ಮೇ ಅಂತ್ಯಕ್ಕೆ ಎಲ್ಲ 33 ಕ್ರಸ್ಟ್‌ ಗೇಟ್‌ ಅಳವಡಿಕೆ ಪೂರ್ಣ- ಬೋಸರಾಜು

KannadaprabhaNewsNetwork |  
Published : Mar 21, 2026, 02:15 AM IST
ಫೋಟೋವಿವರ- (20ಎಚ್‌ಪಿಟಿ1) ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಶುಕ್ರವಾರ ಭೇಟಿ ನೀಡಿ, ತಾಂತ್ರಿಕ ತಂಡವು ನಡೆಸುತ್ತಿರುವ ಜಲಾಶಯದ ಕ್ರೆಸ್ಟ್ ಗೇಟ್ ಅಳವಡಿಕೆ ಕಾರ್ಯಗಳನ್ನು ಖುದ್ದು ವೀಕ್ಷಿಸಿದರು | Kannada Prabha

ಸಾರಾಂಶ

ಈಗಾಗಲೇ ತುಂಗಭದ್ರಾ ಜಲಾಶಯದ18 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 5 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ

ಹೊಸಪೇಟೆ: ಮೇ ಅಂತ್ಯದೊಳಗೆ ತುಂಗಭದ್ರಾ ಜಲಾಶಯದ ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ‌. ಕಾಮಗಾರಿಯು ನಿರೀಕ್ಷಿತ ಸಮಯಕ್ಕಿಂತ ವೇಗವಾಗಿ ಸಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಶುಕ್ರವಾರ ಭೇಟಿ ನೀಡಿ, ತಾಂತ್ರಿಕ ತಂಡವು ನಡೆಸುತ್ತಿರುವ ಜಲಾಶಯದ ಕ್ರೆಸ್ಟ್ ಗೇಟ್ ಅಳವಡಿಕೆ ಕಾರ್ಯಗಳನ್ನು ಖುದ್ದು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೂನ್‌ನಲ್ಲಿ ಆರಂಭವಾಗುವ ಮುಂಗಾರು ಮಳೆಗಾಲದ ವೇಳೆಗೆ ಜಲಾಶಯವು ಸಂಪೂರ್ಣ ಸಿದ್ಧವಾಗಲಿದೆ ಎಂದರು.

ಈಗಾಗಲೇ ತುಂಗಭದ್ರಾ ಜಲಾಶಯದ18 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 5 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯದ ವೇಳೆಗೆ ಒಟ್ಟು 23 ಗೇಟ್‌ಗಳ ಕೆಲಸ ಮುಗಿಯುವ ನಿರೀಕ್ಷೆಯಿದೆ. ಎಕ್ಸ್‌ಪರ್ಟ್ ಟೀಮ್ ಮತ್ತು ಚೀಫ್ ಎಂಜಿನಿಯರ್‌ಗಳ ಪ್ರಕಾರ, ಗೇಟ್ ಬದಲಾವಣೆಯ ಸಮಯದಲ್ಲಿ ಹಳೆಯ ಅಣೆಕಟ್ಟಿನ ರಚನೆಗೆ ಯಾವುದೇ ತೊಂದರೆಯಾಗಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಉಳಿದ 10 ಗೇಟ್‌ಗಳನ್ನು ಅಳವಡಿಸಿ, ಮೇ ಅಂತ್ಯದೊಳಗೆ ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಜಲಾಶಯದ ಗೇಟ್‌ಗಳಿಗೆ ನೂತನ ಚೈನ್‌ ಅಳವಡಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಚೈನ್‌ಗಳಿಗಾಗಿ ₹5.6 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು. ಪ್ರತಿ ಗೇಟ್‌ಗೆ ಎರಡು ಚೈನಿನಂತೆ 33 ಗೇಟ್‌ಗಳಿಗೆ 66 ಚೈನ್‌ ಅಳವಡಿಸಲಾಗುವುದು. ಜಲಾಶಯದ ಎಲ್ಲ 33 ನೂತನ ಗೇಟ್ ಅಳವಡಿಕೆ ನಂತರ ಜಲಾಶಯದ ಗೇಟ್‌ಗಳಿಗೆ ಚೈನ್‌ ಅಳವಡಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.

ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆಗೆ ₹ 48 ಕೋಟಿ ಟೆಂಡರ್ ಕರೆಯಲಾಗಿದ್ದು, ಇದುವರೆಗೆ ₹35 ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದರು.

ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನ ಸಮಸ್ಯೆಗೆ ಪರಿಹಾರವಾಗಿ ’ನವಲಿ’ ಯೋಜನೆಯ ಪ್ರಸ್ತಾವನೆಯನ್ನು ಮಂಡಳಿ ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ. ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೂ ಸಹ ಪತ್ರ ವ್ಯವಹಾರ ನಡೆಸಲಾಗಿದೆ. ಸಂಬಂದಪಟ್ಟ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ತೆಲಂಗಾಣ ಸರ್ಕಾರದೊಂದಿಗೂ ಸಮನ್ವಯ ಸಾಧಿಸಲು ಪ್ರಯತ್ನಿಸಲಾಗುತ್ತಿದ್ದು, ವಿವಿಧ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಗಳು ಬಗೆಹರಿದ ನಂತರ ಪೂರ್ಣ ಸಹಕಾರ ಸಿಗುವ ನಿರೀಕ್ಷೆಯಿದೆ ಎಂದರು.

ಈ ಬಗ್ಗೆ ನಮ್ಮ ರಾಜ್ಯದ ವಿವಿಧ ಚುನಾಯಿತ ಪ್ರತಿನಿಧಿಗಳ ನಿಯೋಗವು ನವದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದ ಅಧಿಕಾರಿಗಳು ಮತ್ತು ವಿವಿಧ ರಾಜ್ಯಗಳ ಸಂಸದರೊಂದಿಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚುನಾವಣಾ ನೀತಿ ಸಂಹಿತೆಯ ಪ್ರಕ್ರಿಯೆಗಳ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಕೊಪ್ಪಳ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಟಿಬಿ ಬೋರ್ಡ್ ಹಾಗೂ ಕೆ.ಎನ್.ಎನ್.ಎಲ್. ಅಧಿಕಾರಿಗಳಾದ ಮುಖ್ಯ ಇಂಜಿನಿಯರ್ ಶ್ರೀನಿವಾಸ ಮಲ್ಲಿಗಿವಾಡ, ಎಇಇ ಧರ್ಮರಾಜ್ ಹಾಗೂ ಜ್ಞಾನೇಶ್ವರ, ಸೆಕ್ಷನ್ ಅಧಿಕಾರಿಗಳಾದ ಜಿ. ಕಿರಣ, ಪಂಪಾಪತಿ ಡಿ.ಕೆ. ಮತ್ತು ಹುಲಿರಾಜ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಸಿಯಾ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯ: ಬಿಷಪ್ ಜೆರಾಲ್ಡ್ ಲೋಬೊ
ಶರಣರ ತತ್ವಗಳು ಬದುಕಿಗೆ ಪ್ರೇರಣೆ: ಡಾ. ಸವಿತಾ ಸಿದ್ದನೂರ