ಮೆಕ್ಕೆಜೋಳ ಖರೀದಿ ವಂಚನೆಯಲ್ಲಿ ಇನ್‌ಸ್ಪೆಕ್ಟರ್‌ ಶಾಮೀಲು, ಆರೋಪ

KannadaprabhaNewsNetwork |  
Published : Jun 06, 2026, 02:00 AM IST
5ಕೆಪಿಎಲ್28 ಭೋವಿ ಸಮಾಜದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕೆ.ಎಸ್. ಪ್ರಶಾಂತ ಜ. 4ರಂದು ಸಂಶಿಯಲ್ಲಿ ಶಿವರಾಜ ಕೊಡ್ಲಿವಾಡ ಎಂಬುವರಿಂದ ಪ್ರತಿ ಕ್ವಿಂಟಲ್‌ಗೆ ₹2,200 ದರದಂತೆ ಒಟ್ಟು 1,250 ಕ್ವಿಂಟಲ್ ಮೆಕ್ಕೆಜೋಳವನ್ನು ₹28 ಲಕ್ಷಕ್ಕೆ ಖರೀದಿಸಿದ್ದ. ಇದರಲ್ಲಿ ಕೇವಲ ₹10 ಲಕ್ಷ ಮಾತ್ರ ಪಾವತಿಸಿ, ಬಾಕಿ ಉಳಿದ ₹18 ಲಕ್ಷ ಹಣ ನೀಡದೇ ಈವರೆಗೂ ವಂಚಿಸುತ್ತಾ ಬಂದಿದ್ದಾನೆ.

ಕುಂದಗೋಳ:

ದಾವಣಗೆರೆ ಮೂಲದ ವ್ಯಕ್ತಿಯೋರ್ವ ಸ್ಥಳೀಯ ರೈತರೊಬ್ಬರಿಂದ ಲಕ್ಷಾಂತರ ರುಪಾಯಿ ಮೌಲ್ಯದ ಮೆಕ್ಕೆಜೋಳ ಖರೀದಿಸಿ ವಂಚಿಸಿರುವ ಪ್ರಕರಣದಲ್ಲಿ ಪಟ್ಟಣದ ಪಿಎಸ್‌ಐ ಒಬ್ಬರು ಶಾಮೀಲಾಗಿದ್ದಾರೆ ಎಂದು ರೈತಪರ ಹೋರಾಟಗಾರ ಮಹೇಶ ಕಲಘಟಗಿ ಗಂಭೀರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಕೆ.ಎಸ್. ಪ್ರಶಾಂತ ಜ. 4ರಂದು ಸಂಶಿಯಲ್ಲಿ ಶಿವರಾಜ ಕೊಡ್ಲಿವಾಡ ಎಂಬುವರಿಂದ ಪ್ರತಿ ಕ್ವಿಂಟಲ್‌ಗೆ ₹2,200 ದರದಂತೆ ಒಟ್ಟು 1,250 ಕ್ವಿಂಟಲ್ ಮೆಕ್ಕೆಜೋಳವನ್ನು ₹28 ಲಕ್ಷಕ್ಕೆ ಖರೀದಿಸಿದ್ದ. ಇದರಲ್ಲಿ ಕೇವಲ ₹10 ಲಕ್ಷ ಮಾತ್ರ ಪಾವತಿಸಿ, ಬಾಕಿ ಉಳಿದ ₹18 ಲಕ್ಷ ಹಣ ನೀಡದೇ ಈವರೆಗೂ ವಂಚಿಸುತ್ತಾ ಬಂದಿದ್ದಾನೆ ಎಂದರು.

ಈ ವಂಚನೆ ಕುರಿತು ರೈತ ಮಾ. 6ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅವರು ಕುಂದಗೋಳ ಪಿಎಸ್‌ಐಗೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಪಿಎಸ್‌ಐ ರೈತರು ನೀಡಿದ್ದ ಮೂಲ ದೂರನ್ನು ಬದಲಾಯಿಸಿ ತಮಗೆ ಹಾಗೂ ಆರೋಪಿಗೆ ಅನುಕೂಲವಾಗುವ ರೀತಿಯಲ್ಲಿ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಒಂದು ವಾರದೊಳಗಾಗಿ ಸಂಬಂಧಪಟ್ಟ ಸಂತ್ರಸ್ತ ರೈತನಿಗೆ ನ್ಯಾಯ ಒದಗಿಸಿ, ಬಾಕಿ ಹಣ ಕೊಡಿಸದೇ ಇದ್ದರೆ ಕುಂದಗೋಳ ಪೊಲೀಸ್ ಠಾಣೆಯ ಎದುರು ವಿವಿಧ ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರೊಂದಿಗೆ ಒಗ್ಗೂಡಿ ‘ಆಮರಣಾಂತರ ಉಪವಾಸ ಸತ್ಯಾಗ್ರಹ’ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಹೇಶ ಕಲಘಟಗಿ, ಶಿವು ಕರಡಿ, ರಮೇಶ ಇಂಗಳಗಿ, ಈಶ್ವರಗೌಡ ಪಾಟೀಲ, ಶಿವು ಕೊಡ್ಲಿವಾಡ, ವೆಂಕಬಗೌಡ ಶಾನವಾಡ, ಅಡಿವೆಪ್ಪಗೌಡ ಪಾಟೀಲ, ನವೀನ ಪಾಟೀಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ
ನೈಸರ್ಗಿಕ ಸಂಪನ್ಮೂಲ ಉಳಿಸಲು ಶ್ರಮಿಸಿ