ಹುಲಿಗಿ ಕ್ರಾಸ್, ಶಾಪುರ ಕ್ರಾಸ್ ಹಾಗೂ ಬೂದೇಶ್ವರ ಕ್ರಾಸ್ ಸಮೀಪ 2 ಹೈಮಾಸ್ಟ್ ದೀಪ ಅಳವಡಿಕೆ । ಅಪಘಾತ ತಪ್ಪಿಸಲು ಕ್ರಮ
ಕನ್ನಡಪ್ರಭ ವಾರ್ತೆ ಮುನಿರಾಬಾದಇಲ್ಲಿನ ಸಮೀಪದ ಹುಲಿಗಿ ಕ್ರಾಸ್, ಶಾಪುರ ಕ್ರಾಸ್ ಹಾಗೂ ಬೂದೇಶ್ವರ ಕ್ರಾಸ್ ಮುಂದೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಪದೇ ಪದೇ ರಸ್ತೆ ಅಪಘಾತದಿಂದ ಭಾರಿ ಪ್ರಮಾಣದಲ್ಲಿ ಸಾವು-ನೋವು ಸಂಭವಿಸುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಮೂರು ಕ್ರಾಸಿನ ಮುಂದುಗಡೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 80 ವಿದ್ಯುತ್ ದೀಪ, 2 ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಕೊಪ್ಪಳ ಎಸ್.ಪಿ. ಯಶೋದಾ ವಂಟಗೋಡಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹುಲಿಗಿ ಕ್ರಾಸ್, ಶಾಪುರ ಕ್ರಾಸ್, ಬೂದೇಶ್ವರ ಕ್ರಾಸ್ ಸಮೀಪ ಕಳೆದ ಒಂದು ದಶಕದಲ್ಲಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ಸುಮಾರು 60ರಿಂದ 70 ಜನರು ಸಾವನ್ನಪ್ಪಿದ್ದಾರೆ. ಇದು ಹೈರಿಸ್ಕ್ ಅಪಘಾತ ವಲಯ ಎಂದು ಪರಿಗಣಿಸಲ್ಪಟ್ಟಿದೆ.ಮುನಿರಾಬಾದ ಠಾಣೆಯ ಪಿಎಸ್‌ಐ ಸುನೀಲ್ ಈ ವಿಷಯವನ್ನು ಕೊಪ್ಪಳ ಎಸ್ಪಿಯವರ ಗಮನಕ್ಕೆ ತಂದಿದ್ದರು. ಎಸ್ಪಿ ಯಶೋದಾ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಬಳಿಕ ಪರಿಸ್ಥಿತಿಯ ಗಂಭೀರತೆ ಅರಿತು ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಕೊಪ್ಪಳ ಎಸ್.ಪಿ ಪತ್ರ ಬರೆದು ಈ ಮೂರು ಕ್ರಾಸ್‌ಗಳಲ್ಲಿ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಅವಶ್ಯಕವಾಗಿದೆ ಎಂದು ವಿವರಿಸಿ, ಈ ನಿಟ್ಟಿನಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಗಳು ಈ ಮೂರು ಕ್ರಾಸ್‌ಗಳಲ್ಲಿ 80 ವಿದ್ಯುತ್ ದೀಪ ಹಾಗೂ 2 ಹೈಮಾಸ್ಟ್ ದೀಪಗಳನ್ನು ಅಳವಡಿಸಿದ್ದಾರೆ.ವಿದ್ಯುತ್ ದೀಪ, 2 ಹೈಮಾಸ್ಟ್ ದೀಪದ ಅಳವಡಿಕೆಯಿಂದ ಹುಲಿಗೆಮ್ಮ ದೇವಸ್ಥಾನಕ್ಕೆ ಅಗಮಿಸುವ ಭಕ್ತಾಧಿಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತುಂಬಾ ಅನೂಕೂಲವಾಗಿದೆ ಎನ್ನುತ್ತಾರೆ ದೇವಸ್ಥಾನ ಸಮಿತಿಯ ಮಾಜಿ ಸದಸ್ಯ ವಿಜಯಕುಮಾರ ಶೆಟ್ಟಿ.ಮೂರು ಕ್ರಾಸುಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿರುವುದು ಸಂತಸದ ವಿಷಯವಾಗಿದೆ. ಇದರಿಂದ ಅಪಘಾತ ಕಡಿಮೆಯಾಗಬಹುದು ಎಂದು ಹುಲಿಗಿ ಗ್ರಾಮದ ಹಿರಿಯ ಪ್ರಭುರಾಜ್ ಪಾಟೀಲ್ ತಿಳಿಸಿದ್ದಾರೆ.