ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಸ್ತೆಗಳ ಅಭಿವೃದ್ಧಿ ಸಂಬಂಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ದಾಖಲಾದ ಹಿನ್ನೆಲೆ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಿಂದ ಆರಂಭವಾದ ಸ್ಥಳ ಪರಿಶೀಲನೆ ಕಾರ್ಯದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿ ರಸ್ತೆಯುದ್ದಕ್ಕೂ ಸಂಚರಿಸಿ ರಸ್ತೆ ಅಗಲೀಕರಣಕ್ಕೆ ಎದುರಾಗಿರುವ ಸಮಸ್ಯೆಗಳನ್ನು ವೀಕ್ಷಿಸಿದರು.
ನಗರದ ಕರಿನಂಜನಪುರ ರಸ್ತೆಯ ಎರಡು ಬದಿಗಳಲ್ಲಿ ಒತ್ತುವರಿಯಾಗಿರುವ ಭಾಗಗಳ ಬಗ್ಗೆ ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದು ಒತ್ತುವರಿಯಾಗಿರುವ ರಸ್ತೆಯ ವಿಸ್ತೀರ್ಣದ ಅಳತೆಯನ್ನು ಪರಿಶೀಲಿಸಿದರು.ಕರಿನಂಜನಪುರ ರಸ್ತೆಯಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನರ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು. ಗುಣಮಟ್ಟದ ಕಾಮಗಾರಿ ಆಗಬೇಕು. ಮನೆ ಕಟ್ಟಲು ಲೈಸೆನ್ಸ್ ನೀಡುವ ವೇಳೆ ಯಾವುದೇ ಸರ್ಕಾರಿ ಜಾಗ ಒತ್ತುವರಿಯಾಗದಂತೆ ಜವಾಬ್ಧಾರಿವಹಿಸುವಂತೆ ಶಾಸಕರು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್, ರಸ್ತೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಒಳಗಾಗಬಾರದು. ರಸ್ತೆ ಅಗಲೀಕರಣದಿಂದ ಆಸ್ತಿ ಕಳೆದುಕೊಂಡಿರುವವರ ಪಟ್ಟಿ ಮಾಡಿ ಪರಿಹಾರ ವಿತರಣೆ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಿಕೊಡಲಾಗುವುದು ಎಂದರು.
ನಗರಸಭಾ ಸದಸ್ಯರಾದ ಆರ್.ಪಿ. ನಂಜುಂಡಸ್ವಾಮಿ, ಎಂ.ಆರ್. ರಾಜಪ್ಪ, ಮಹೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ನಟರಾಜು, ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರಿಜಮ್ಮ, ಕಂದಾಯ ನಿರೀಕ್ಷಕರಾದ ಶರವಣ, ಹಿರಿಯ ಆರೋಗ್ಯ ನಿರೀಕ್ಷರಾದ ಮಂಜುನಾಥ್, ನಾರಾಯಣ್, ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಮಚಂದ್ರ, ಸಮುದಾಯ ಸಂಘಟನಾಧಿಕಾರಿ ವೆಂಕಟನಾಯಕ್ ಇದ್ದರು.