ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ಸ್ಥಳ ಪರಿಶೀಲನಾ ವರದಿ ಪಡೆಯದೆ, ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಹಿರೇಹಳ್ಳಿ ಗ್ರಾಮದ ರೈತರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ ನಿಯಮ ಬಾಹಿರವಾಗಿ ಬೆಳೆವಿಮೆ ಪಾವತಿ ಮಾಡಲಾಗಿತ್ತು. ಹಾಗಾಗಿ ವಿಚಾರಣೆ ಅನಿವಾರ್ಯವೆಂಬ ತೀರ್ಮಾನಕ್ಕೆ ಬಂದ ಜಿಲ್ಲಾಧಿಕಾರಿ ವಿಮಾ ಕಂಪನಿ ಪ್ರತಿನಿಧಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಟಿ.ವೆಂಕಟೇಶ್ ಸೂಚಿಸಿದ್ದಾರೆ.
ರೈತರ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿ ವೆಂಕಟೇಶ್ ಅವರು, ಗುರುವಾರ ತಮ್ಮ ಗೃಹ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಪ್ರತಿನಿಧಿಗಳ ಸಭೆ ನಡೆಸಿ ವಿಚಾರಣೆ ತೀರ್ಮಾನ ಕೈಗೊಂಡರು.ನಿಯಮಗಳ ಪ್ರಕಾರ ಬೆಳೆ ಹಾನಿ ಬಗ್ಗೆ ತಹಸೀಲ್ದಾರ್ ನೇತೃತ್ವದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ವಿಮಾ ಕಂಪನಿಗಳನ್ನೊಳಗೊಂಡ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ, ಯಾವುದೇ ಸಮೀಕ್ಷೆ ನಡೆಸದೇ ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 77 ಜನರಿಗೆ 44,51,655 ರು. ಬೆಳೆವಿಮೆಯನ್ನು ನಿಯಮಬಾಹಿರವಾಗಿ ಪಾವತಿಸಿರುವುದು ಜಿಲ್ಲಾಡಳಿತದ ತನಿಖೆಯಿಂದ ಬಹಿರಂಗವಾಗಿದೆ. ಈ ಕುರಿತು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ತಡೆ ಹಾಗೂ ಪ್ರತಿಭಟನೆಗಳನ್ನು ನಡೆಸಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.
ಹಿರೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 77 ರೈತರಿಗೆ 44,51,655 ರು. ಬೆಳೆವಿಮೆ ಪಾವತಿಸಲಾಗಿದೆ. ಈ ಪೈಕಿ 59 ರೈತರಿಗೆ ಅವರು ನೋಂದಾಯಿಸಿದ್ದ ಬೆಳೆಗಳಿಗೆ ವಿಮೆ ಪಾವತಿಯಾಗಿದೆ. ಆದರೆ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ವರದಿಯನ್ನು ವಿಮಾ ಕಂಪನಿ ಪಡೆದಿಲ್ಲ. ಪಾವತಿಯಾದ 5 ಪ್ರಕರಣಗಳಲ್ಲಿ ರೈತರು ಬೆಳೆವಿಮೆ ಮಾಡಿಸಿದ್ದರೂ ಜಮೀನಿನಲ್ಲಿ ಯಾವುದೇ ಬೆಳೆ ಇರಲಿಲ್ಲ. ಇಂತಹ ಬೀಳು ಭೂಮಿಗೂ ವಿಮೆ ಪಾವತಿ ಮಾಡಲಾಗಿದೆ. 11 ಪ್ರಕರಣಗಳಲ್ಲಿ ರೈತರು ನೋಂದಾಯಿಸಿದ ಬೆಳೆಗೂ, ಹೊಲದಲ್ಲಿದ್ದ ಬೆಳೆಗೂ ಯಾವುದೇ ಸಾಮ್ಯತೆ ಇರಲಿಲ್ಲ. 2 ಪ್ರಕರಣಗಳಲ್ಲಿ ರೈತರು ನೋಂದಾಯಿಸಿರುವ ಭೂ ವಿಸ್ತೀರ್ಣಕ್ಕಿಂತ ಹೆಚ್ಚಿನ ಪ್ರದೇಶಕ್ಕೆ ವಿಮೆಯನ್ನು ಪಾವತಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.
77 ರೈತರಿಗೆ ರು 44, 51,655 ರು. ಬೆಲೆ ವಿಮೆ ಪಾವತಿ
ಜಮೀನಿನಲ್ಲಿ ಬೆಳೆ ಇಲ್ಲದಿದ್ದರೂ ಬೀಳು ಭೂಮಿಗೆ ವಿಮೆ ಪಾವತಿ