ಪತ್ರಕರ್ತರಾಗುವವರಿಗೆ ಸಮಾಜದ ಒಳನೋಟ ಮುಖ್ಯ

KannadaprabhaNewsNetwork |  
Published : Jun 27, 2025, 12:48 AM IST

ಸಾರಾಂಶ

ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ತನ್ನ ಸುತ್ತಲನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ-ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ತನ್ನ ಸುತ್ತಲನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ-ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.

ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಹಬ್ಬ ‘ಇಂಪ್ರೆಷನ್ -2025’ ವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಹೊಸ ಪತ್ರಕರ್ತರಲ್ಲಿ ಅಧ್ಯಯನಶೀಲತೆ ಮತ್ತು ಗ್ರಹಿಕೆಯ ಕೊರತೆ ಇರುವುದನ್ನು ನಾನು ಗಮನಿಸಿದ್ದೇನೆ. ಪತ್ರಕರ್ತರಾಗುವವರಿಗೆ ಮಗುವಿನ ಮನಸ್ಸು ಮುಖ್ಯ. ಪ್ರತಿಯೊಂದು ಮಗುವೂ ಮಾತಾಡುವ ಮೊದಲು ನೋಟದ ಮೂಲಕವೇ ತಿಳಿಯುತ್ತದೆ, ಅರಿಯುತ್ತದೆ, ಗ್ರಹಿಸುತ್ತದೆ. ಹೀಗಾಗಿ ನೋಟದ ಮೂಲಕ ಕಲಿಯುವುದು ಸಹಜವಾದ, ನೈಸರ್ಗಿಕವಾದ ಪ್ರಕ್ರಿಯೆ ಎಂದರು.

ಪತ್ರಕರ್ತರಾಗುವವರು ಪೂರ್ವಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು ಇರುವುದನ್ನು ಇರುವ ಹಾಗೆ ಗಮನಿಸಬೇಕು. ಹೀಗಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ. ಇದರಿಂದಾಗಿ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೆಚ್ಚು ಅನುಕೂಲ ಮತ್ತು ಮಹತ್ವ ಸಿಗುತ್ತದೆ ಎಂದರು.

ಇತ್ತೀಚಿನ ದಶಕಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ಕಾರಣಕ್ಕೆ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸುತ್ತಿವೆ. ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮವನ್ನೂ ದಾಟಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಡೆಗೆ ಧಾವಿಸಿ ಬಂದಿದ್ದೇವೆ. ಈ ಬದಲಾವಣೆಯು ಮಾಹಿತಿ ಹರಿವಿನ ವೇಗವನ್ನು ಹೆಚ್ಚಿಸಿದೆ, ಆದರೆ ಅದೇ ವೇಳೆ ಸುಳ್ಳು ಸುದ್ದಿ, ದ್ವೇಷ ಭಾಷೆ ಇತ್ಯಾದಿಗಳ ಹೊಸ ಹೊಸ ಸವಾಲುಗಳನ್ನೂ, ಅಪಾಯಗಳನ್ನೂ ಮನುಷ್ಯ ಜಗತ್ತಿನ ಮುಂದಿಟ್ಟಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಮಾಧ್ಯಮ ಶಿಕ್ಷಣವು ನೈತಿಕತೆ ಮತ್ತು ಜವಾಬ್ದಾರಿಯನ್ನೂ ಜೊತೆಗೆ ಕಲಿಸಬೇಕಾಗಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮಾತನಾಡಿ, ಪತ್ರಕರ್ತರು ಪ್ರಶ್ನೆ ಕೇಳುವುದನ್ನು ಬಿಡಬಾರದು ಆದರೆ, ಪ್ರಶ್ನೆ ಮಾಡುವ ಮೊದಲು ಆ ವಿಷಯದ ಬಗ್ಗೆ ಅಧ್ಯಯನ ನಡೆಸಿರಬೇಕು. ಊಹಾ ಪತ್ರಿಕೋದ್ಯಮಕ್ಕೆ ಜೋತು ಬಿದ್ದರೆ ಅಧ್ಯಯನಶೀಲತೆ ಬೆಳೆಯುವುದಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಮಾಧ್ಯಮ ಶಿಕ್ಷಣವನ್ನು ಜನಪ್ರಿಯಗೊಳಿಸಲು ಮತ್ತು ಮಾಧ್ಯಮ ಅಧ್ಯಯನದತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಕಾಲಕ್ಕೆ ತಕ್ಕಂತೆ ಪಠ್ಯಕ್ರಮದ ಬದಲಾವಣೆ. ಕೌಶಲಾಧಾರಿತ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯವೃದ್ಧಿ ಸೇರಿದಂತೆ ಹಲವು ಕ್ರಮಗಳ ಅಗತ್ಯವಿದೆ ಎಂದರು.

‘ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ, ಮಾಧ್ಯಮ ಹಬ್ಬವು ಮಾಧ್ಯಮ ರಂಗದಲ್ಲಿ ಪ್ರಜ್ಞಾವಂತ ಯುವ ಪ್ರತಿಭೆಗಳ ಹುಟ್ಟಿಗೆ ವೇದಿಕೆಯಾಗಲಿ ಎಂದು ಹಾರೈಸಿದರು.

ಹಾಲಪ್ಪ ಪ್ರತಿಷ್ಠಾನ ಮಧುಗಿರಿ ಬಂಗಾರದ ಪದಕ ವಿಜೇತ ಸ್ನಾತಕ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಗಳನ್ನು ಮುರಳೀಧರ ಹಾಲಪ್ಪ ಗೌರವಿಸಿದರು. ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ, ಸಿಂಡಿಕೇಟ್ ಸದಸ್ಯ ಮನೋಜ್ ಹೆಚ್. ಆರ್., ಪರೀಕ್ಷಾಂಗ ಕುಲಸಚಿವ ಡಾ. ಸತೀಶ್‌ಗೌಡ ಎನ್., ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದಾಕ್ಷಾಯಿಣಿ ಜಿ., ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಬ ಕೆ.ವಿ. ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ದೆಗಳು ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ