ಹಾಸನಾಂಬೆಯ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಸೂಚನೆ

KannadaprabhaNewsNetwork |  
Published : Oct 10, 2026, 01:45 AM IST
9ಎಚ್ಎಸ್ಎನ್9 :  | Kannada Prabha

ಸಾರಾಂಶ

ಭಕ್ತಾದಿಗಳು ದೇವಿ ದರ್ಶನ ಪಡೆದು ಹೊರ ಹೋಗುವ ದ್ವಾರದ ಬಳಿ ರ್ಯಾಂಪ್ ಅನ್ನು ವಿಸ್ತರಿಸುವಂತೆ ಜೊತೆಗೆ ಜಾರದಂತೆ ನಿರ್ಮಾಣ ಮಾಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ದೊನ್ನೆ ಪ್ರಸಾದ ವಿತರಣೆಯಲ್ಲಿ ಭಕ್ತಾದಿಗಳು ಪ್ರಸಾದ ಸ್ವೀಕರಿಸಲು ಅನುಕೂಲವಾಗುವಂತೆ ಚಿಕ್ಕ ಮರದ ಸ್ಪೂನ್ ನೀಡುವಂತೆ ಸೂಚಿಸಿದರಲ್ಲದೆ, ಕಸದ ಬುಟ್ಟಿಗಳನ್ನು ಇರಿಸಲು, ಭಕ್ತಾದಿಗಳು ದೇವಿಗೆ ಅರ್ಪಿಸಲು ತರುವ ಮಡಲಕ್ಕಿಯನ್ನು ದೇವಾಲಯದ ಹೊರಭಾಗದಲ್ಲಿ ನೀಡಲು ಅಗತ್ಯ ಕೌಂಟರ್ ತೆರೆಯಲು ಜೊತೆಗೆ ಆಗಿಂದಾಗ್ಗೆ ಭಕ್ತರ ಮಾಹಿತಿಗಾಗಿ ಧ್ವನಿ ವರ್ಧಕದ ಮೂಲಕ ಪ್ರಕಟಣೆ ಮಾಡುತ್ತಿರಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಶ್ರೀ ಹಾಸನಾಂಬಾ ದೇವಿ ಗರ್ಭಗುಡಿ ಮುಂಭಾಗದ ಪ್ರಾಂಗಣದಿಂದಲೆ ಭಕ್ತಾದಿಗಳು ಸುಗಮವಾಗಿ ದೇವಿ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಅವರು ಶುಕ್ರವಾರ ಶ್ರೀ ಹಾಸನಾಂಬಾ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗರ್ಭಗುಡಿ ಮುಂಭಾಗದ ಪ್ರಾಂಗಣದಲ್ಲಿ ಎ. ಸಿ. ನಿರಂತರವಾಗಿ ಚಾಲನೆ ಆಗುತ್ತಿರಬೇಕು. ಮೇಲ್ಚಾವಣಿ ಸರಿಪಡಿಸಲು ಹಾಗೂ ಯಾವುದೇ ವಸ್ತುಗಳನ್ನು ಇರಿಸದಂತೆ ಸ್ವಚ್ಚವಾಗಿಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭಕ್ತಾದಿಗಳು ದೇವಿ ದರ್ಶನ ಪಡೆದು ಹೊರ ಹೋಗುವ ದ್ವಾರದ ಬಳಿ ರ್ಯಾಂಪ್ ಅನ್ನು ವಿಸ್ತರಿಸುವಂತೆ ಜೊತೆಗೆ ಜಾರದಂತೆ ನಿರ್ಮಾಣ ಮಾಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ದೊನ್ನೆ ಪ್ರಸಾದ ವಿತರಣೆಯಲ್ಲಿ ಭಕ್ತಾದಿಗಳು ಪ್ರಸಾದ ಸ್ವೀಕರಿಸಲು ಅನುಕೂಲವಾಗುವಂತೆ ಚಿಕ್ಕ ಮರದ ಸ್ಪೂನ್ ನೀಡುವಂತೆ ಸೂಚಿಸಿದರಲ್ಲದೆ, ಕಸದ ಬುಟ್ಟಿಗಳನ್ನು ಇರಿಸಲು, ಭಕ್ತಾದಿಗಳು ದೇವಿಗೆ ಅರ್ಪಿಸಲು ತರುವ ಮಡಲಕ್ಕಿಯನ್ನು ದೇವಾಲಯದ ಹೊರಭಾಗದಲ್ಲಿ ನೀಡಲು ಅಗತ್ಯ ಕೌಂಟರ್ ತೆರೆಯಲು ಜೊತೆಗೆ ಆಗಿಂದಾಗ್ಗೆ ಭಕ್ತರ ಮಾಹಿತಿಗಾಗಿ ಧ್ವನಿ ವರ್ಧಕದ ಮೂಲಕ ಪ್ರಕಟಣೆ ಮಾಡುತ್ತಿರಬೇಕು ಎಂದು ತಿಳಿಸಿದರು.

ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶೌಚಾಲಯಗಳ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗಳ ಹಾಜರಾತಿ ಪ್ರತಿದಿನ ಕಡ್ಡಾಯವಾಗಿ ಹಾಕಬೇಕು ಎಂದ ಅವರು, ಯಾವ ಪಾಳಿಯಲ್ಲಿ ಯಾರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಇರಬೇಕು. ಈ ನಿಟ್ಟಿನಲ್ಲಿ ಪಟ್ಟಿ ತಯಾರಿಸುವಂತೆ ತಿಳಿಸಿದರು. ಸ್ವಚ್ಚತಗಾರರಿಗೆ ತರಬೇತಿ ಅಯೋಜಿಸುವಂತೆ ತಿಳಿಸಿದರು.

ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಹಾಲಿ ಇರುವ ಶೌಚಾಲಯಗಳ ಜೊತೆಗೆ ಹೆಚ್ಚುವರಿ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ೩೦೦ ರು. ಗಳ ಸರತಿ ಸಾಲು ವಿಸ್ತರಣೆ ಮಾಡಬೇಕು ಎಂದ ಜಿಲ್ಲಾಧಿಕಾರಿ ಅವರು, ಭಕ್ತಾಧಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ವೆಲ್ಡಿಂಗ್ ಶಾಪ್ ಸೇರಿದಂತೆ ಮತ್ತಿತರ ಕಿಡಿ ಉಂಟು ಮಾಡುವ ಯಾವುದೇ ಅಂಗಡಿಗಳನ್ನು ಜಾತ್ರಾ ಸಂದರ್ಭದಲ್ಲಿ ತೆರೆಯದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಿಸಿಟಿವಿ ಪಾಯಿಂಟ್‌ಗಳನ್ನು ಹೆಚ್ಚು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಅವರ ದೇವಾಲಯದ ಬೋರ್ಡ್ ಬದಲಾವಣೆ ಮಾಡಿ ಹೊಸ ಬೋರ್ಡ್ ಅಳವಡಿಕೆ ಮಾಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ವಿದ್ಯುತ್ ದೀಪಾಲಂಕಾರವನ್ನು ಅತ್ಯಂತ ಆಕರ್ಷಕವಾಗಿ ಮಾಡಬೇಕು. ಜಾತ್ರಾ ಮಹೋತ್ಸವದ ಒಂದು ವಾರದ ಮೊದಲೇ ದೀಪಾಲಂಕಾರ ಕೆಲಸ ಪೂರ್ಣಗೊಳಿಸಿರಬೇಕು ಎಂದು ತಿಳಿಸಿದರು.

ಹೆಚ್ಚಿನ ಭಕ್ತಾದಿಗಳು ದೇವಿ ದರ್ಶನ ಪಡೆಯಲು ಅನುಕೂಲವಾಗುವಂತೆ ಪೂಜೆ ಕಾರ್ಯಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಪೂರ್ವ ತಯಾರಿ ಮಾಡಿಕೊಂಡು ಕಡಿಮೆ ಅವಧಿಯಲ್ಲಿ ನಿಯಮ ಬದ್ಧವಾಗಿ ಅಮ್ಮನವರ ಪೂಜೆ ನೆರವೇರಿಸಿ ಸಹಕರಿಸುವಂತೆ ಪುರೋಹಿತರಲ್ಲಿ ಮನವಿ ಮಾಡಿದರು. ವಿಕಲಚೇತನರು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಒಂದು ವರ್ಷದೊಳಗಿನ ಮಕ್ಕಳೊಂದಿಗೆ ಬರುವ ತಾಯಂದಿರು ಅವರೊಂದಿಗೆ ದೇವಿ ದರ್ಶನಕ್ಕೆ ಆಗಮಿಸುವವರು ಬರುವವರೆಗೆ ಕಾಯ್ದು ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆಗೆ ಕ್ರಮವಹಿಸುವಂತೆ ಸೂಚಿಸಿದರು. ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಉಪಚರಿಸಲು ಪ್ರಾಥಮಿಕ ಚಿಕಿತ್ಸೆಗಾಗಿ ಅಗತ್ಯವಿರುವ ಔಷಧಿಗಳು ಹಾಗೂ ಉಪಕರಣಗಳನ್ನು ಇರಿಸಿಕೊಂಡು ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಜಿಲ್ಲಾಧಿಕಾರಿ ಅವರು ದೇವಿಗೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಲ್ಯಾಣಿಯ ಸುತ್ತಮುತ್ತ ಸ್ವಚ್ಚತೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ದೇವಿಗೆರೆ ಕಲ್ಯಾಣಿಯ ಸೌಂದರ್ಯಿಕರಣಕ್ಕೆ ಒಂದು ಕ್ರಿಯಾ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್, ತಹಸೀಲ್ದಾರ್‌ ಗೀತಾ ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.

ಫೋಟೋ:

ಶುಕ್ರವಾರ ಶ್ರೀ ಹಾಸನಾಂಬಾ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಲತಾ ಕುಮಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಘಾಟನೆಗೆ ಮುನ್ನವೇ ಕಟ್ಟಡ ಬಿರುಕು
ಬಸರವಳ್ಳಿ ಪಂಚಾಯಿತಿ ಹಸಲರ ವಾರ್ಡಿಗೆ ಬೇಕಿದೆ ಸಂಪರ್ಕ ಸೇತುವೆ