ಹರಪನಹಳ್ಳಿ: ನಮ್ಮ ಬದುಕಿನಲ್ಲಿ ಎದುರಾಗುವ ಅವಘಡಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ವಿಮೆ ಮಾಡಿಸಿಕೊಳ್ಳುವುದು ಅಗತ್ಯ. ಆಪತ್ಕಾಲದಲ್ಲಿ ವಿಮೆಯೇ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ನಮಿತಾ ಸಾನ್ವಿಕರ್ ಹೇಳಿದರು.
ಬ್ಯಾಂಕ್ ಗ್ರಾಹಕರು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಅಡಿ ವಾರ್ಷಿಕವಾಗಿ 436 ವಿಮೆ ಮೊತ್ತ ಪಾವತಿಸಿದರೆ, ಪಾವತಿಸಿದ ವರ್ಷದ ಅವಧಿಯೊಳಗೆ ಅಕಾಲಿಕ ನಿಧನರಾದರೆ ಮೃತರ ವಾರಸುದಾರರಿಗೆ ₹2 ಲಕ್ಷ ಮೊತ್ತದ ವಿಮಾ ಪರಿಹಾರ ದೊರೆಯಲಿದೆ ಎಂದು ಹೇಳಿದರು.
ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಸೇರಿ ಎರಡು ಮಹತ್ವದ ವಿಮಾ ಯೋಜನೆಗಳು ಕಡಿಮೆ ಪ್ರಿಮಿಯಮ್ ಮೊತ್ತದ್ದಾಗಿದ್ದು, ಗ್ರಾಹಕರು ಎರಡು ವಿಮಾ ಯೋಜನೆಗಳ ಬಗ್ಗೆ ಶಾಖೆಯ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ವಿಮೆ ಪಡೆಯಬಹುದಾಗಿದೆ ಎಂದು ಹೇಳಿದರು.ಹಿರಿಯ ವ್ಯವಸ್ಥಾಪಕ ಜಗದೀಶ್ ಮಾತನಾಡಿ, ಬ್ಯಾಂಕಿನಲ್ಲಿ ಈಗಾಗಲೇ ಹಲವರು ವಿಮಾ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದು, ಇಬ್ಬರು ಮೃತರ ಫಲಾನುಭವಿಗಳ ಕುಟುಂಬಕ್ಕೆ ₹2 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.
ಅಪಘಾತದಲ್ಲಿ ಈಚೆಗೆ ನಿಧನರಾದ ಇಲ್ಲಿನ ಶಿಂಗ್ರಿಹಳ್ಳಿ ನಿವಾಸಿ ಅಜಮರ ದೇವಪ್ಪ ಹಾಗೂ ಜಂಭುಲಿಂಗನಹಳ್ಳಿ ನಿವಾಸಿ ದೇವಮ್ಮ ಅವರ ಕುಟುಂಬಕ್ಕೆ ಪ್ರಾದೇಶಿಕ ವ್ಯವಸ್ಥಾಪಕರಾದ ನಮಿತಾ ಸಾನ್ವಿಕರ್ ಅವರು ಪಿಎಂಜಿಜಿಬಿವೈ ವಿಮೆಯ ₹2 ಲಕ್ಷ ಮೊತ್ತದ ಚೆಕ್ ವಿತರಿಸಿದರು.