- ಅಂಬೇಡ್ಕರ್ 69ನೇ ಮಹಾಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ರುದ್ರಪ್ಪ ಅಭಿಮತ
ಕನ್ನಡಪ್ರಭ ವಾರ್ತೆ ಹರಿಹರ
ದಲಿತ ಸಂಘಟನೆಗಳ ಕಾರ್ಯಕರ್ತರು ಬೌದ್ಧಿಕ ಜ್ಞಾನ ಬೆಳೆಸಿಕೊಂಡಲ್ಲಿ ಮಾತ್ರ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪ್ರೊ. ಬಿ.ಕೃಷ್ಣಪ್ಪ ಅವರ ಅನುಯಾಯಿಗಳು ಎಂದು ಹೇಳಲು ಅರ್ಹರಾಗುತ್ತಾರೆಂದು ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಅಭಿಪ್ರಾಯಪಟ್ಟರು.ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕಗಳ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 69ನೇ ಮಹಾಪರಿನಿಬ್ಬಾಣ ನಿಮಿತ್ತ ನಗರದ ಹೊರವಲಯದ ಮೈತ್ರಿವನದಲ್ಲಿ ಶನಿವಾರ ಆಯೋಜಿಸಿದ್ದ ‘ಮೌಢ್ಯ ವಿರೋಧಿ ಪರಿವರ್ತನೆ, ವೈಚಾರಿಕ ಬೆಳಕಿನೆಡೆಗೆ ಸಾಗೋಣ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೊಪ್ಪಳ ಭಾಗದಲ್ಲಿ ಕ್ಷೌರ ಮಾಡುವ ವಿಚಾರದಲ್ಲಿ ದಲಿತ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಸ್ಥಳಕ್ಕೆ ಆ ಭಾಗದ ಡಿಸಿ, ಎಸಿ, ತಹಶೀಲ್ದಾರ್ ಭೇಟಿ ನೀಡಿಲ್ಲ, ಈ ಭಾಗದ ಯಾವ ದಲಿತ ಸಂಘಟನೆಗಳು ಈ ವಿಷಯವನ್ನಿಟ್ಟುಕೊಂಡು ಹೋರಾಟ ಮಾಡಿದ್ದೀರಿ, ಸ್ಥಳಕ್ಕೆ ಹೋಗಿ ಬಂದಿದ್ದೀರಿ ಎಂದು ಪ್ರಶ್ನಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಹಳೆಯ ಕೋರ್ಟ್ ನಿವೇಶನದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಹಾಗೂ ಪ್ರೊ.ಬಿ.ಕೃಷ್ಣಪ್ಪರ ಸ್ಮಾರಕ ನಿರ್ಮಾಣದ ವಿಷಯವನ್ನು ಜಿಲ್ಲಾಧಿಕಾರಿ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ವಿಜಯಕುಮಾರ ಎಚ್.ಜೆ. ಹಾಗೂ ನಗರಸಭೆ ಮಾಜಿ ಸದಸ್ಯ ಎಂ.ಬಿ.ಅಣ್ಣಪ್ಪ ಮಾತನಾಡಿ, ಧರ್ಮಾಚರಣೆ ಮತ್ತು ಮೌಢ್ಯತೆ ಭಿನ್ನವಾಗಿದೆ. ಧರ್ಮದ ಹೆಸರಲ್ಲಿ ಮೌಢ್ಯ, ಕಂದಾಚಾರ ಆಚರಣೆಗಳ ಬಿಟ್ಟು ವೈಜ್ಞಾನಿಕತೆ, ವೈಚಾರಿಕತೆಗೆ ಬೆಳೆಸಿಕೊಳ್ಳಬೇಕು ಎಂದರು.
- - -
ಮೈತ್ರಿವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾಪರಿನಿಬ್ಬಾಣ ದಿನ ಆಚರಿಸಲಾಯಿತು.