ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶಿಲಾಶಾಸನ ಪತ್ತೆ

KannadaprabhaNewsNetwork |  
Published : Sep 11, 2025, 12:04 AM IST
ಚಿತ್ರ: ೯ಎಸ್.ಎನ್.ಡಿ.೦೧- ಸಂಡೂರು-ತಾರಾನಗರ ಮಧ್ಯದಲ್ಲಿನ ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ನಾರಿಹಳ್ಳ ಜಲಾಶಯದ ತಟದಲ್ಲಿ ದೊರೆತ ಶಿಲಾಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರು ಪರಿಶೀಲಿಸಿದರು. | Kannada Prabha

ಸಾರಾಂಶ

ಸಂಡೂರು-ತಾರಾನಗದ ಮಧ್ಯದಲ್ಲಿರುವ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿರೂಪಾಕ್ಷ ಹಾಗೂ ವಿಷ್ಣು ದೇವರ ಆರಾಧನೆ ಉಲ್ಲೇಖದ ೧೦ನೇ ಶತಮಾನದ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನವೊಂದು ಪತ್ತೆಯಾಗಿದೆ.

ಶಿಲಾಶಾಸನದ ಮೇಲೆ ಬೆಳಕು ಚೆಲ್ಲಿದ ವಿಜಯನಗರ ತಿರುಗಾಟ ಸಂಶೋಧನಾ ತಂಡ

ಕನ್ನಡಪ್ರಭ ವಾರ್ತೆ ಸಂಡೂರು

ಸಂಡೂರು-ತಾರಾನಗದ ಮಧ್ಯದಲ್ಲಿರುವ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿರೂಪಾಕ್ಷ ಹಾಗೂ ವಿಷ್ಣು ದೇವರ ಆರಾಧನೆ ಉಲ್ಲೇಖದ ೧೦ನೇ ಶತಮಾನದ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನವೊಂದು ಪತ್ತೆಯಾಗಿದೆ.

ವಿಜಯನಗರ ತಿರುಗಾಟ ಸಂಶೋಧನಾ ತಂಡದ ಪ್ರೊ. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಡಾ. ತಿಮ್ಮಲಾಪುರ ನರಸಿಂಹ, ಡಾ. ವೀರಾಂಜಿನಯ್ಯ, ಸಂಶೋಧಕರಾದ ವೀರಭದ್ರಗೌಡ ಹಾಗೂ ಎಚ್.ರವಿ ಈ ಶಿಲಾಶಾಸನದ ಬಗ್ಗೆ ಅಧ್ಯಯನ ನಡೆಸಿ ಅದರ ಮೇಲೆ ಬೆಳಕು ಚೆಲ್ಲಿದ್ದಾರೆ.

ಈ ಶಿಲಾಶಾಸನವು ಉತ್ತರಾಭಿಮುಖವಾಗಿದ್ದು, ಶಾಸನದ ಎಡಗಡೆಗೆ ಸೂರ್ಯ, ಬಲಗಡೆಗೆ ಚಂದ್ರ ಹಾಗೂ ಮಧ್ಯದಲ್ಲಿ ಶಿವನ ಲಿಂಗದ ಚಿತ್ರಗಳಿವೆ. ವಿಶೇಷವಾಗಿ ಬಲಬದಿಯ ಚಂದ್ರನ ಬಳಿಯಲ್ಲಿ ನಕ್ಷತ್ರದ ಚಿತ್ರವನ್ನು ಕೆತ್ತಲಾಗಿದೆ. ಈ ಶಾಸನದ ಕಾಲಾವಧಿ ಉಲ್ಲೇಖವಾಗಿಲ್ಲ. ಆದರೂ, ಲಿಪಿಯ ಶೈಲಿ ಹಾಗೂ ದುರ್ಮುಖಿ ಸಂವತ್ಸರದ ಮಾರ್ಗಶಿರಾ ಕಾರ್ತಿಕ ಎಂದು ಉಲ್ಲೇಖವಾಗಿರುವುದ ಕ್ರಿಶ ೧೦ನೇ ಶತಮಾನದ ಶಾಸನವಾಗಿರಬೇಕೆನಿಸುತ್ತದೆ.

ಈ ಶಾಸನವು ನೆಲದಿಂದ ೧೦ ಅಡಿ ಎತ್ತರದ ಮ್ಯಾಂಗನೀಸ್ ಕಲ್ಲಿಗೆ ೩ ಅಡಿ ಎತ್ತರ ಹಾಗೂ ೩ ಅಡಿ ಅಗಲದಲ್ಲಿ ಆರು ಸಾಲುಗಳಲ್ಲಿ ಅಕ್ಷರ ಬರೆಯಿಸಲಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಡಾ. ಗೋವಿಂದ ತಿಳಿಸಿದ್ದಾರೆ.

ರಂಗ ಸಮುದ್ರದ ಉಲ್ಲೇಖ:

ಈ ಶಾಸನದಲ್ಲಿ ರಂಗಸಮುದ್ರ ಎಂದು ಉಲ್ಲೇಖಿಸಲಾಗಿದೆ. ಈಗ ಕರೆಯುವ ನಾರಿಹಳ್ಳವನ್ನೇ ರಂಗ ಸಮುದ್ರ ಎಂದು ಆಗ ಕರೆದಿರಬಹುದು. ಶಾಸನದ ವಿವರಣೆಯಂತೆ ಈ ರಂಗ ಸಮುದ್ರದಲ್ಲಿದ್ದ ವಿರೂಪಾಕ್ಷ ಮತ್ತು ವಿಷ್ಣು ದೇವರನ್ನು ಆರಾಧನೆ ಮಾಡಲಾಗುತ್ತಿತ್ತು. ಉಭಯ ದೇವರುಗಳ ನೈವೇದ್ಯ ಮಾಡಿದರೆ, ಮರು ಜನ್ಮ ಪ್ರಾಪ್ತಿಯಾಗುವುದು. ಅಂತೆಯೇ ಅಂದಿನ ಕಣಿವೆ ನಾಗೂಜನು ಮರು ಜಲ್ಮಕ್ಕಾಗಿ ಆರಾಧಿಸಿ ತಪಸ್ಸು ಮಾಡಿದನು. ಇಲ್ಲಿ ಮರು ಜಲ್ಮ ಬರುವುದು ಎಂದರೆ ಒಂದು ರೀತಿ ಮತ್ತೆ ಲೋಕದಲ್ಲಿ ಹುಟ್ಟಿ ಮೋಕ್ಷ ಬಯಸಿದಂತಾಗುತ್ತದೆ. ಶಾಸನದಲ್ಲಿ ಮರುಜಲ್ಮಕೆ ವಿಳಸಿತನಾಗುವನು ಎಂದು ಉಲ್ಲೇಖವಾಗಿದೆ. ಈ ಹಿನ್ನೆಲೆ ಈ ಶಾಸನವು ಮಾನವನಿಗೆ ನೀತಿ ಬೋಧಿಸುವ ಪ್ರತೀಕವಾಗಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಶಾಪಾಶಯದ ಉಲ್ಲೇಖ:

ರಾಜಾಜ್ಞೆಗಳನ್ನು ಕಲ್ಲಿನಲ್ಲಿ ಶಾಸನದ ರೂಪದಲ್ಲಿ ಬರೆಸಲಾಗುತ್ತಿತ್ತು. ಶಾಸನಗಳು ಶಾಶ್ವತವಾಗಿರಲಿ ಎಂದು ಶಾಸನದ ಕೊನೆ ಸಾಲಿನಲ್ಲಿ ಶಾಪಾಶಯವನ್ನು ಬರೆಸುತ್ತಿದ್ದರು. ಹೀಗೆ ಬರೆಸಿದ್ದರಿಂದ ಈಗಲೂ ಶಾಸನಗಳು ಉಳಿದಿವೆ. ಇಲ್ಲಿ ದೊರೆತಿರುವ ಮ್ಯಾಂಗನೀಸ್ ಬಂಡೆ ಕಲ್ಲಿನ ಶಾಸನದ ಕೊನೆಯಲ್ಲಿಯೂ ಈ ರೀತಿಯ ಶಾಪದ ಉಲ್ಲೇಖವಿದೆ. ಈ ಶಾಸನವನ್ನು ಅಳಿಪಿ, ದೈವಾರಾಧನೆಯನ್ನು ಪರಿಪಾಲಿಸದವರನ್ನು ನಿಂದಿಸುವ ಉಲ್ಲೇಖ ಈ ಶಾಸನದಲ್ಲಿದೆ ಎಂದು ಡಾ. ಕೃಷ್ಣೇಗೌಡ ತಿಳಿಸಿದ್ದಾರೆ.

ಇದೊಂದು ಅಪರೂಪದ ಶಿಲಾಶಾಸನವಾಗಿದ್ದು, ಇದನ್ನು ಸಂರಕ್ಷಿಸಬೇಕಿದೆ. ಸಂಬಂಧಿಸಿದ ಇಲಾಖೆ ಈ ಶಿಲಾಶಾಸನವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ಇದರ ಮಹತ್ವವನ್ನು ತಿಳಿಸುವ ಅಗತ್ಯವಿದೆ ಎಂದು ಉಪನ್ಯಾಸಕ ಡಾ. ತಿಪ್ಪೇರುದ್ರ ಅಭಿಪ್ರಾಯಪಟ್ಟರು.

ಈ ಶಿಲಾಶಾಸನ ನಾರಿಹಳ್ಳದ ಹಿನ್ನೀರಿನಲ್ಲಿತ್ತು. ದೇವಸ್ಥಾನದ ಬಳಿ ಕಾಮಗಾರಿ ನಡೆದ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿತು. ಇದರಲ್ಲಿ ಲಿಪಿಯನ್ನು ಕಂಡು ಇದೊಂದು ಶಾಸನವಿರಬೇಕೆಂದು ತಿಳಿದು, ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಬಳಿಗೆ ಅದನ್ನು ತರಿಸಿ, ಇರಿಸಿದ್ದಾರೆ. ಇದೀಗ ಇದರ ಮೇಲೆ ಸಂಶೋಧಕರು ಬೆಳಕು ಚೆಲ್ಲಿದ್ದರಿಂದ ಇದರಲ್ಲಿನ ವಿಷಯ ತಿಳಿಯಲು ಅನುಕೂಲವಾಯಿತು ಎಂದು ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಅರ್ಚಕ ಎನ್.ಎಂ. ವೀರಯ್ಯಸ್ವಾಮಿ ಕನ್ನಡ ಪ್ರಭಕ್ಕೆ ತಿಳಿಸಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!