ಉತ್ತರ ಕನ್ನಡ ಜಿಲ್ಲಾದ್ಯಂತ 1,492 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ

KannadaprabhaNewsNetwork |  
Published : Sep 09, 2026, 02:15 AM IST
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾತನಾಡಿದರು. | Kannada Prabha

ಸಾರಾಂಶ

ಈ ಬಾರಿ ಜಿಲ್ಲಾದ್ಯಂತ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಹಬ್ಬದ ಸಿದ್ಧತೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ 400ಕ್ಕೂ ಹೆಚ್ಚು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ.

ಕಾರವಾರ: ಜಿಲ್ಲಾದ್ಯಂತ ಮುಂಬರುವ ಗಣೇಶೋತ್ಸವವನ್ನು ಶಾಂತಿಯುತ, ಶಿಸ್ತುಬದ್ಧ ಹಾಗೂ ಪರಿಸರಸ್ನೇಹಿಯಾಗಿ ಆಚರಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದರು. ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ನೇತೃತ್ವದಲ್ಲಿ ನಡೆದ ಶಾಂತಿಪಾಲನಾ ಸಭೆಯಲ್ಲಿ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳ ಕುರಿತು ಆಯೋಜಕರಿಗೆ ಮಾಹಿತಿ ನೀಡಿದರು.ಈ ಬಾರಿ ಜಿಲ್ಲಾದ್ಯಂತ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಹಬ್ಬದ ಸಿದ್ಧತೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ 400ಕ್ಕೂ ಹೆಚ್ಚು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಗಣೇಶೋತ್ಸವ ಸಮಿತಿಗಳು ವಿವಿಧ ಇಲಾಖೆಗಳ ಅನುಮತಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸ್ಥಳೀಯ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ‘ಸಿಂಗಲ್ ವಿಂಡೋ’ ಅಥವಾ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಯೋಜಕರು ಒಂದೇ ಅರ್ಜಿಯ ಮೂಲಕ ಹೆಸ್ಕಾಂ, ಆರ್‌ಟಿಒ, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಗಳ ಅಗತ್ಯ ಅನುಮತಿಗಳನ್ನು ಪಡೆಯಬಹುದಾಗಿದೆ ಎಂದರು.ಕಳೆದ ವರ್ಷದಂತೆ ಈ ಬಾರಿಯೂ ಜಿಲ್ಲಾದ್ಯಂತ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಅನುಸಾರ ಸಾಧಾರಣ ಧ್ವನಿವರ್ಧಕಗಳ ಬಳಕೆಗೆ ಮಾತ್ರ ಅವಕಾಶವಿದ್ದು, ಶಬ್ದಮಾಲಿನ್ಯ ನಿಯಂತ್ರಣಕ್ಕಾಗಿ ನಿಗದಿತ ಡೆಸಿಬಲ್ ಮಿತಿಯನ್ನು ಪಾಲಿಸಬೇಕು ಎಂದು ಸೂಚಿಸಿದ ಅವರು, ವಸತಿ ಪ್ರದೇಶಗಳಲ್ಲಿ 55 ಡೆಸಿಬಲ್ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ 65 ಡೆಸಿಬಲ್ ಮಿತಿಯನ್ನು ಪಾಲಿಸಬೇಕು. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದರು.ಇನ್ನು ಮೆರವಣಿಗೆಗೆ ಬಳಸುವ ವಾಹನಗಳು ಹಾಗೂ ಚಾಲಕರಿಗೆ ಅಗತ್ಯ ಆರ್‌ಟಿಒ ಪರವಾನಗಿ ಕಡ್ಡಾಯವಾಗಿದ್ದು, ಪೆಂಡಾಲ್‌ಗಳ ಸುರಕ್ಷತೆಗಾಗಿ ಪಿಡಬ್ಲ್ಯುಡಿ ಹಾಗೂ ಹೆಸ್ಕಾಂ ಇಲಾಖೆಗಳ ಪ್ರಮಾಣೀಕರಣ ಪಡೆಯಬೇಕು. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಧರ್ಮದ ವಿರುದ್ಧ ಅವಹೇಳನಕಾರಿ ಹಾಡುಗಳನ್ನು ಬಳಸುವಂತಿಲ್ಲ. ಮದ್ಯಪಾನ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ದೀಪನ್ ಎಂ.ಎನ್. ಎಚ್ಚರಿಸಿದರು.ಜಿಲ್ಲೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳ ಪೈಕಿ ಶಿರಸಿ ಉಪವಿಭಾಗದಲ್ಲಿ ಅತಿ ಹೆಚ್ಚು 668 ಮೂರ್ತಿಗಳು ಪ್ರತಿಷ್ಠಾಪನೆಯಾಗಲಿವೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕುಗಳು ಈ ಉಪವಿಭಾಗಕ್ಕೆ ಸೇರಿವೆ. ಭಟ್ಕಳ ಉಪವಿಭಾಗದಲ್ಲಿ 392, ಕಾರವಾರ- ಅಂಕೋಲಾ ಭಾಗದಲ್ಲಿ 131 ಹಾಗೂ ದಾಂಡೇಲಿ- ಹಳಿಯಾಳ-ಜೋಯಿಡಾ ಭಾಗದಲ್ಲಿ 301 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಜಿಲ್ಲೆಯ ಸುಮಾರು ಶೇ. 95ರಷ್ಟು ಗಣೇಶ ಮೂರ್ತಿಗಳು 11 ದಿನಗಳೊಳಗೆ ವಿಸರ್ಜನೆಯಾಗಲಿವೆ ಎಂದು ಎಸ್ಪಿ ಮಾಹಿತಿ ನೀಡಿದರು.

ವಿಸರ್ಜನೆಯ ದಿನದಂದು ಸಣ್ಣ ಮೂರ್ತಿಗಳಿಗಾಗಿ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.19 ಸಾವಿರ ಸಿಸಿ ಟಿವಿಗಳ ಕಣ್ಗಾವಲು

ಗಣೇಶೋತ್ಸವದ ಭದ್ರತೆಗಾಗಿ ಜಿಲ್ಲಾದ್ಯಂತ 400 ಹೋಂ ಗಾರ್ಡ್‌ಗಳು, 15 ಡಿಎಆರ್ ತುಕಡಿಗಳು ಹಾಗೂ ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ಗಣೇಶ ಮಂಟಪದಲ್ಲೂ ಸಿಸಿ ಟಿವಿ ಅಳವಡಿಕೆಗೆ ಒತ್ತು ನೀಡಲಾಗಿದ್ದು, ಜಿಲ್ಲೆಯ ಸುಮಾರು 19,000 ಸಿಸಿ ಟಿವಿ ಕ್ಯಾಮೆರಾಗಳನ್ನು ಮ್ಯಾಪಿಂಗ್ ಮಾಡಲಾಗಿದೆ.

ಇವುಗಳಲ್ಲಿ 236 ಲೈವ್ ಕ್ಯಾಮೆರಾಗಳ ದೃಶ್ಯಗಳನ್ನು ನೇರವಾಗಿ ಪೊಲೀಸ್ ಠಾಣೆಗಳಿಂದಲೇ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಹಳೆಯ ಗಲಾಟೆ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಬಿಎನ್‌ಎಸ್ ಕಲಂ 126ರಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ತಂಡದಿಂದ ವಿದ್ಯಾರ್ಥಿಗಳ ತಪಾಸಣೆ
ಹಲವು ಸವಾಲುಗಳನ್ನೆದುರಿಸಿ ಶಿಕ್ಷಕರು ವೃತ್ತಿ ಗೌರವ ಕಾಪಾಡಿಕೊಳ್ಳಬೇಕಾಗಿದೆ