ಕೋಟೆನಾಡಿನಲ್ಲಿ ವೈಚಾರಿಕ ಸಾಂಸ್ಕೃತಿಕ ಪಾದಯಾತ್ರೆ

KannadaprabhaNewsNetwork |  
Published : Sep 29, 2025, 01:02 AM IST
ನಗರದಲ್ಲಿ ಇಂದು ಬಸವ ಸಂಸ್ಕೃತಿ ಅಭಿಯಾನದ ನಿಮಿತ್ತ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ಚಿತ್ರದುರ್ಗ ನಗರದಲ್ಲಿ ಭಾನುವಾರ ಬಸವ ಸಂಸ್ಕೃತಿ ಅಭಿಯಾನದ ನಿಮಿತ್ತ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತ ಚಿತ್ರದುರ್ಗ

ಮಧ್ಯ ಕರ್ನಾಟಕದ ಕೋಟೆನಾಡಿನಲ್ಲಿ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ವೈಚಾರಿಕ ಮತ್ತು ಸಾಂಸ್ಕೃತಿಕ ಪಾದಯಾತ್ರೆಗೆ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಚಾಲನೆ ನೀಡಿದರು.

ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಸಾರುವ ಈ ಮೆರವಣಿಗೆಗೆ ನಗರದ ಜನತೆ ಉತ್ತಮವಾಗಿ ಸ್ಪಂದಿಸಿದರು. ಪಾದಯಾತ್ರೆಯು ನಗರದ ನೀಲಕಂಠೇಶ್ವರ ದೇವಸ್ಥಾನದ ಆವರಣದಿಂದ ಹೊರಟು, ಪ್ರಮುಖ ರಸ್ತೆಗಳಾದ ಗಾಂಧಿವೃತ್ತ, ಮುಖ್ಯರಸ್ತೆ, ಪ್ರವಾಸಿ ಮಂದಿರ, ಅಂಬೇಡ್ಕರ್ ವೃತ್ತದ ಮೂಲಕ ಬಸವ ಮಂಟಪ, ದೊಡ್ಡಪೇಟೆ, ಚಿಕ್ಕಪೇಟೆ ಮೂಲಕ ಸಾಗಿ ನೀಲಕಂಠೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮೆರವಣಿಗೆಯುದ್ದಕ್ಕೂ ಬಸವ ತತ್ತ್ವ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಬಸವಾದಿ ಶರಣರ ಭಾವ ಚಿತ್ರಗಳು ಮತ್ತು ಜೀವನ ಸಂದೇಶಗಳನ್ನು ಸಾರುವ ವಿವಿಧ ಸ್ತಬ್ಧ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಸ್ತಬ್ಧ ಚಿತ್ರಗಳು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದವು. ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವದ ಈ ಪಾದಯಾತ್ರೆಯು, ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳನ್ನು ಮತ್ತೊಮ್ಮೆ ಜನಮಾನಸಕ್ಕೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಬಸವ ತತ್ವ ಸಾರುವ ವಿವಿಧ ಸ್ತಬ್ಧ ಚಿತ್ರಗಳು, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ನಂದಿಕೋಲು ಹಾಗೂ ವಿವಿಧ ಸಾಂಸ್ಕೃತಿಕ ಕಲಾ ಮೇಳಗಳು ವಿವಿಧ ವಾದ್ಯಗಳ ತಂಡಗಳು ಭಾಗವಹಿಸಿದ್ದವು.

ಈ ಅಭಿಯಾನದಲ್ಲಿ ಶ್ರೀ ತರಬಾಳು ಬೃಹನ್ಮಠ ಶಾಖಾ ಮಠವಾದ ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾ ಸ್ವಾಮಿಗಳು, ಡಾ.ಬಸವಕುಮಾರ ಸ್ವಾಮೀಜಿ, ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಡಾ.ಬಸವಮೂರ್ತಿ ಮಾದಾರ ಚೆನ್ನಯ ಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು, ಮಾತೆ ಗಂಗಾದೇವಿ, ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನ ಬಸವ ಸ್ವಾಮಿಗಳು, ಹರಗುರುಚರ ಮೂರ್ತಿಗಳು ಜಿ.ಎಸ್.ಅನೀತ್, ಕೆ.ಎಂ.ವೀರೇಶ್, ಶಂಕರಮೂರ್ತಿ, ಸುರೇಶ್ ಬಾಬು, ಹಾಗೂ ವೀರಶೈವ ಸಮಾಜದ ಹಿರಿಯ ಮುಖಂಡರು ಪಾದಯಾತ್ರೆ ಭಾಗವಹಿಸಿದ್ದರು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ