ಕನ್ನಡಪ್ರಭ ವಾರ್ತೆ ಯಾದಗಿರಿ
ಶುಕ್ರವಾರ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಯಾದಗಿರಿ ಬಂದ್ ಹಾಗೂ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತರ ಹಿತಾಸಕ್ತಿ ಕಾಪಾಡುವಲ್ಲಿ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ರೈತರು ಬೆಳೆ ಉಳಿಸಿಕೊಳ್ಳಲು ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಕೃಷ್ಣಾ ನದಿಯಲ್ಲಿ ನೀರಿದ್ದರೂ ಜಿಲ್ಲೆಯ ರೈತರಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೆಲಂಗಾಣಕ್ಕೆ ನೀರು ಬಿಡಲು ಸಾಧ್ಯವಾದರೆ ನಮ್ಮ ರೈತರಿಗೆ ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ ರಾಜುಗೌಡ, ಕುಡಿಯುವ ನೀರಿನ ಉದ್ದೇಶದಿಂದ ತೆಲಂಗಾಣಕ್ಕೆ ನೀರು ಹರಿಸಲಾಗಿದೆ ಎಂಬ ಸಮರ್ಥನೆಯನ್ನು ಒಪ್ಪಲು ಸಾಧ್ಯವಿಲ್ಲ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ರೈತರ ಹಿತದೃಷ್ಟಿಯಿಂದ ಮರುಪರಿಶೀಲಿಸಲು ಅವಕಾಶವಿದೆ. ಪ್ರಸ್ತುತ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.ಅ.15ರಂದು ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ 2026-27ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆಯ ದಾಖಲೆಗಳನ್ನು ಪ್ರದರ್ಶಿಸಿದ ಅವರು, ವಿವಿಧ ಜಿಲ್ಲೆಗಳಿಗೆ ಕುಡಿಯುವ ನೀರು, ಕೆರೆ ತುಂಬಿಸುವ ಯೋಜನೆ ಹಾಗೂ ಇತರ ಉದ್ದೇಶಗಳಿಗೆ ನೀರು ಕಾಯ್ದಿರಿಸಿರುವ ಕುರಿತು ವಿವರಿಸಿದರು. ವಿಜಯಪುರ ಮತ್ತು ಬಾಗಲಕೋಟೆ ಭಾಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕಾಯ್ದಿರಿಸಲಾಗಿದೆ. ಯಾದಗಿರಿ ಜಿಲ್ಲೆಯ ರೈತರ ಬೆಳೆಗಳ ರಕ್ಷಣೆಗೆ ಅಗತ್ಯವಿರುವ ನೀರನ್ನು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಆಡಳಿತ ಪಕ್ಷದ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರ ಸಮಸ್ಯೆ ಕುರಿತು ಕೇವಲ ಸಭೆ ನಡೆಸುವುದು, ಮನವಿ ಪತ್ರ ಸಲ್ಲಿಸುವುದರಿಂದ ಪ್ರಯೋಜನವಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರಿ ನ.30ರವರೆಗೆ ಕಾಲುವೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು. ರೈತರ ಸಂಕಷ್ಟ ನಿರ್ಲಕ್ಷಿಸಿದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.
ಅರಿಕೇರಿ ಕ್ರಾಸ್ ಬಳಿ ನೀರಿಗಾಗಿ ರೈತರು ನಡೆಸಿದ ಪ್ರತಿಭಟನೆ ಉಲ್ಲೇಖಿಸಿದ ಅವರು, ಬೆಳೆಗಳು ಒಣಗುತ್ತಿರುವುದರಿಂದ ಕಂಗಾಲಾದ ರೈತರು ಮುಳ್ಳಿನ ಮೇಲೆ ಕುಳಿತು ಪ್ರತಿಭಟನೆ ನಡೆಸುವ ಪರಿಸ್ಥಿತಿ ಎದುರಾಗಿದೆ. ರೈತರ ನೋವನ್ನು ಕಂಡಾಗ ಸುಮ್ಮನಿರಲು ಸಾಧ್ಯವಿಲ್ಲ. ಅಧಿಕಾರದಲ್ಲಿರಲಿ, ಇಲ್ಲದಿರಲಿ ರೈತರ ಪರವಾಗಿ ಹೋರಾಟ ನಡೆಸುವುದು ತಮ್ಮ ಕರ್ತವ್ಯ. ರೈತರ ಹಿತಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ ಎಂದು ಭಾವುಕರಾಗಿ ನುಡಿದರು.
ಬಂದ್‌ಗೆ ಬೆಂಬಲ ನೀಡಿದ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಹಿತರಕ್ಷಣಾ ಸಮಿತಿಗಳು, ನ್ಯಾಯವಾದಿಗಳು, ವರ್ತಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ರಾಜುಗೌಡ ಕೃತಜ್ಞತೆ ಸಲ್ಲಿಸಿದರು. ರೈತರ ಹಿತಕ್ಕಾಗಿ ಯಾವುದೇ ಸಂಘಟನೆ ಹೋರಾಟಕ್ಕೆ ಕರೆ ನೀಡಿದರೂ ತಮ್ಮ ಬೆಂಬಲ ಸದಾ ಇರಲಿದೆ ಎಂದು ಭರವಸೆ ನೀಡಿದರು.