ಅಂಕೋಲಾ: ವಿಶೇಷಚೇತನ ಮಕ್ಕಳಿಗೆ ಅನುಕಂಪ ತೋರಿಸುವ ಬದಲು ಅವರಲ್ಲಿ ಸ್ಫೂರ್ತಿ ತುಂಬುವಂತ ಕೆಲಸ ನಮ್ಮಿಂದಾಗಬೇಕು ಮತ್ತು ಅವರಿಗೆ ಸಹಾಯಹಸ್ತ ಚಾಚಬೇಕು. ಅವರನ್ನು ಎಲ್ಲ ಮಕ್ಕಳಂತೆ ಕಾಣಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಅಂಕೋಲಾ, ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯ ಶಿಕ್ಷಣ ಯೋಜನೆ ಆಶ್ರಯದಲ್ಲಿ ಆಯೋಜಸಿದ್ದ ತಾಲೂಕು ಮಟ್ಟದ ವಿಶೇಷಚೇತನ ಮಕ್ಕಳ ದಿನಾಚರಣೆ ಮತ್ತು ಪಾಲಕರ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿಶೇಷ ಚೇತನ ಮಕ್ಕಳಲ್ಲಿಯೂ ಪ್ರತಿಭೆ ಹಾಗೂ ವಿವಿಧ ಸಾಮರ್ಥ್ಯಗಳಿರುತ್ತದೆ. ಅವರನ್ನು ಗುರುತಿಸಿ ಸಾಧನೆ ಮಾಡಲು ಪ್ರೇರೇಪಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಚಿಕಿತ್ಸೆ ನೀಡಲು ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ಸೌಲಭ್ಯ ಕಲ್ಪಿಸಲಾಗಿದೆ. ಅವರಿಗಾಗಿ ವೈದ್ಯರನ್ನು ಸಹ ನೇಮಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಮಾತನಾಡಿ, ವಿಶೇಷಚೇತನ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಇಲಾಖೆ ಮಾಡುತ್ತಿದೆ. ಮಕ್ಕಳನ್ನು ಗೌರವದಿಂದ ನೋಡಿಕೊಳ್ಳಬೇಕು. ಅಂಗವಿಕಲತೆ ಶಾಪವೂ ಅಲ್ಲ, ಪಾಪವೂ ಅಲ್ಲ ಎಂಬ ಮನಸ್ಥಿತಿ ನಮ್ಮಲ್ಲಿ ಬರಬೇಕು ಎಂದರು. ಈ ಸಂದರ್ಭದಲ್ಲಿ ವಿಶೇಷಚೇತನ ಮಕ್ಕಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಗಸೂರು ಕೆಪಿಎಸ್ 7ನೇ ತರಗತಿಯ ವಿದ್ಯಾರ್ಥಿನಿ ಸುವರ್ಣ ಹಾಗೂ ಕೇಣಿಯ ಹಿ.ಪ್ರಾ. ಶಾಲೆಯ ವಿದ್ಯಾರ್ಥಿ ಪ್ರಣಮ್ ಅವರನ್ನು ಸನ್ಮಾನಿಸಲಾಯಿತು.ಶಿಕ್ಷಣ ಸಂಯೋಜಕಿ ರಚನಾ, ಎಸ್ಎಸ್ಎಲ್‌ಸಿ ನೋಡಲ್ ಅಧಿಕಾರಿ ರಂಜಿತಾ, ಬಿಆರ್‌ಪಿ ಹರಿಶ್ಚಂದ್ರ, ಜಯಾ ನಾಯಕ, ತುಕಾರಾಮ ಬಂಟ, ಫಿಜಿಶಿಯನ್ ಡಾ. ರಕ್ಷಿತಾ ಕಾಮತ ಉಪಸ್ಥಿತರಿದ್ದರು. ಶಿಕ್ಷಕಿ ರಮಾ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ನಾಯಕ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯಕ ವಂದಿಸಿದರು.
ಉಮ್ಮಚಗಿ ವ್ಯ.ಸೇ.ಸ. ಸಂಘದ ವಾರ್ಷಿಕೋತ್ಸವಯಲ್ಲಾಪುರ: ತಾಲೂಕಿನ ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕೋತ್ಸವದ ನಿಮಿತ್ತ ಡಿ. ೪ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಬೆಳಗ್ಗೆಯಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಸಂಜೆ ಯುವ ಕಲಾವಿದೆ ರಜನಿ ರಾಜೀವ್ ಹೆಗಡೆ ಕೋಡ್ಸರ ಅವರು ತನ್ನ ಪ್ರಬುದ್ಧ ಅಭಿನಯದ ಮೂಲಕ ತ್ರಿಪುರ ಸುಂದರಿ ನೃತ್ಯ, ಓಂಕಾರ ಅಭಿನಯ ವೀರನೃತ್ಯ ಮತ್ತು ಶಿವತಾಂಡವ ನೃತ್ಯಗಳನ್ನು ಭರತನಾಟ್ಯದಲ್ಲಿ ಪ್ರಸ್ತುತಪಡಿಸಿದರು.ನಂತರ ಜಿಲ್ಲೆಯ ಪ್ರಬುದ್ಧ ಗಾಯಕ ರವಿ ಮೂರೂರು ಸಂಗಡಿಗರು ಪ್ರಸ್ತುತಪಡಿಸಿದ ಭಾವವರ್ಷ ಕಾರ್ಯಕ್ರಮ ಕಲಾಸಕ್ತರ ಮನಸೂರೆಗೊಂಡಿತು.ಕಾರ್ಯಕ್ರಮದ ಆರಂಭದಲ್ಲಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಮಾತನಾಡಿದರು. ನಾಗರಾಜ ಜಾಲಿಮನೆ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷ ಎಂ.ಪಿ. ಹೆಗಡೆ ಚವತ್ತಿ, ಮುಖ್ಯಕಾರ್ಯನಿರ್ವಾಹಕ ಆರ್.ಎಸ್. ಹೆಗಡೆ ಕನೇನಹಳ್ಳಿ ಇದ್ದರು.