ಹೇಮಾವತಿ ಜಲಾಶಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುವಂತೆ ಸೂಚನೆ

KannadaprabhaNewsNetwork |  
Published : Jul 29, 2026, 01:45 AM IST
28ಕೆಎಂಎನ್ ಡಿ14 | Kannada Prabha

ಸಾರಾಂಶ

ಕಾಮಗಾರಿಯಿಂದ ನೀರಿನ ಸಂಗ್ರಹ ಮತ್ತು ಹರಿವಿನ ಪ್ರಮಾಣ ಹೆಚ್ಚಳವಾಗಲಿದೆ. ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶ ನೀರಾವರಿಯಾಗಲಿದೆ. ಜೊತೆಗೆ ನೀರು ಶೇಖರಣೆಯಿಂದ ಅಂತರ್ಜಲಮಟ್ಟ ಕೂಡ ಹೆಚ್ಚಲಿದೆ. ಇದರಿಂದ ರೈತರ ಕೊಳವೆ ಬಾವಿಗಳಲ್ಲೂ ನೀರು ಲಭ್ಯತೆ ಹೆಚ್ಚಾಗುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬೇಬಿ ಕೆರೆಗೆ ತೂಬು ನಿರ್ಮಾಣ, ಕಾಲುವೆ ಅಭಿವೃದ್ಧಿ, ಕೋಡಿ ಹಳ್ಳಕ್ಕೆ ರಕ್ಷಣಾ ಗೋಡೆ ಮತ್ತು ಹಾಗನಹಳ್ಳಿ ಪಿಕ್ ಅಫ್ ಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಯ 3.10 ಕೋಟಿ ರು. ಅನುದಾನದಲ್ಲಿ ಬೇಬಿ ಗ್ರಾಮ ಮತ್ತು ಹಾಗನಹಳ್ಳಿಯ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈ ಭಾಗದ ರೈತರ ಮನವಿಯಂತೆ ಚೆಕ್ ಡ್ಯಾಂ ಅಭಿವೃದ್ಧಿಗೆ ಚಾಲನೆ ನೀಡಿದ್ದು, ಆರು ತಿಂಗಳ ಕಾಲಾವಕಾಶದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಈ ಹಿಂದೆ ತಾಲೂಕಿನಲ್ಲಿ ನಿರ್ಮಾಣವಾಗಿರುವ ಕೆಲವು ಚೆಕ್ ಡ್ಯಾಂಗಳಿಗೆ ತೆರಳಿ ಗುಣಮಟ್ಟ ಪರಿಶೀಲಿಸಿದ್ದಾಗ ತೀರಾ ಕಳಪೆಯಾಗಿರುವುದು ಕಂಡು ಬಂದಿದೆ. ಈ ಚೆಕ್ ಡ್ಯಾಂಗಳನ್ನು ನಾವು ಪುನರ್ ನಿರ್ಮಾಣ ಮಾಡಿದ್ದೇವೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ನಿಗಧಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದರು.

ಕಾಮಗಾರಿಯಿಂದ ನೀರಿನ ಸಂಗ್ರಹ ಮತ್ತು ಹರಿವಿನ ಪ್ರಮಾಣ ಹೆಚ್ಚಳವಾಗಲಿದೆ. ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶ ನೀರಾವರಿಯಾಗಲಿದೆ. ಜೊತೆಗೆ ನೀರು ಶೇಖರಣೆಯಿಂದ ಅಂತರ್ಜಲಮಟ್ಟ ಕೂಡ ಹೆಚ್ಚಲಿದೆ. ಇದರಿಂದ ರೈತರ ಕೊಳವೆ ಬಾವಿಗಳಲ್ಲೂ ನೀರು ಲಭ್ಯತೆ ಹೆಚ್ಚಾಗುತ್ತದೆ ಎಂದರು.

ರೈತರ ಹೋರಾಟದ ಫಲವಾಗಿ ವಿಶ್ವೇಶ್ವರಯ್ಯ ನಾಲೆಗೆ ಕಟ್ಟು ಪದ್ಧತಿಯಡಿ ಈಗಾಗಲೇ ನೀರು ಹರಿಸಲಾಗುತ್ತಿದೆ. ಅದರಂತೆ ಹೇಮಾವತಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆ, ಹೇಮಾವತಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಭೆ ಕರೆದಿದ್ದು, ಮೇಲುಕೋಟೆ ವ್ಯಾಪ್ತಿ ಎಲ್ಲಾ ಕೆರೆ-ಕಟ್ಟೆಗಳನ್ನು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆ ಇದೆ. ಹೀಗಾಗಿ,ನಾಲೆಗಳ ಮೂಲಕ ಕ್ಷೇತ್ರದ ಮೇಲುಕೋಟೆ, ಚಿನಕುರಳಿ ಹಾಗೂ ದುದ್ದ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸಲು ಚರ್ಚಿಸಲಾಗಿದೆ ಎಂದರು.

ಪಟ್ಟಣದ ಒಳಚರಂಡಿ ಕಾಮಗಾರಿಗೆ ಜಮೀನು ನೀಡಿದ್ದ ರೈತರು ಪರಿಹಾರದ ಬಾಕಿ ಹಣಕ್ಕಾಗಿ ನ್ಯಾಯಾಲಯದಿಂದ ಮೋರೆ ಹೋಗಿ ಪುರಸಭೆ ಚರ ಆಸ್ತಿಗಳ ಜಪ್ತಿ ಮಾಡಿದ್ದಾರೆ. ವಾಸ್ತವವಾಗಿ ರೈತರ ದೊರಕಬೇಕಿರುವ ಪರಿಹಾರದ ಬಾಕಿ ಮೊತ್ತ ಈಗಾಗಲೇ ಸರಕಾರದಿಂದ ಬಿಡುಗಡೆಯಾಗಿದೆ. ಈ ಹಣವನ್ನು ಠೇವಣಿ ಇಡಲಾಗಿದೆ. ಸಂಬಂಧ ಪಟ್ಟ ಇಲಾಖೆ ಅಧೀನ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ಹಣ ಬಿಡುಗಡೆಗೊಳಿಸಲಾಗುವುದು ಕ್ರಮ ವಹಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವೇಳೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ವೈ.ಜಿ.ರಘು, ಅರಳಕುಪ್ಪೆ ರೂಪ, ಗಿರಿಯಾರಹಳ್ಳಿ ಶ್ರೀಮೂರ್ತಿ, ಬೇಬಿ ಗ್ರಾಮದ ಕುಮಾರ್, ಮಹೇಶ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದ 20,668 ಚದರ ಕಿ.ಮೀ.ಪರಿಸರ ಸೂಕ್ಷ್ಮ ಪ್ರದೇಶ: ಕೇಂದ್ರ
ಕಾರ್ಮಿಕರ ನಡುವೆ ನಡೆದ ಜಗಳ ಸಾವಿನಲ್ಲಿ ಅಂತ್ಯ