ಗ್ರಾಪಂಗಳಲ್ಲಿ ಸಾಂಕ್ರಾಮಿಕ ರೋಗದ ಮುನ್ನೆಚ್ಚರಿಕೆ ಫಲಕ ಅಳವಡಿಸಿ

KannadaprabhaNewsNetwork |  
Published : Jun 04, 2025, 02:01 AM IST
ಕೆಡಿಪಿ  ಸಭೆ ನಡೆಸಿದರು  | Kannada Prabha

ಸಾರಾಂಶ

ಶಿರವಾಡದ ಕಸ ವಿಲೇವಾರಿ ಘಟಕದಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ.

ಕಾರವಾರ: ಮಳೆಗಾಲದಲ್ಲಿ ಡೆಂಘೀ, ಮಲೇರಿಯಾ, ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳ ಮತ್ತು ಯಾರನ್ನು ಸಂಪರ್ಕಿಸಬೇಕು ಎಂಬುದರ ಕುರಿತು ಆರೋಗ್ಯ ಇಲಾಖೆಯಿಂದ ಸೂಚನಾ ಫಲಕಗಳನ್ನು ಮುದ್ರಿಸಿ, ಎಲ್ಲ ಗ್ರಾಪಂಗಳಿಗೆ ನೀಡುವಂತೆ ಹಾಗೂ ಈ ಫಲಕಗಳನ್ನು ಗ್ರಾಪಂಗಳಲ್ಲಿ ಅಳವಡಿಸುವಂತೆ ಶಾಸಕ ಸತೀಶ ಸೈಲ್ ಸೂಚನೆ ನೀಡಿದರು.ತಾಪಂ ಸಭಾಂಗಣದಲ್ಲಿ ನಡೆದ ತಾಪಂ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿರವಾಡದ ಕಸ ವಿಲೇವಾರಿ ಘಟಕದಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಇಲ್ಲಿನ ನೀರು ಪರೀಕ್ಷೆ ಮಾಡುವಂತೆ ಸೂಚಿಸಿದ ಅವರು, ಡಂಪಿಂಗ್ ಯಾರ್ಡ್‌ಗೆ ಭೇಟಿ ನೀಡಿ, ಸ್ಥಳೀಯರ ಸಮಸ್ಯೆ ಆಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೀಬರ್ಡ್ ಕಾರ್ಮಿಕ ಗುತ್ತಿಗೆಗಾರರು ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ನೀಡಬೇಕು. ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಉತ್ತಮವಾಗಬೇಕು ಎಂದರು.

ಮಲ್ಲಾಪುರದ ಕುರ್ನಿಪೇಟೆ ಶಾಲಾ ಆವರಣದಲ್ಲಿ ಆರೋಗ್ಯ ಕ್ಷೇಮ ಕೇಂದ್ರ ನಿರ್ಮಾಣ ಕುರಿತು ನಿರಾಕ್ಷೇಪಣಾ ಪತ್ರ ನೀಡದ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಸ್ಥಳೀಯ ಜನರ ಅನುಕೂಲಕ್ಕಾಗಿ ಶಾಲಾ ಆವರಣದಲ್ಲಿ ಆರೋಗ್ಯ ಕ್ಷೇಮ ಕೇಂದ್ರ ಸ್ಥಾಪಿಸುವುದರಲ್ಲಿ ತಪ್ಪೇನಿದೆ? ಈ ಕೂಡಲೇ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಸ್ಥಳೀಯರನ್ನು ಒಳಗೊಂಡು ಸಭೆ ಮಾಡಿ, ಆರೋಗ್ಯ ಕ್ಷೇಮ ಕೇಂದ್ರ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ವಿದ್ಯುತ್ ಸರಬರಾಜು ಸಮರ್ಪಕಗೊಳಿಸಿ:

ತಾಪಂ ಸಭಾಭವನದಲ್ಲಿ ಹೆಸ್ಕಾಂ ಅಹವಾಲು ಸ್ವೀಕಾರ ಸಭೆ ನಡೆಸಿದ ಎಂಸಿಎ ಅಧ್ಯಕ್ಷ ಸತೀಶ ಸೈಲ್, ಮಳೆಗಾಲ ಆರಂಭವಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿವೆ. ಯಾವುದೇ ಕಾರಣಕ್ಕೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ಸಾಂಕೇತಿಕವಾಗಿ ತಾಪಂ ಸಭಾಭವನದಲ್ಲಿ ಶಾಸಕ ಸತೀಶ ಸೈಲ್ ವಿತರಿಸಿದರು. ಮೀನುಗಾರಿಕೆ ಜೀವರಕ್ಷಕ ಸಾಧನ ಸಾಮಗ್ರಿಗಳ ಉಚಿತ ವಿತರಣೆ ಯೋಜನೆಯಡಿ 2024-25ನೇ ಸಾಲಿನಲ್ಲಿ ಕಾರವಾರ ತಾಲೂಕಿನ 28 ಮೀನುಗಾರಿಕೆ ದೋಣಿಗಳ ಮಾಲೀಕರಿಗೆ ಉಚಿತವಾಗಿ ಲೈಫ್‌ಬಾಯ್‌ಗಳನ್ನು, ಕಾರವಾರದ ನಂದನಗದ್ದ ಅಜಯ ಸುರೇಶ ಸಾವಂತ, ಬೈತಖೋಲ್‌ನ ನಟರಾಜ ಮೋಹನ ದುರ್ಗೇಕರ ಅವರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.

ಇದಲ್ಲದೆ, ಕೆಲವು ಮೀನುಗಾರರಿಗೆ ಇತರ ಸೌಲಭ್ಯ ವಿತರಿಸಲಾಯಿತು.

2022-23ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ ಕಾರವಾರ ತಾಲೂಕಿನ 36 ಫಲಾನುಭವಿಗಳಿಗೆ ಮನೆ ಮಂಜೂರಾತಿ ಪ್ರಮಾಣಪತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾಧ್ಯಕ್ಷ ರಾಜೇಂದ್ರ ರಾಣೆ, ತಹಸೀಲ್ದಾರ್‌ ನಿಶ್ಚಲ್ ನರೋನಾ, ತಾಪಂ ಆಡಳಿತ ಅಧಿಕಾರಿ ಸೋಮಶೇಖರ ಮೇಸ್ತಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏಗನಗೌಡರ, ನಗರಸಭೆಯ ಪೌರಾಯುಕ್ತ ಜಗದೀಶ್ ಹುಲಗಜ್ಜಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!