ಹಾನಗಲ್ಲ: ತಾಲೂಕಿನ ಕೆಲ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿ, ಆದೇಶಿಸಲಾಗಿದ್ದು, ಪಹಣಿಯಲ್ಲಿ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ತಹಸೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು.
ತಾಲೂಕಿನಲ್ಲಿ ರಚಿಸಲು ಉದ್ದೇಶಿಸಿರುವ ಕಂದಾಯ ಗ್ರಾಮ, ಉಪ ಗ್ರಾಮಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಹಾಗೂ ಹಕ್ಕುಪತ್ರಗಳ ಹಂಚಿಕೆಯ ಮಾಹಿತಿ ಪಡೆದರು. ತಹಸೀಲ್ದಾರ್ ಕಚೇರಿಯಲ್ಲಿನ ಅಭಿಲೇಖಾಲಯ ಡಿಜಿಟಲೀಕರಣದ ಪ್ರಗತಿ ಕುರಿತು ವಿವರಣೆ ಪಡೆದು ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಲು ಕಂದಾಯ ದಾಖಲೆಗಳ ಡಿಜಿಟಲೀಕರಣ ಕಾರ್ಯ ಬೇಗ ಪೂರ್ಣಗೊಳಿಸುವಂತೆ ಸೂಚಿಸಿದರು.ಬಗರಹುಕುಂ ಸಮಿತಿಯ ಸಭೆಗಳನ್ನು ನಿಗದಿತ ಅವಧಿಯೊಳಗೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ವಹಿಸಬೇಕು. ಹಿಂದೆ ಬಗರಹುಕುಂ ಸಮಿತಿಗಳಲ್ಲಿ ಜಮೀನು ಮಂಜೂರು ಮಾಡಿ ಆದೇಶಿಸಲಾಗಿದ್ದರೂ ಹಕ್ಕುಪತ್ರ ವಿತರಿಸಲು ಹಾಗೂ ಪಹಣಿಯಲ್ಲಿ ದಾಖಲಿಸಲು ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ದೂರು ಬರದಂತೆ ಕಾಳಜಿ ವಹಿಸಬೇಕು. ೨೦೨೨-೨೩ನೇ ಸಾಲಿನ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದಡಿ ಮನೆ ಹಾನಿಯಾದ ಫಲಾನುಭವಿಗಳಿಗೆ ಬಾಕಿ ಸಹಾಯಧನ ಮಂಜೂರಿಗೆ ಕ್ರಮ ಕೈಗೊಳ್ಳಬೇಕು. ಕೆಲವೆಡೆ ಮನೆಗಳ ಜಿಪಿಎಸ್ ಆಗಿದ್ದರೂ ಪ್ರಮಾಣೀಕರಿಸಲು ವಿಳಂಬ ಮಾಡುತ್ತಿರುವ ದೂರು ಕೇಳಿ ಬರುತ್ತಿದ್ದು, ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಸಭೆಯಲ್ಲಿ ಸೂಚನೆ ನೀಡಿದರು.