ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈಗ ಜಲಾಶಯದಲ್ಲಿ 38.608 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ 19ನೇ ಗೇಟ್‌ಗೆ ಸ್ಟಾಪ್‌ಲಾಗ್ ಅಳವಡಿಕೆ ಮಾಡಿರುವುದನ್ನು ತೆರವುಗೊಳಿಸಿ ಹೊಸ ಕ್ರಸ್ಟ್‌ಗೇಟ್ ನಿರ್ಮಾಣ ಮಾಡುವುದಕ್ಕೂ ಈಗ ಒಳಹರಿವು ಅಡ್ಡಿಯಾಗಿದೆ. ಗದಗದಿಂದ ಕ್ರಸ್ಟ್‌ಗೇಟ್ ತರಲಾಗುತ್ತಿದ್ದು, ಅದನ್ನು ಅಳವಡಿಸುವ ಕಾರ್ಯಕ್ಕೆ ಈಗ ಒಳಹರಿವು ಅಡ್ಡಿಯಾಗಿದೆ. ಹಾಗಾಗಿ ಅಕ್ಟೋಬರ್ ಇಲ್ಲವೇ ನವೆಂಬರ್‌ನಲ್ಲಿ ಕ್ರಸ್ಟ್‌ಗೇಟ್ ನಿರ್ಮಾಣ ಮಾಡಲು ತುಂಗಭದ್ರಾ ಮಂಡಳಿ ನಿರ್ಧರಿಸಿದೆ.
ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಗೆ ಉಳಿದ 32 ಕ್ರಸ್ಟ್‌ಗೇಟ್ ಬದಲಿಸಿ, ಹೊಸ ಗೇಟ್ ನಿರ್ಮಾಣದ ಗುತ್ತಿಗೆಯನ್ನೂ ನೀಡಲಾಗಿದೆ. ಈಗ 19ನೇ ಕ್ರಸ್ಟ್‌ಗೇಟ್ ಸಿದ್ಧಗೊಂಡರೂ ಅಳವಡಿಸಲು ಒಳಹರಿವು ಅಡ್ಡಿಯಾಗಿದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದ 19ನೇ ಗೇಟ್ 2024ರ ಆಗಸ್ಟ್ 10ರ ರಾತ್ರಿ ಕಳಚಿ ಬಿದ್ದಿತ್ತು. ಇದರಿಂದ 40 ಟಿಎಂಸಿಯಷ್ಟು ನೀರು ನದಿ ಪಾಲಾಗಿತ್ತು. ಆಗ ಪರಿಣತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಸ್ಟಾಪ್‌ಲಾಗ್ ಅಳವಡಿಕೆ ಮಾಡಲಾಗಿತ್ತು. ಈಗ ಕ್ರಸ್ಟ್‌ಗೇಟ್ ನಿರ್ಮಾಣಗೊಂಡರೂ ಒಳಹರಿವಿನಲ್ಲಿ ಭಾರೀ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಗೇಟ್ ಅಳವಡಿಕೆ ಕಾರ್ಯವನ್ನು ಮುಂದೂಡಲಾಗುತ್ತಿದೆ.