, ಜಯಶ್ರೀ ಬಾಡಗಿ, ಶಶಿಕಲಾ ಬಿರಾದಾರ, ಮಹಾಂತೇಶ ನರಸನಗೌಡರ, ಸುನೀತಾ ಬಳಿಗಾರ, ವಿನಾಯಕ ಕಾಸಾರ, ಸಂಗಪ್ಪ ಸಂತಿ ಇತರರು ಇದ್ದರು. ಶೀತಲ, ಪರಮೇಶ್ವರ ತೇಲಿ, ಮಲ್ಲಿಕಾರ್ಜುನ ನಾವಿ ರೈತ ಗೀತೆ ಹಾಡಿದರು. ಬ್ಯಾಂಕಿನ ಅಧ್ಯಕ್ಷ ಡಾ.ಸದಾಶಿವ ಬಾಲಪ್ಪನವರ ಸ್ವಾಗತಿಸಿದರು. ಪಿ.ಎಂ.ಝುಲಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ ಮನಗೂಳಿ, ವಿಮಲಾ ಕುಬಕಡ್ಡಿ ನಿರೂಪಿಸಿದರು. ಸಂಗಮೇಶ ಕೌಜಲಗಿ ವಂದಿಸಿದರು.

---

ಕೋಟ್‌

ಲಕ್ಷ್ಮೀ ಹೆಬ್ಬಾಳಕರ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 2ಎ ಮೀಸಲಾತಿ ನೀಡಿ ಕುಂದಾ ನೀಡುತ್ತೇವೆ ಎಂದಿದ್ದರು. ಆದರೆ ಸರ್ಕಾರ ಬಂದು 18 ತಿಂಗಳು ಕಳೆದರೂ ಇಲ್ಲಿಯವರೆಗೂ ಸಹೋದರಿ ಲಕ್ಷ್ಮೀ ಹೆಬ್ಬಾಳಕರ್ ಅವರು ಒಂದು ಮಾತು ಆಡುತ್ತಿಲ್ಲ. ಕೇಂದ್ರ ಸರ್ಕಾರದಲ್ಲಿ 2ಎ ಮೀಸಲಾತಿ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು.

-ಮುರುಗೇಶ ನಿರಾಣಿ, ಮಾಜಿ ಸಚಿವ

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ